ಮಂಗಳೂರು: ಅತಿರೇಕಕ್ಕೆ ತಿರುಗಿದ ಹಾಸ್ಟೆಲ್ ವಿದ್ಯಾರ್ಥಿಗಳ ಹೊಡೆದಾಟ

Update: 2021-12-03 10:22 GMT

ಮಂಗಳೂರು, ಡಿ.3: ನಗರದ ಗುಜ್ಜರಕೆರೆ ಸಮೀಪದಲ್ಲಿರುವ ಖಾಸಗಿ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲೊಂದರ ವಿದ್ಯಾರ್ಥಿಗಳ ಎರಡು ತಂಡಗಳ ನಡುವಿನ ಗಲಾಟೆಯು ತಾರಕಕ್ಕೇರಿ ಸ್ಥಳೀಯರ ಪ್ರತಿಭಟನೆಗೆ ಕಾರಣವಾದ ಘಟನೆ ನಡೆದಿದೆ.

ನಗರದ ಪ್ರತಿಷ್ಠಿತ ಖಾಸಗಿ ಪದವಿ ಕಾಲೇಜೊಂದರ ವಿದ್ಯಾರ್ಥಿಗಳ ವಸತಿ ನಿಲಯದ ವಿದ್ಯಾರ್ಥಿಗಳ ತಂಡಗಳ ನಡುವೆ ಗುರುವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಪ್ರಕರಣ ಠಾಣೆ ಮೆಟ್ಟಿಲೇರಿತ್ತು. ಈ ಸಂಬಂಧ ವಿಚಾರಣೆಗೆಂದು ಪೊಲೀಸರು ರಾತ್ರಿ ವೇಳೆ ಹಾಸ್ಟೆಲ್‌ಗೆ ನುಗ್ಗಿ ಅಮಾಯಕ ವಿದ್ಯಾರ್ಥಿಗಳ ಮೇಲೆ ದೌರ್ಜನ್ಯ ಎಸಗಿರುವುದಾಗಿ ಹಾಸ್ಟೆಲ್ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ನಡುವೆ ವಿದ್ಯಾರ್ಥಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ವ್ಯಕ್ತವಾಗಿದೆ.

ಇಂದು ಬೆಳಗ್ಗೆ ಗುಜ್ಜರಕೆರೆಯ ಹಾಸ್ಟೆಲ್ ಎದುರು ಜಮಾಯಿಸಿದ ಸ್ಥಳೀಯರು, ಜನಪ್ರತಿನಿಧಿಗಳು ಹಾಸ್ಟೆಲನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರನ್ನು ಸುತ್ತುವರಿದ ಸ್ಥಳೀಯರು, ಪರಿಸರದಲ್ಲಿ ಹಾಸ್ಟೆಲ್‌ನ ವಿದ್ಯಾರ್ಥಿಗಳ ಅನುಚಿತ ವರ್ತನೆಯಿಂದ ಹಲವು ಸಮಯದಿಂದ ತೊಂದರೆ ಅನುಭವಿಸುತ್ತಿರುವುದಾಗಿ ಹೇಳಿದರಲ್ಲದೆ, ಹುಡುಗರ ಹಾಸ್ಟೆಲನ್ನು ತಕ್ಷಣ ಸ್ಥಳಾಂತರಿಸಬೇಕೆಂದು ಆಗ್ರಹಿಸಿದರು. ಹಾಸ್ಟೆಲ್ ಸ್ಥಳಾಂತರಿಸುವ ನಿರ್ಧಾರವಾಗುವವರೆಗೆ ತಾವು ಸ್ಥಳದಲ್ಲೇ ಪ್ರತಿಭಟನೆ ನಡೆಸುವುದಾಗಿ ಪಟ್ಟು ಹಿಡಿದ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಜನ ಸಮೂಹವನ್ನು ಪೊಲೀಸ್ ಆಯುಕ್ತರು ಸುಮಾರು ಒಂದೂವರೆ ಗಂಟೆ ಕಾಲ ಸ್ಥಳದಲ್ಲಿ ಉಪಸ್ಥಿತರಿದ್ದು, ಮನವೊಲಿಸಿದರು. ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಸ್ಥಳೀಯರ ಸಮಸ್ಯೆಗಳ ಕುರಿತು ಹಾಸ್ಟೆಲ್ ಆಡಳಿತ ಮಂಡಳಿಯ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳುವ ಜತೆಗೆ ಪ್ರಕರಣದ ಕುರಿತು ಕೂಲಂಕುಷ ತನಿಖೆಯ ಭರವಸೆಯನ್ನು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ನೀಡಿದರು. ಈ ಸಂದರ್ಭ ಸ್ಥಳಕ್ಕಾಮಿಸಿದ ಶಾಸಕ ವೇದವ್ಯಾಸ ಕಾಮತ್ ಕೂಡಾ ಸ್ಥಳೀಯರಿಗೆ ಸೂಕ್ತ ಕ್ರಮದ ಭರವಸೆ ನೀಡಿದರು.

