ಉಕ್ರೇನ್ ವಿರುದ್ಧ ಆಕ್ರಮಣವೆಸಗಲು ರಶ್ಯಕ್ಕೆ ಕಷ್ಟವಾಗುವಂತೆ ಮಾಡಲಿದ್ದೇವೆ: ಜೋ ಬೈಡೆನ್ ಎಚ್ಚರಿಕೆ

Update: 2021-12-04 19:12 GMT

ವಾಶಿಂಗ್ಟನ್,    ಡಿ.4: ಉಕ್ರೇನ್ ವಿರುದ್ಧ ಯಾವುದೇ ರೀತಿಯ ಆಕ್ರಮಣವನ್ನು ನಡೆಸಲು ರಶ್ಯಕ್ಕೆ ಕಷ್ಟಕರವಾಗುವ ಹಾಗೆ ಮಾಡುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ ಮುಂದಿನ ತಿಂಗಳು ಉಕ್ರೇನ್ ವಿರುದ್ಧ ಬೃಹತ್ ಪ್ರಮಾಣದ ಆಕ್ರಮಣ ನಡೆಸಲು ರಶ್ಯವು ಸಂಚು ಹೂಡಿರುವ ಸಾಧ್ಯತೆಯಿದೆ ಎಂಬ ವರದಿಗಳಿಗೆ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.

ವಾಶಿಂಗ್ಟನ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ‘‘ಉಕ್ರೇನ್ ವಿರುದ್ಧ ದಾಳಿ ನಡೆಸುವ ಯೋಜನೆಯನ್ನು ಮುಂದಕ್ಕೊಯ್ಯಲು ಪುತಿನ್‌ಗೆ ಅತ್ಯಂತ ಕಷ್ಟಕರವಾಗುವಂತೆ ಮಾಡುವಂತಹ ಅತ್ಯಂತ ಸಮಗ್ರ ಹಾಗೂ ಅರ್ಥಪೂರ್ಣ ಉಪಕ್ರಮಗಳನ್ನು ತಾನು ರೂಪಿಸುತ್ತಿರುವುದಾಗಿ ಹೇಳಿದರು. ಮುಂದಿನ ವರ್ಷದ ಜನವರಿ ಅಂತ್ಯದೊಳಗೆ ಸಂಘರ್ಷವನ್ನು ಎದುರಿಸಲು ಉಕ್ರೇನ್ ಸನ್ನದ್ಧವಾಗಬೇಕಾದ ಸಾಧ್ಯತೆಯಿದೆಯೆಂದು ಆ ದೇಶದ ರಕ್ಷಣಾ ಸಚಿವ ಒಲೆಕ್ಸಿ ರೆಝಿನ್‌ಕೊವ್ ಅವರು ಶುಕ್ರವಾರ ಸಂಸತ್‌ಗೆ ತಿಳಿಸಿದ್ದಾರೆ.

ರಶ್ಯವು ಈಗಾಗಲೇ ಚಳಿಗಾಲದ ತರಬೇತಿ ಅವಧಿಯನ್ನು ಆರಂಭಿಸಿದೆ ಹಾಗೂ ಅದು ಈಗಾಗಲೇ ಉಕ್ರೇನ್ ಭೂಪ್ರದೇಶದ ಸಮೀಪವೇ ಸಮರಾಭ್ಯಾಸಗಳನ್ನು ನಡೆಸುತ್ತಿದೆ ಎಂದು ರೆಝಿನ್‌ಕೋವ್ ಹೇಳಿದ್ದಾರೆ.

ಈಗಾಗಲೇ ಉಕ್ರೇನ್ ಗಡಿ ಸಮೀಪ ರಶ್ಯವು ತನ್ನ 1 ಲಕ್ಷ ಸೈನಿಕರನ್ನು ನಿಯೋಜಿಸಿದೆ ಎಂದು ರೆಝಿನ್‌ಕೋವ್ ಅಂದಾಜಿಸಿದ್ದಾರೆ. ಆದರೆ ಅಂತಹ ಯಾವುದೇ ಸೇನಾ ಜಮಾವಣೆಯನ್ನು ತಾನು ನಡೆಸಿಲ್ಲವೆಂದು ರಶ್ಯವು ಸ್ಪಷ್ಟಪಡಿಸಿದೆ.

ಈ ಮಧ್ಯೆ ಪೂರ್ವ ಉಕ್ರೇನ್‌ನ ಗಡಿಮುಂಚೂಣಿಯಲ್ಲಿರುವ ಉಕ್ರೇನ್ ಸರಕಾರಿಪಡೆಗಳು ಹೇಳಿಕೆಯೊಂದನ್ನು ನೀಡಿ, ರಶ್ಯದ ಯಾವುದೇ ಆಕ್ರಮಣವನ್ನು ಹಿಮ್ಮೆಟ್ಟಿಸಲು ತಾವು ಸನ್ನದ್ಧರಾಗಿದ್ದೇವೆ ಎಂದು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News