ಒಮೈಕ್ರಾನ್ ನೆಪದಲ್ಲಿ ಲಸಿಕೆ ಹೇರುತ್ತಿರುವುದು ಅವೈಜ್ಞಾನಿಕ, ಅಪಾಯಕಾರಿ, ಅನ್ಯಾಯ: ಡಾ. ಶ್ರೀನಿವಾಸ ಕಕ್ಕಿಲ್ಲಾಯ

Update: 2021-12-03 12:10 GMT
 ಡಾ. ಶ್ರೀನಿವಾಸ ಕಕ್ಕಿಲ್ಲಾಯ

ಮಂಗಳೂರು: ಹೊಸ ರೂಪಾಂತರಿ ಕೊರೋನ ವೈರಸ್ ರಾಜ್ಯದಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಇಂದು ಹೊಸ ಮಾರ್ಗಸೂಚಿ ಪ್ರಕಟಿಸಿರುವ ರಾಜ್ಯ ಸರಕಾರ ಶಾಲಾ ಮಕ್ಕಳ ಪೋಷಕರು ಕಡ್ಡಾಯವಾಗಿ ಲಸಿಕೆ ಪಡೆದಿರಬೇಕು ಎಂದು ಹೇಳಿದೆ. ಈ ಕ್ರಮವನ್ನು ಖ್ಯಾತ ವೈದ್ಯಕೀಯ ತಜ್ಞ ಡಾ. ಶ್ರೀನಿವಾಸ ಕಕ್ಕಿಲ್ಲಾಯ ಖಂಡಿಸಿದ್ದು, ಈ ಬಗ್ಗೆ ಅವರು ನೀಡಿರುವ ಹೇಳಿಕೆ ಇಲ್ಲಿದೆ.

ಸರಕಾರವು ಮೊದಲ ದಿನದಿಂದಲೂ ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ಅವೈಜ್ಞಾನಿಕವಾದ, ಅತಾರ್ಕಿಕವಾದ, ಅಮಾನವೀಯವಾದ ಕ್ರಮಗಳನ್ನೇ ಕೈಗೊಂಡಿದೆ. ಕೊರೋನ ಸೋಂಕು ಹರಡಲಾರಂಭಿಸುವ ಮೊದಲೇ ಭೀಕರ ಲಾಕ್ ಡೌನ್, ಹರಡುವಾಗ ಲಾಕ್ ಡೌನ್ ತೆರವು, ಯಾವ ಸಮಸ್ಯೆಗಳೇ ಆಗದ ಮಕ್ಕಳಿಗೆ ಒಂದೂವರೆ ವರ್ಷ ಶಾಲೆ-ಕಾಲೇಜು ಬಂದ್ ಮಾಡಿ, ಕೊರೋನ ಸೋಂಕಿತರಿಗೆ ಅಗತ್ಯವೇ ಇಲ್ಲದಿದ್ದ ಪರೀಕ್ಷೆಗಳನ್ನೂ, ಚಿಕಿತ್ಸೆಗಳನ್ನೂ ಮಾಡಿಸಿ, ಅಗತ್ಯವಿದ್ದ ಆಕ್ಸಿಜನ್ ಕೊಡದೆ ಸತಾಯಿಸಿ, ಆ ಮೇಲೆ ಲಸಿಕೆ ನೀಡುವಿಕೆಯಲ್ಲೂ ಅವೈಜ್ಞಾನಿಕ ನೀತಿಗಳನ್ನು ಮಾಡಿದೆ. 