ಮಹಿಳಾ ಹಾಸ್ಟೆಲ್‌ನ ವಿದ್ಯಾರ್ಥಿನಿಯರಿಂದ ಯಾವುದೇ ತೊಂದರೆ ಆಗುತ್ತಿಲ್ಲ. ಆದರೆ ಬಾಯ್ಸ್ ಹಾಸ್ಟೆಲ್‌ನ ಯುವಕರು ರಾತ್ರಿ ಹೊತ್ತು ಓಡಾಡುವುದು, ಅತೀ ವೇಗದಿಂದ ಬೈಕ್ ಚಲಾಯಿಸುವುದು, ರೂಂಗಳಲ್ಲಿ ಕಿರುಚಾಡುವುದು, ಅನುಚಿತವಾಗಿ ವರ್ತಿಸುವ ಬಗ್ಗೆಯೂ ಸ್ಥಳೀಯರು ದೂರಿದ್ದಾರೆ. ಅದರ ಸತ್ಯಾಸತ್ಯತೆಯನ್ನೂ ತನಿಖೆ ಮೂಲಕ ಪರಿಶೀಲಿಸಲಾಗುವುದು. ದೀಪಾವಳಿ ಸಂದರ್ಭ ವಿದ್ಯಾರ್ಥಿಗಳು ಹಾಸ್ಟೆಲ್ ಕಟ್ಟಡದ ಮೇಲಿನಿಂದ ಪಟಾಕಿ ಸಿಡಿಸಿ ಅಲ್ಲಿನ ಮನೆಗಳ ಮೇಲೂ ಎಸೆದ ಪ್ರಕರಣಕ್ಕೆ ಸಂಬಂಧಿಸಿ ಇಲ್ಲಿ ಈ ಹಿಂದೆ ಗೊಂದಲ ಸೃಷ್ಟಿಯಾಗಿತ್ತು. ಆ ಸಂದರ್ಭ ಸ್ಥಳೀಯರು ಮಾತುಕತೆ ನಡೆಸಿ ವಿದ್ಯಾರ್ಥಿಗಳು ಎಂಬ ದೃಷ್ಟಿಯಿಂದ ನಾವು ಸುಮ್ಮನಾಗಿದ್ದೆವು ಸ್ಥಳೀಯರು ಪೊಲೀಸ್ ಆಯುಕ್ತರೆದುರು ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ಜಿಲ್ಲೆ, ರಾಜ್ಯಗಳಿಂದ ವಿದ್ಯಾರ್ಥಿಗಳು ತಮ್ಮ ಹಾಗೂ ಪೋಷಕರ ಕನಸು ಈಡೇರಿಸುವ ಉದ್ದೇಶದಿಂದ ವಿದ್ಯಾಭ್ಯಾಸಕ್ಕಾಗಿ ಇಲ್ಲಿ ಆಗಮಿಸುತ್ತಾರೆ. ಇಂತಹ ಘಟನೆಗಳು ನಡೆಯಬಾರದು. ಇಂತಹ ಘಟನೆಗಳು ಮರುಕಳಿಸದ ರೀತಿಯಲ್ಲಿ ಸಂಬಂಧಪಟ್ಟ ಕಾಲೇಜುಗಳು ಕ್ರಮ ವಹಿಸುವಂತೆ ಚರ್ಚಿಸಲಾಗುವುದು. ಹಾಸ್ಟೆಲ್ ಸ್ಥಳಾಂತರಕ್ಕೆ ಸಂಬಂಧಿಸಿ ಇಲ್ಲಿನ ಸ್ಥಳೀಯ ಪ್ರತಿನಿಧಿಗಳು, ಕಾಲೇಜು ಆಡಳಿತ ಮಂಡಳಿ ಪ್ರತಿನಿಧಿಗಳು ಸೇರಿ ಚರ್ಚಿಸಬೇಕಾಗಿದೆ. ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದು, ಇಲ್ಲಿನ ವಾಸ್ತವಾಂಶದ ಬಗ್ಗೆ ಪಾರದರ್ಶಕವಾಗಿ ತಿಳಿಸುವ ಕೆಲಸ ಮಾಡಲಿದ್ದೇವೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಭಿಪ್ರಾಯಿಸಿದ್ದಾರೆ.


