ಪಾಕಿಸ್ತಾನದಲ್ಲಿ ಶ್ರೀಲಂಕಾ ಪ್ರಜೆಯ ಹತ್ಯೆ ಪ್ರಕರಣದಲ್ಲಿ 120 ಮಂದಿಯ ಬಂಧನ

Update: 2021-12-05 01:54 GMT

ಸಿಯಾಲ್‌ಕೋಟ್, ಡಿ.4: ಧರ್ಮನಿಂದನೆ ಮಾಡಿದ್ದಾರೆಂದು ಆರೋಪಿಸಿ ಕಾರ್ಖಾನೆಯೊಂದರ ಶ್ರೀಲಂಕಾ ಮೂಲದ ಮ್ಯಾನೇಜರ್‌ನನ್ನು ಥಳಿಸಿ ಹತ್ಯೆಗೈದು, ದಹನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯಲ್ಲಿ ಸುಮಾರು 120 ಮಂದಿಯನ್ನು ಪಾಕ್ ಪೊಲೀಸರು ಬಂಧಿಸಿದ್ದಾರೆ.

ಕಾರ್ಖಾನೆಯ ಮ್ಯಾನೇಜರ್ ಪ್ರಿಯಾಂಕ ಕುಮಾರ್ ದಿಯಾವದ ತನ್ನ ಕಚೇರಿಯ ಬಳಿ ಅಂಟಿಸಲಾಗಿದ್ದ ಧಾರ್ಮಿಕ ಸಂದೇಶಗಳ ಪೋಸ್ಟರ್ ಅನ್ನು ಹರಿದುಹಾಕಿ ಕಸದಬುಟ್ಟಿಗೆ ಎಸೆದಿದ್ದಾರೆಂದು ವದಂತಿಗಳು ಹರಿದಾಡಿದ ಬಳಿಕ ಈ ಘಟನೆ ನಡೆದಿರುವುದಾಗಿ ಸ್ಥಳೀಯ ಪೊಲೀಸ್ ಅಧಿಕಾರಿ ಝುಲ್ಫಿಕರ್ ಅಲಿ ತಿಳಿಸಿದ್ದಾರೆ. ಪ್ರಮುಖ ಆರೋಪಿ ಸೇರಿದಂತೆ ಸುಮಾರು 120 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವಕ್ತಾರ ಖುರ್ರಮ್ ಶೆಹಝಾದ್ ತಿಳಿಸಿದ್ದಾರೆ.

ಹತ್ಯೆಯಾದ ದಿಯಾವದನ ಕಟ್ಟುನಿಟ್ಟಿನ ವ್ಯಕ್ತಿಯಾಗಿದ್ದರೆಂದು ಕಾರ್ಖಾನೆಯ ಕೆಲವು ಸಿಬ್ಬಂದಿ ದೂರುತ್ತಿದ್ದರು. ಮ್ಯಾನೇಜರ್ ವಿರುದ್ಧ ಸೇಡು ತೀರಿಸಲು ಅವರು ಧಾರ್ಮಿಕ ಭಾವನೆಗಳನ್ನು ಕೆರಳಿಸಿರುವ ಸಾಧ್ಯತೆಯಿದೆಯೆಂದು ಪಾಕಿಸ್ತಾನದ ಧಾರ್ಮಿಕ ವಿದ್ವಾಂಸ ಹಾಗೂ ಧರ್ಮ ಸೌಹಾರ್ದತೆ ಕುರಿತ ಪ್ರಧಾನಿಯವರ ವಿಶೇಷ ಪ್ರತಿನಿಧಿ ತಾಹೀರ್ ಅಶ್ರಫಿ ತಿಳಿಸಿದ್ದಾರೆ. ಪೊಲೀಸರು ಎಲ್ಲಾ ಕೋನಗಳಿಂದಲೂ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಅವರು ತಿಳಿಸಿದರು.

ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯಲ್ಲಿ ಶ್ರೀಲಂಕಾದ ಪ್ರಜೆಯೊಬ್ಬನನ್ನು ಉದ್ರಿಕ್ತ ಜನರ ಗುಂಪೊಂದು ಹತ್ಯೆಗೈದ ಘಟನೆಯನ್ನು ಶ್ರೀಲಂಕಾದ ಸಂಸತ್ ಶನಿವಾರ ತೀವ್ರವಾಗಿ ಖಂಡಿಸಿದೆ ಹಾಗೂ ಪಾಕ್‌ನಲ್ಲಿ ಕೆಲಸ ಮಾಡುತ್ತಿರುವ ಶ್ರೀಲಂಕಾದ ಪ್ರಜೆಗಳ ಸುರಕ್ಷತೆಯನ್ನು ಖಾತರಿಪಡಿಸಬೇಕೆಂದು ಅದು ಇಮ್ರಾನ್‌ಖಾನ್ ನೇತೃತ್ವದ ಸರಕಾರವನ್ನು ಆಗ್ರಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News