'ಸಿಪ್ರಿಯಾನ್ ಫೋಯೆಸ್ ಪ್ರೈಝ್ 'ಗೆ ಖ್ಯಾತ ಭಾರತೀಯ-ಅಮೆರಿಕನ್ ಗಣಿತಜ್ಞ ನಿಖಿಲ್ ಶ್ರೀವಾಸ್ತವ ಆಯ್ಕೆ

Update: 2021-12-04 06:40 GMT
ನಿಖಿಲ್ ಶ್ರೀವಾಸ್ತವ (Photo: math.berkeley.edu)

ವಾಷಿಂಗ್ಟನ್: ಖ್ಯಾತ ಭಾರತೀಯ-ಅಮೆರಿಕನ್ ಗಣಿತಜ್ಞ ನಿಖಿಲ್ ಶ್ರೀವಾಸ್ತವ ಅವರನ್ನು ಪ್ರಥಮ 'ಸಿಪ್ರಿಯಾನ್ ಫೋಯೆಸ್ ಪ್ರೈಝ್ ಇನ್ ಆಪರೇಟರ್ ಥಿಯರಿ'ಗೆ ಅಮೆರಿಕನ್ ಮೆಥಮ್ಯಾಟಿಕಲ್ ಸೊಸೈಟಿ (ಎಎಂಎಸ್) ಆಯ್ಕೆ ಮಾಡಿದೆ. ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದಲ್ಲಿ ಸೇವೆ ಸಲ್ಲಿಸುತ್ತಿರುವ ನಿಖಿಲ್ ಅವರೊಂದಿಗೆ ಜಂಟಿಯಾಗಿ ಈ ಪ್ರಶಸ್ತಿಯನ್ನು ಆಡಂ ಮಾರ್ಕಸ್ ಮತ್ತು ಡೇನಿಯಲ್ ಸ್ಪೀಲ್‌ಮ್ಯಾನ್ ಹಂಚಿಕೊಳ್ಳಲಿದ್ದಾರೆ. ಆಡಂ ಅವರು  ಸ್ವಿಝರ್ಲ್ಯಾಂಡ್‌ನ  ಉನ್ನತ ಶಿಕ್ಷಣ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಡೇನಿಯಲ್ ಅವರು ಸ್ಟರ್ಲಿಂಗ್ ಪ್ರೊಫೆಸರ್ ಆಫ್ ಕಂಪ್ಯೂಟರ್ ಸಾಯನ್ಸ್ ಆಗಿದ್ದಾರೆ.

1959ರಲ್ಲಿ ರಿಚರ್ಡ್ ಕೆಡಿಸನ್ ಮತ್ತು ಇಸಾಡೋರ್ ಸಿಂಗರ್ ಅವರು ರಚಿಸಿದ್ದ ಆಪರೇಟರ್ ಥಿಯರಿ ಎದುರಿಸುತ್ತಿದ್ದ ಪೇವಿಂಗ್ ಪ್ರಾಬ್ಲೆಂ ಅನ್ನು ಪರಿಹರಿಸುವಲ್ಲಿ ಪ್ರಶಸ್ತಿ ವಿಜೇತರ ಅಧ್ಯಯನ ಪ್ರಮುಖ ಪಾತ್ರ ವಹಿಸಿದೆ. ಪೊಲಿನೋಮಿಯಲ್ ಆಫ್ ಮ್ಯಾಟ್ರಿಸಸ್ ಇದರ ವೈಶಿಷ್ಟ್ಯಗಳನ್ನು ಅರ್ಥೈಸಲು ಅವರು ಪರಿಚಯಿಸಿರುವ ಹಾಗೂ ಅಭಿವೃದ್ಧಿಪಡಿಸಿರುವ ತಂತ್ರಗಳಿಗೆ-ಅಂದರೆ ಇಟರೇಟಿವ್ ಸ್ಪಾರ್ಸಿಫಿಕೇಶನ್ ಮೆಥಡ್ ಹಾಗೂ ಮೆಥಡ್ ಆಫ್ ಇಂಟರ್‌ಲೇಸಿಂಗ್ ಪಾಲಿನಾಮಿಯಲ್ಸ್ ಗೆ ಈ ಪ್ರಶಸ್ತಿ ಬಂದಿದೆ.

ಸಿಯಾಟಲ್‌ನಲ್ಲಿ ಮುಂದಿನ ವರ್ಷದ ಜನವರಿ 5ರಂದು ನಡೆಯಲಿರುವ ಜಾಯಿಂಟ್ ಮ್ಯಾಥಮ್ಯಾಟಿಕ್ಸ್ ಮೀಟಿಂಗ್‌ನಲ್ಲಿ ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ನಿಖಿಲ್ ಅವರು ಈ ಹಿಂದೆ ಇನ್ನೂ ಎರಡು ಪ್ರಮುಖ ಪ್ರಶಸ್ತಿಗಳನ್ನು ಗಳಿಸಿದ್ದಾರೆ. 2014ರಲ್ಲಿ ಜಾರ್ಜ್ ಪೊಲ್ಯ ಪ್ರಶಸ್ತಿಯನ್ನು ಜಂಟಿಯಾಗಿ ಗಳಿಸಿದ್ದರೆ 2021ರಲ್ಲಿ ಹೆಲ್ಡ್ ಪ್ರಶಸ್ತಿ ಗಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News