ಗುಜ್ಜರಕೆರೆಯಲ್ಲಿರುವ ಯೆನೆಪೊಯ ಸಂಸ್ಥೆಗೆ ಸೇರಿದ ಹಾಸ್ಟೆಲ್ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಗುರುವಾರ ರಾತ್ರಿ ಸ್ಥಳೀಯ ಕಾರ್ಪೊರೇಟರ್ ಮನೆ ಎದುರು ಹೊಡೆದಾಡಿ ರಕ್ತ ಗಾಯ ಮಾಡಿಕೊಂಡಿದ್ದಾರೆ. ಪಾಂಡೇಶ್ವರ ಠಾಣೆಯಲ್ಲಿ ವಿದ್ಯಾರ್ಥಿಗಳ ದೂರಿನ ಮೇರೆಗೆ ಎರಡು ಪ್ರಕರಣ ದಾಖಲಾಗಿತ್ತು. ಪ್ರಕರಣದ ಆರೋಪಿತ ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲು ಪೊಲೀಸ್ ಸಿಬ್ಬಂದಿ ಹಾಸ್ಟೆಲ್‌ಗೆ ಆಗಮಿಸಿದ್ದ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ದೊಡ್ಡ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದ ಕಾರಣ ಪೊಲೀಸರ ಜತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪವಾಗಿದ್ದರೆ, ಅದೇ ವೇಳೆ ವಿದ್ಯಾರ್ಥಿಗಳು ಕೂಡಾ ತಮ್ಮ ಅಮಾಯಕರ ಸ್ನೇಹಿತರನ್ನು ಪೊಲೀಸರು ಎಳೆದೊಯ್ದಿದ್ದಾರೆಂದು ಆರೋಪಿಸಿದ್ದಾರೆ. ಅದೇರೀತಿ ಕಾಲೇಜು ಆಡಳಿತ ಪ್ರತಿನಿಧಿಗಳು ಹೇಳಿರುವಂತೆ ಹಾಸ್ಟೆಲ್ ಒಳಗೆ ಪೊಲೀಸರನ್ನು ಹೇಗೆ ಬಿಟ್ಟಿದ್ದು ಎಂದು ಸೆಕ್ಯೂರಿಟಿ ರೂಂನ ಗಾಜು, ಅಲ್ಲಿದ್ದ ಸಿಸ್ಟಮ್ಸ್ ಸೇರಿ ಅಲ್ಲಿದ್ದ ವಸ್ತುಗಳನ್ನು ವಿದ್ಯಾರ್ಥಿಗಳು ಹಾಳುಗೆಡವಿದ್ದಾರೆನ್ನಲಾಗಿದೆ. ಸೆಕ್ಯೂರಿಟಿ ರೂಂ ಎದುರಿದ್ದ ಕುರ್ಚಿಗಳನ್ನು, ಹಾಸ್ಟೆಲ್ ಕಟ್ಟಡದ ಮೇಲಿನಿಂದ ಕೆಲವೊಂದು ವಸ್ತುಗಳನ್ನು ಪೊಲೀಸರ ಮೇಲೆ ಎಸೆದಿರುವ ಬಗ್ಗೆಯೂ ದೂರು ಬಂದಿದೆ. ರಾತ್ರಿ ಘಟನೆ ನಡೆಯುತ್ತಿದ್ದ ಸಂದರ್ಭ ಸ್ಥಳೀಯರು ಹೊರಗಡೆ ನೋಡುತ್ತಿದ್ದಾಗ ಮೇಲಿನಿಂದ ತಮ್ಮ ಮೇಲೂ ಕಲ್ಲು, ವಸ್ತುಗಳನ್ನು ಎಸೆದಿರುವುದಾಗಿಯೂ ದೂರಲಾಗಿದೆ. ವಿದ್ಯಾರ್ಥಿಗಳನ್ನು ಪೊಲೀಸರು ಕರೆದೊಯ್ಯುವ ವೇಳೆ ಹೊರಗಡೆ ಬಂದ ವಿದ್ಯಾರ್ಥಿಗಳ ಜತೆ ಅಲ್ಲಿದ್ದ ಸಾರ್ವಜನಿಕರು ಅನುಚಿತವಾಗಿ ವರ್ತಿಸಿದ್ದಾರೆಂಬ ಆರೋಪವೂ ವ್ಯಕ್ತವಾಗಿದೆ. ನಿನ್ನೆ ರಾತ್ರಿ ವೇಳೆಯಲ್ಲೂ ನಾನು ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಇಂದು ಕೂಡಾ ಭೇಟಿ ನೀಡಿ ಕಾಲೇಜಿನ ಪ್ರಾಂಶುಪಾಲರು, ಸ್ಥಳೀಯ ಜನಪ್ರತಿನಿಧಿಗಳು, ಸ್ಥಳೀಯರ ಜತೆಗೂ ಮಾತುಕತೆ ನಡೆಸಲಾಗಿದೆ. ನಿನ್ನೆ ನಡೆದ ಘಟನೆಗಳಿಗೆ ಸಂಬಂಧಿಸಿ ಎರಡು ಪ್ರಕರಣ ದಾಖಲಾಗಿದೆ. ಇಬ್ಬರು ಪೊಲೀಸರಿಗೆ ಹಲ್ಲೆಯಾಗಿದ್ದು, ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹಲವು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆಯಲಾಗಿದೆ. ಅವರ ಪಾತ್ರವನ್ನು ಪರಿಗಣಿಸಿ ಸೂಕ್ತ ಕ್ರಮ ವಹಿಸಲಾಗುವುದು. ಒಟ್ಟು ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಲಾಗುವುದು.