ಒಮ್ಮೆ ಕೊರೋನ ಸೋಂಕು ತಗಲಿ ವಾಸಿಯಾದವರಲ್ಲಿ ಬಲಿಷ್ಠ ರೋಗರಕ್ಷಣೆ ಇರುತ್ತದೆ, ಒಮೈಕ್ರಾನ್ ಸೇರಿದಂತೆ ಎಲ್ಲಾ ರೂಪಾಂತರಗಳನ್ನು ಎದುರಿಸುವ ಸಾಮರ್ಥ್ಯವಿರುತ್ತದೆ, ಅವರಲ್ಲಿ ಮರು ಸೋಂಕಿನ ಸಾಧ್ಯತೆಗಳು ತೀರಾ ಅತ್ಯಲ್ಪ, ಮತ್ತು ರಾಜ್ಯದಲ್ಲಿ 80%ಕ್ಕೂ ಹೆಚ್ಚು ಜನರು ಹೀಗೆ ಸೋಂಕಿತರಾಗಿಯೇ ರೋಗರಕ್ಷಣೆ ಪಡೆದಿದ್ದಾರೆ, ಆದ್ದರಿಂದ ಹೊಸ ರೂಪಾಂತರಗಳ ಬಗ್ಗೆ ಯಾವುದೇ ಭಯಪಡುವ ಅಗತ್ಯವೇ ಇಲ್ಲ ಎನ್ನುವುದನ್ನು ಕೇಂದ್ರ ಸರಕಾರವೂ, ಅನೇಕ ವೈರಾಣು ತಜ್ಞರೂ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಆದ್ದರಿಂದ ಹೊಸ ರೂಪಾಂತರಿತ ಕೊರೋನ ನೆಪದಲ್ಲಿ ಲಸಿಕೆಗಳನ್ನು ಹೇರುತ್ತಿರುವುದು ಅವೈಜ್ಞಾನಿಕ, ಅಪಾಯಕಾರಿ ಹಾಗೂ ಅನ್ಯಾಯದ ಕ್ರಮವಾಗುತ್ತದೆ.

ಹೊಸ ಒಮೈಕ್ರಾನ್ ಪ್ರಕರಣಗಳು ಮತ್ತು ಕೆಲವು ವಿದ್ಯಾರ್ಥಿಗಳಲ್ಲಿ ಗುರುತಿಸಲಾಗಿರುವ ಪ್ರಕರಣಗಳು ಎಲ್ಲವೂ ಎರಡೆರಡು ಡೋಸ್ ಲಸಿಕೆ ಪಡೆದವರಲ್ಲೇ ಕಂಡುಬಂದಿವೆ ಎನ್ನುವುದು ಈ ಲಸಿಕೆಗಳು ಸೋಂಕನ್ನು, ಅದರಲ್ಲೂ ಹೊಸ ಸೋಂಕನ್ನು, ತಡೆಯುವಲ್ಲಿ ಪರಿಮಾಕಾರಿಯಾಗಿವೆಯೇ ಎಂಬ ಪ್ರಶ್ನೆಗಳಿಗೆ ಕಾರಣವಾಗುತ್ತವೆ. ಹೊಸ ಒಮೈಕ್ರಾನ್ ಎದುರು ಈ ಲಸಿಕೆಗಳನ್ನು ಪರೀಕ್ಷಿಸಿಯೇ ಇಲ್ಲ. ಹಾಗಿರುವಾಗ ಒಮೈಕ್ರಾನ್ ನೆಪದಲ್ಲಿ ಅದೇ ಲಸಿಕೆಗಳನ್ನು ಚುಚ್ಚಹೊರಟಿರುವುದು ಆಧಾರರಹಿತವಾದ, ಅವೈಜ್ಞಾನಿಕವಾದ ಕ್ರಮವಾಗಿದೆ.

ಶಾಲೆಗಳು ಆರಂಭಗೊಂಡು ಒಂದೂವರೆ ತಿಂಗಳುಗಳಾಗಿದ್ದು, ಎಲ್ಲೂ ಯಾವ ಸಮಸ್ಯೆಯೂ ಆಗಿಲ್ಲ, ಕೊರೋನ ಸೋಂಕು ಕೂಡ ಸಂಭವಿಸಿಲ್ಲ. ಶಾಲೆ ತೆರೆದರೆ ಕೊರೋನ ಹರಡುತ್ತದೆ ಎಂದು 18 ತಿಂಗಳು ಶಾಲೆಗಳನ್ನು ಮುಚ್ಚಿದ್ದ ತಾಂತ್ರಿಕ ಸಮಿತಿಯ ಸಲಹೆಗಳು ಸಂಪೂರ್ಣವಾಗಿ ತಪ್ಪಾಗಿದ್ದವು ಎನ್ನುವುದನ್ನು ಇದು ತೋರಿಸುತ್ತದೆ. ಈಗ ಅದೇ ಅಜ್ಞಾನಿ ಸಮಿತಿಯು ಮಕ್ಕಳ ಹೆತ್ತವರಿಗೆ ಲಸಿಕೆ ಕಡ್ಡಾಯ ಮಾಡಿರುವುದು ಮಕ್ಕಳ ನೆಪದಲ್ಲಿ ಪೋಷಕರನ್ನು ಮಾನಸಿಕವಾಗಿ ಹಿಂಸಿಸಿ ಬ್ಲಾಕ್ ಮೇಲ್ ಮಾಡಿ, ಉಳಿದಿರುವ ಲಸಿಕೆಗಳನ್ನು ಚುಚ್ಚಿ ಖಾಲಿ ಮಾಡುವ ಕೆಲಸವಾಗಿದೆ ಎಂದೇ ಹೇಳಬೇಕಾಗುತ್ತದೆ. ಸರಕಾರವು ಇಂಥ ತಪ್ಪಾದ ಹಾಗೂ ಯಾವ ಉಪಯೋಗಕ್ಕೂ ಇಲ್ಲದ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕು.

