ಧರ್ಮನಿಂದನೆ ಆರೋಪ: ಪಾಕಿಸ್ತಾನದಲ್ಲಿ ಶ್ರೀಲಂಕಾ ವ್ಯಕ್ತಿಯ ಹತ್ಯೆಗೆ ಸಂಬಂಧಿಸಿ 100ಕ್ಕೂ ಹೆಚ್ಚು ಮಂದಿಯ ಬಂಧನ

Update: 2021-12-05 09:11 GMT
Photo: JRT post

ಇಸ್ಲಾಮಾಬಾದ್: ಶ್ರೀಲಂಕಾದ ವ್ಯಕ್ತಿಯೊಬ್ಬರ ಹತ್ಯೆಗೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ 100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಶನಿವಾರ ಹೇಳಿದ್ದಾರೆ. ಶುಕ್ರವಾರ ಪಾಕಿಸ್ತಾನದ ಸಿಯಾಲ್‌ಕೋಟ್ ಜಿಲ್ಲೆಯಲ್ಲಿ ಫ್ಯಾಕ್ಟರಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರಿಯಾಂತಾ ದೀಯವದನಾ ಅವರನ್ನು ಧರ್ಮನಿಂದನೆಯ ಆರೋಪ ಹೊರಿಸಿ ಗುಂಪೊಂದು ಹತ್ಯೆಗೈದಿತ್ತು. ಬಳಿಕ ಅವರ ಮೃತದೇಹವನ್ನು ಸುಟ್ಟುಹಾಕಲಾಗಿತ್ತು.

ವ್ಯಕ್ತಿಯು ಧಾರ್ಮಿಕ ಪೋಸ್ಟರ್‌ ಗಳನ್ನು ಹರಿದು ಕಸದ ತೊಟ್ಟಿಗೆ ಹಾಕುತ್ತಿದ್ದರು ಎಂಬ ವದಂತಿಯು ವ್ಯಾಪಕವಾಗಿ ಹಬ್ಬಿದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದು ದೀಯವದನಾ ನಿರ್ವಹಿಸುತ್ತಿದ್ದ ಕಾರ್ಖಾನೆಯ ಕಾರ್ಮಿಕರ ಸೇಡಿನ ಕೃತ್ಯವೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಪಾಕಿಸ್ತಾನದ ಧಾರ್ಮಿಕ ವ್ಯವಹಾರಗಳು ಮತ್ತು ಸರ್ವಧರ್ಮ ಸಾಮರಸ್ಯದ ವಿಶೇಷ ಪ್ರತಿನಿಧಿ ತಾಹಿರ್ ಅಶ್ರಫಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಶ್ರೀಲಂಕಾದ ಪ್ರಧಾನಿ ಮಹಿಂದಾ ರಾಜಪಕ್ಸೆ ಹತ್ಯೆಯನ್ನು ಖಂಡಿಸಿದ್ದು, ಅಪರಾಧಿಗಳನ್ನು ನ್ಯಾಯಾಂಗದ ಮುಂದೆ ತರುವಂತೆ ಪಾಕಿಸ್ತಾನದ ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. "100 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ನಾನು ಅವರಿಗೆ [ಶ್ರೀಲಂಕಾ ಅಧ್ಯಕ್ಷರಿಗೆ] ತಿಳಿಸಿದ್ದೇನೆ ಮತ್ತು ಕಾನೂನಿನ ಸಂಪೂರ್ಣ ತೀವ್ರತೆಯೊಂದಿಗೆ ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಅವರಿಗೆ ಭರವಸೆ ನೀಡಿದ್ದೇನೆ." ಎಂದು ಇಮ್ರಾನ್‌ ಖಾನ್‌ ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News