-ಎನ್. ಶಶಿಕುಮಾರ್, ಪೊಲೀಸ್ ಆಯುಕ್ತರು, ಮಂಗಳೂರು.


ಪ್ರಕರಣದ ಕುರಿತು ತಪ್ಪಿತಸ್ಥ ವಿದ್ಯಾರ್ಥಿಗಳ ಮೇಲೆ ಶಿಸ್ತು ಕ್ರಮ
ಕಾಲೇಜಿನಲ್ಲಿ ಶಿಸ್ತು ಕಾಪಾಡುವ ನಿಟ್ಟಿನಲ್ಲಿ ಸಮಿತಿ ಇದ್ದು, ಈ ಪ್ರಕರಣದಲ್ಲಿಯೂ ಸೂಕ್ತ ಕ್ರಮ ವಹಿಸಲಾಗುವುದು. ವಿದ್ಯಾರ್ಥಿಗಳ ನಡುವೆ ಇಂತಹ ಘರ್ಷಣೆಗಳು ನಡೆದಾಗ ನಮ್ಮ ಸಮಿತಿಯಿಂದ ತನಿಖೆ ಮಾಡಿ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಲಾಗುತ್ತದೆ. ನಿನ್ನೆ ನಡೆದ ಘಟನೆಗೆ ಮೂಲ ಕಾರಣವಾಗಿದ್ದ ಓರ್ವ ವಿದ್ಯಾರ್ಥಿಯನ್ನು ಈ ಹಿಂದೆಯೂ ಸಸ್ಪೆಂಡ್ ಮಾಡಲಾಗಿತ್ತು. ಆದರೆ ಆತನ ವಿದ್ಯಾಭ್ಯಾಸದ ದೆಸೆಯಿಂದ ಮತ್ತೆ ಅವನಿಗೊಂದು ಅವಕಾಶ ನೀಡಲಾಗಿತ್ತು. ಈಗ ಮತ್ತೆ ಆತನನ್ನು ಕಾಲೇಜಿನಿಂದ ಸಸ್ಪೆಂಡ್ ಮಾಡಲಾಗುವುದು.

-ಡಾ. ಪರ್ವದಮರ್ದಿನಿ, ಪ್ರಾಂಶುಪಾಲರು, ಯೆನೆಪೊಯ ಕಲಾ, ವಿಜ್ಞಾನ, ವಾಣಿಜ್ಯ ಆಡಳಿತ ನಿರ್ವಹಣೆ ಕಾಲೇಜು, ಮಂಗಳೂರು.


ಈ ಹಿಂದೆ ಕೆಲವು ಬಾರಿ ಇಂತಹ ಘಟನೆಗಳು ಆದಾಗಲೂ ನಾವು ಆಡಳಿತ ಮಂಡಳಿ ಜತೆ ಮಾತನಾಡಿ ಮಕ್ಕಳು ಎಂಬ ಕಾರಣಕ್ಕೆ ಸುಮ್ಮನಾಗಿದ್ದೆವು. ಆದರೆ ನಿನ್ನೆಯ ಘಟನೆ ಅತಿರೇಕಕ್ಕೆ ತಿರುಗಿದೆ. ನಿನ್ನೆ ಇಲ್ಲಿ ವಿದ್ಯಾರ್ಥಿಗಳು ಹೊಡೆದಾಡಿಕೊಂಡಿದ್ದಲ್ಲದೆ ಕಲ್ಲು ತೂರಾಟ ನಡೆಸಿ ಸ್ಥಳೀಯರಲ್ಲಿ ಆತಂಕದ ವಾತಾವರಣ ಸೃಷ್ಟಿಸಿದ್ದಾರೆ. ಹಾಗಾಗಿ ಹಾಸ್ಟೆಲ್ ಸ್ಥಳಾಂತರ ಮಾಡಬೇಕೆಂಬುದು ನಮ್ಮ ಆಗ್ರಹ.

- ಭಾನುಮತಿ, ಸ್ಥಳೀಯ ಕಾರ್ಪೊರೇಟರ್

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News