ಭಾರತದಲ್ಲಿ ಬಳಸಲಾಗುತ್ತಿರುವ ಕೋವಿಶೀಲ್ಡ್ ಲಸಿಕೆಯು ರಕ್ತ ಹೆಪ್ಪುಗಟ್ಟುವುದೇ ಮೊದಲಾದ ಸಮಸ್ಯೆಗಳನ್ನುಂಟು ಮಾಡುವುದರಿಂದ ಅದರ ಬಳಕೆಯನ್ನು ಹೆಚ್ಚಿನ ದೇಶಗಳಲ್ಲಿ 50-60  ವರ್ಷಕ್ಕಿಂತ ಕೆಳಗಿನವರಲ್ಲಿ ತಡೆಹಿಡಿಯಲಾಗಿದೆ. ಮೇಲೆ ಹೇಳಿದಂತೆ ರಾಜ್ಯದಲ್ಲಿ ಬಹುತೇಕರು ಈಗಾಗಲೇ ಸೋಂಕಿತರಾಗಿ ಸಹಜ ರೋಗರಕ್ಷಣೆಯನ್ನು ಪಡೆದದ್ದೂ ಆಗಿದೆ. ಜೊತೆಗೆ, ಕೇಂದ್ರ ಸರಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಮೊನ್ನೆಯಷ್ಟೇ ಸಲ್ಲಿಸಿರುವ ಅಫಿಡವಿಟಿನಲ್ಲಿ ಲಸಿಕೆ ಹಾಕಿಸಿಕೊಳ್ಳುವುದು ಕೇವಲ ಐಚ್ಚಿಕವೆಂದು ಸ್ಪಷ್ಟವಾಗಿ ಹೇಳಿದೆ, ರಾಜ್ಯದ ಮುಖ್ಯ ಕಾರ್ಯದರ್ಶಿಗಳೂ, ಆರೋಗ್ಯ ಇಲಾಖೆ ಆಯುಕ್ತರೂ ಅದನ್ನೇ ಹೇಳಿದ್ದಾರೆ. ಹಾಗಿರುವಾಗ ಈ ಹೊಸ ಒಮೈಕ್ರಾನ್ ಅನ್ನು ನೆಪವಾಗಿಟ್ಟು, ತಮ್ಮದೇ ನೀತಿಗಳನ್ನು ಮೀರಿ, ಅಮಾಯಕ ಜನರನ್ನು ಒತ್ತಡಕ್ಕೆ ಸಿಲುಕಿಸಿ ಲಸಿಕೆಗಳನ್ನು ಹಾಕಿಸುವ ಕ್ರಮವನ್ನು ಖಂಡಿಸಬೇಕಾಗಿದೆ, ಕೂಡಲೇ ಹಿಂಪಡೆಯಬೇಕಾಗಿದೆ.
ಜನರನ್ನು ಹೆದರಿಸುವ ಬದಲಿಗೆ ಈಗಾಗಲೇ ಆಗಿರುವ ಕಷ್ಟಗಳನ್ನು ಎದುರಿಸಿ ನಿವಾರಿಸಲು ಸರಕಾರವು ನೆರವಾಗಬೇಕು, ಮತ್ತು ಕಳೆದ ಒಂದೂವರೆ  ವರ್ಷಗಳಿಂದಲೂ ಕೊರೋನ ನಿಯಂತ್ರಣದ ಬಗ್ಗೆ ಅವೈಜ್ಞಾನಿಕವಾದ, ವ್ಯಾಪಾರಿ ಹಿತಾಸಕ್ತಿಯ ಸಲಹೆಗಳನ್ನೇ ನೀಡುತ್ತಾ ಬಂದಿರುವ, ವಿಷಯ ತಜ್ಞರ ಬದಲು ಹೃದ್ರೋಗ ತಜ್ಞರನ್ನು ಹೊಂದಿರುವ, ತಾಂತ್ರಿಕ ಸಲಹಾ ಸಮಿತಿಯನ್ನು ಈ ಕೂಡಲೇ ವಜಾ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News