×
Ad

12ರಿಂದ 17 ವರ್ಷದ ಮಕ್ಕಳಿಗೆ ಲಸಿಕೆ ನೀಡುವ ಕುರಿತು ವೈಜ್ಞಾನಿಕ ಪುರಾವೆಗಳನ್ನು ಪರಿಶೀಲಿಸಲಾಗುತ್ತಿದೆ: ಕೇಂದ್ರ

Update: 2021-12-03 23:29 IST
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.3: 12ರಿಂದ 17ವರ್ಷ ವಯೋಮಾನದ ಮಕ್ಕಳಿಗೆ ಲಸಿಕೆ ನೀಡಿಕೆಗೆ ಸಂಬಂಧಿಸಿದ ವೈಜ್ಞಾನಿಕ ಪುರಾವೆಗಳನ್ನು ಕೋವಿಡ್ ಲಸಿಕೆ ನೀಡಿಕೆ ಕುರಿತ ರಾಷ್ಟ್ರೀಯ ತಜ್ಞರ ತಂಡ (ಎನ್‌ಇಜಿವಿಎಸಿ)ಮತ್ತು ಪ್ರತಿರಕ್ಷಣೆ ಕುರಿತು ರಾಷ್ಟ್ರೀಯ ತಾಂತ್ರಿಕ ಸಲಹಾ ಸಮಿತಿ (ಎನ್‌ಟಿಎಜಿಐ) ಚರ್ಚಿಸುತ್ತಿವೆ ಮತ್ತು ಪರಿಶೀಲಿಸುತ್ತಿವೆ ಎಂದು ಕೇಂದ್ರ ಸರಕಾರವು ಶುಕ್ರವಾರ ಲೋಕಸಭೆಯಲ್ಲಿ ತಿಳಿಸಿದೆ.

ಮಕ್ಕಳು ಮತ್ತು ಹದಿಹರೆಯದವರಲ್ಲಿ ಬಳಕೆಗೆ ಕೋವಿಡ್ ಲಸಿಕೆಯ ಆಮದಿಗೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾವವು ಸದ್ಯಕ್ಕೆ ಬಾಕಿಯಿಲ್ಲ ಎಂದು ಸಹಾಯಕ ಆರೋಗ್ಯ ಸಚಿವೆ ಭಾರತಿ ಪ್ರವೀಣ ಪವಾರ್ ಅವರು ಲಿಖಿತ ಉತ್ತರದಲ್ಲಿ ತಿಳಿಸಿದರು.

ವಿದೇಶಿ ಕೋವಿಡ್ ಲಸಿಕೆಗೆ ಸಂಬಂಧಿಸಿದ ನಿರ್ಧಾರಗಳನ್ನು ಕೈಗೊಳ್ಳುವ ಹೊಣೆಯನ್ನು ಎನ್‌ಇಜಿವಿಎಸಿ ಮತ್ತು ಎನ್‌ಟಿಎಜಿಐಗೆ ವಹಿಸಲಾಗಿದೆ ಎಂದರು.

ಮಕ್ಕಳಿಗಾಗಿ ಕೋವಿಡ್ ಲಸಿಕೆಯನ್ನು ದೇಶಿಯವಾಗಿ ಅಭಿವೃದ್ಧಿಗೊಳಿಸುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಪವಾರ್,ಸದ್ಯಕ್ಕೆ ಕ್ಯಾಡಿಲಾ ಹೆಲ್ತ್‌ಕೇರ್ ತಯಾರಿಸಿರುವ ಝೈಕೋವ್-ಡಿ ಲಸಿಕೆಯು ದೇಶದಲ್ಲಿ ನಡೆಸಲಾದ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್‌ನ ಮಧ್ಯಂತರ ದತ್ತಾಂಶದ ಆಧಾರದಲ್ಲಿ 12 ವರ್ಷ ಮತ್ತು ಮೇಲ್ಪಟ್ಟ ಮಕ್ಕಳಿಗಾಗಿ ತುರ್ತು ಸಂದರ್ಭದಲ್ಲಿ ನಿರ್ಬಂಧಿತ ಬಳಕೆಗೆ ಭಾರತದ ಔಷಧಿ ಮಹಾ ನಿಯಂತ್ರಕ(ಡಿಜಿಸಿಐ)ರ ಅನುಮತಿಯನ್ನು ಪಡೆದುಕೊಂಡಿದೆ ಎಂದು ಉತ್ತರಿಸಿದರು.

ಭಾರತ ಬಯೊಟೆಕ್ 2ರಿಂದ 18 ವರ್ಷ ವಯೋಮಾನದ ಆರೋಗಯುತ ಸ್ವಯಂಸೇವಕರ ಮೇಲೆ ಕೋವ್ಯಾಕ್ಸಿನ್‌ನ 2/3ನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದೆ ಮತ್ತು ಮಧ್ಯಂತರ ಸುರಕ್ಷತೆ ಹಾಗೂ ಪ್ರತಿರೋಧಕ ಶಕ್ತಿ ದತ್ತಾಂಶವನ್ನು ಡಿಜಿಸಿಐಗೆ ಸಲ್ಲಿಸಿದೆ. ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕೂಡ ತನ್ನ ಕೋವೊವ್ಯಾಕ್ಸ್ ಲಸಿಕೆಯ 2/3ನೇ ಹಂತದ ಕ್ಲಿನಿಕಲ್ ಟ್ರಯಲ್‌ನ್ನು 2ರಿಂದ 17 ವರ್ಷದ ಮಕ್ಕಳ ಮೇಲೆ ನಡೆಸುತ್ತಿದೆ. ಇದೇ ರೀತಿ ಬಯಾಲಜಿಕಲ್ ಇ.ಲಿ.ಆರ್‌ಬಿಡಿ ಆಫ್ ಸಾರ್ಸ್-ಕೋವ್-2 ಜೀನ್‌ನ ಕ್ಲಿನಿಕಲ್‌ಟ್ರಯಲ್‌ನ್ನು ಐದು ವರ್ಷಕ್ಕಿಂತ ಮೇಲಿನ ಮತ್ತು 18 ವರ್ಷಕ್ಕಿಂತ ಕೆಳಗಿನ ಮಕ್ಕಳ ಮೇಲೆ ನಡೆಸುತ್ತಿದೆ ಮತ್ತು ಜಾನ್ಸನ್ ಆ್ಯಂಡ್ ಜಾನ್ಸನ್ 12ರಿಂದ 17ವರ್ಷ ವಯೋಮಾನದವರಿಗಾಗಿ ಎಡಿ.26ಕೋವ್.25 ಲಸಿಕೆಯ 2/3ನೇ ಹಂತದ ಜಾಗತಿಕ ಕ್ಲಿನಿಕಲ್ ಟ್ರಯಲ್ ನಡೆಸುತ್ತಿದ್ದು,ಅದರಲ್ಲಿ ಭಾರತವೂ ಒಂದಾಗಿದೆ ಎಂದು ಪವಾರ್ ತಿಳಿಸಿದರು.

ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾದ ಅಂದಾಜಿನಂತೆ ಭಾರತದಲ್ಲಿ 12ರಿಂದ 17ವರ್ಷ ವಯೋಮಾನದ 14,52,14,000 ಮಕ್ಕಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News