ಉಕ್ರೇನ್ ಮೇಲೆ ಆಕ್ರಮಣಕ್ಕೆ ರಶ್ಯ ಸಂಚು: ವಾಶಿಂಗ್ಟನ್ ಪೋಸ್ಟ್ ವರದಿ

Update: 2021-12-04 19:10 GMT

ವಾಶಿಂಗ್ಟನ್, ಡಿ.4: ರಶ್ಯವು ಮುಂದಿನ ವರ್ಷ ತನ್ನ ನೆರೆಯ ರಾಷ್ಟ್ರವಾದ ಉಕ್ರೇನ್ ವಿರುದ್ಧ 1.75 ಲಕ್ಷ ಸೈನಿಕರನ್ನು ಒಳಗೊಂಡ ಬಹುಮುಂಚೂಣಿಯ ಆಕ್ರಣಮಣವನ್ನು ನಡೆಸುವ ಸಂಚನ್ನು ಹೂಡಿದೆಯೆಂದು ‘ದಿ ವಾಶಿಂಗ್ಟನ್ ಪೋಸ್ಟ್’ ಪತ್ರಿಕೆ ಶುಕ್ರವಾರ ವರದಿ ಮಾಡಿದೆ. ಮುಂದಿನ ತಿಂಗಳು ತನ್ನ ವಿರುದ್ಧ ಬೃಹತ್ ಪ್ರಮಾಣದ ಆಕ್ರಮಣ ನಡೆಸಲು ರಶ್ಯವು ಯೋಜಯೊಂದನ್ನು ಹಮ್ಮಿಕೊಂಡಿದೆಯೆಂದು ಉಕ್ರೇನ್ ಕೂಡಾ ವಿಶ್ವಸಮುದಾಯವನ್ನು ಎಚ್ಚರಿಸಿದೆ.

1.75 ಲಕ್ಷಕ್ಕೂ ಅಧಿಕ ಸಿಬ್ಬಂದಿಯನ್ನು ಒಳಗೊಂಡ 100 ಬೆಟಾಲಿಯನ್ ವ್ಯೂಹಾತ್ಮಕ ಸೇನಾತಂಡಗಳನ್ನು ಒಳಗೊಂಡಂದತೆ, ಶಸ್ತ್ರಾಸ್ತ್ರ, ಕವಚಾವೃತ ವಾಹನ ಹಾಗೂ ಅತ್ಯಾಧುನಿಕ ಉಪಕರಣಗಳಿಂದ ಜೊತೆ ಬೃಹತ್ ಸೇನಾ ಸಂಚಲನವನ್ನು ನಡೆಸುವ ಯೋಜನೆಯನ್ನು ರಶ್ಯ ಹಮ್ಮಿಕೊಂಡಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಮೆರಿಕ ಆಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವರದಿಗಳ ಬಗ್ಗೆ ಎಎಫ್‌ಪಿ ಸುದ್ದಿಸಂಸ್ಥೆಯೊಂದರ ಜೊತೆ ಮಾತನಾಡಿದ ಪೆಂಟಾಗನ್ ವಕ್ತಾರರು ತಾನು ಬೇಹುಗಾರಿಕಾ ವಿಷಯಗಳ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯಿಸುವುದಿಲ್ಲವೆಂದು ತಿಳಿಸಿದರು. ಆದರೆ ರಶ್ಯವು ಉಕ್ರೇನ್ ವಿರುದ್ಧ ಕಾರ್ಯಾಚರಣೆ ನಡೆಸಲು ಯೋಜನೆಯನ್ನು ಹಮ್ಮಿಕೊಂಡಿರುವುದಕ್ಕೆ ಪುರಾವೆಗಳು ದೊರೆತಿದ್ದು, ಇದು ಆತಂಕಕಾರಿಯಾಗಿದೆ ಎಂದು ಪೆಂಟಾಗನ್‌ವಕ್ತಾರ ಲೆಫ್ಟಿನೆಂಟ್ ಕರ್ನಲ್ ಟೋನಿ ಸೆಮೆಲ್‌ರೋಥ್ ತಿಳಿಸಿದ್ದಾರೆ.

ಪ್ರಸಕ್ತ ಉಕ್ರೇನ್ ಗಡಿಯಲ್ಲಿ ರಶ್ಯದ ಪಡೆಗಳು ನಾಲ್ಕು ಗಡಿಬಿಂದುಗಳಲ್ಲಿ ಜಮಾವಣೆಗೊಂಡಜಿವೆ. ಟ್ಯಾಂಕುಗಳು ಹಾಗೂ ಫಿರಂಗಿದಳದ ಜೊತೆಗೆ 50 ಸಮರತಂತ್ರಗಾರಿಕೆಯ ಸೈನಿಕ ತಂಡಗಳನ್ನು ನಿಯೋಜಿಸಿದೆ ಎಂದು ವಾಶಿಂಗ್ಟನ್ ಪೋಸ್ಟ್ ಅಮೆರಿಕದ ಬೇಹುಗಾರಿಕಾ ದಾಖಲೆಪತ್ರವೊಂದನ್ನು ಉಲ್ಲೇಖಿಸಿ ವರದಿ ಮಾಡಿದೆ.

2014ರಲ್ಲಿ ರಶ್ಯವು ಉಕ್ರೇನ್‌ನಿಂದ ಕ್ರಿಮಿಯಾವನ್ನು ವಶಪಡಿಸಿಕೊಂಡಿತ್ತು ಹಾಗೂ ಆವಾಗಿನಿಂದ ಅದು ಉಕ್ರೇನ್‌ನ ಪೂರ್ವ ಭಾಗದಲ್ಲಿ ಸಕ್ರಿಯವಾಗಿರುವ ಪ್ರತ್ಯೇಕತಾವಾದಿಗಳನ್ನು ಬೆಂಬಲಿಸುತ್ತಾ ಬಂದಿದೆ. ಉಕ್ರೇನ್ ಹಾಗೂ ಪ್ರತ್ಯೇಕತಾವಾದಿಳ ನಡುವಿನ ಈ ಸಂಘರ್ಷದಲ್ಲಿ 13 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News