ಸ್ವರ್ಗದ ಈ ನೆಲವನ್ನು ನರಕ ಮಾಡುವವರನ್ನು ಎದುರಿಸಲು ದಲಿತರು ಸಿದ್ಧ : ಉದಯ ಸಾರಂಗ್

Update: 2021-12-05 18:04 GMT

ಕಾಸರಗೋಡು, ಡಿ.5: ದೈವ ನೆಲೆ ನಿಂತಿರುವ ಸುಂದರವಾದ ಸ್ವರ್ಗದ ಈ ನೆಲವನ್ನು ನರಕ ಮಾಡುವವರನ್ನು ಎದುರಿಸಲು ನಾವಿಂದು ಇಲ್ಲಿ ಸೇರಿದ್ದೇವೆ. ನಾವು ತುಳುನಾಡಿನ ಮೂಲ ನಿವಾಸಿಗಳು. ಹೆದರಿಸಿದರೆ ಸಾಕು ದಲಿತರು ಸುಮ್ಮನಿರುತ್ತಾರೆ ಎಂಬ ಆ ಕಾಲ ಕಳೆದು ಹೋಗಿದೆ ಎಂಬುದು ನೆನಪಿರಲಿ ಎಂದು ರಂಗ ನಿರ್ದೇಶಕ ಉದಯ ಸಾರಂಗ್ ಎಚ್ಚರಿಕೆ ನೀಡಿದ್ದಾರೆ.

ಧಾರ್ಮಿಕ ಆಚಾರಕ್ಕೆ ಸಂಪ್ರದಾಯದ ನೆಪವೊಡ್ಡಿ ದಲಿತರ ಹಕ್ಕನ್ನು ದಮನಿಸುವ ಮೂಲಕ ಅಸ್ಪೃಶ್ಯರನ್ನರಾಗಿ ಕಾಣಲಾಗುತ್ತದೆ ಎಂಬ ಆರೋಪದ ಹಿನ್ನೆಲೆಯಲ್ಲಿ ‘ನಮ್ಮ ಹಕ್ಕು ನಾವು ಸಂರಕ್ಷಿಸುವೆವು’ ಎಂಬ ಧ್ಯೇಯ ವಾಕ್ಯದಲ್ಲಿ ಪೆರ್ಲದ ಸ್ವರ್ಗ ಜಂಕ್ಷನ್‌ನಲ್ಲಿ ರವಿವಾರ ಆಯೋಜಿಸಿದ್ದ ದಲಿತ ಹಕ್ಕು ತಿಳುವಳಿಕಾ ಸಂಗಮ’ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ದಲಿತರು ದೇವಸ್ಥಾನ, ದೈವಸ್ಥಾನದ ಗರ್ಭ ಗುಡಿಯಲ್ಲಿ ದೀಪಾರಾಧನೆ, ಪ್ರಾರ್ಥನೆ ಸಲ್ಲಿಸಿದರೆ ಅದು ಫಲಪ್ರದವಾಗುವುದು ಖಂಡಿತ. ಇದೇ ಕಾರಣಕ್ಕೆ ಅವರು ಹೆದರುತ್ತಿದ್ದಾರೆ ಎಂದ ಉದಯ ಸಾರಂಗ್, ಇತ್ತೀಚೆಗೆ ಇಲ್ಲಿ ವಿಶ್ವ ಹಿಂದೂ ಪರಿಷತ್ ದೊಂದಿ ಮೆರವಣಿಗೆ ನಡೆಸಿರುವುದನ್ನು ಪತ್ರಿಕೆಯಲ್ಲಿ ಓದಿದ್ದೆ. ದೊಂದಿ ಮೆರವಣಿಗೆ ಮಾಡುವವರಿಗೆ ದೈವಸ್ಥಾನದಲ್ಲಿ ದಲಿತರಿಗೆ ಭೇದಭಾವ ಮಾಡುತ್ತಿರುವುದು ಕಾಣುತ್ತಿಲ್ಲವೇ ಎಂದು ಅವರು ಪ್ರಶ್ನಿಸಿರು.

ಯಾವುದೇ ತೀರ್ಥಕ್ಷೇತ್ರಗಳಲ್ಲಿ ಏನೇ ಆದರೂ ಕೂಡಲೇ ಪ್ರತಿಭಟನೆ ಮಾಡುವ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ನಂತಹ ಸಂಘಟನೆಗಳು ಪೆರ್ಲದ ದೈವಸ್ಥಾನದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಏಕೆ ಪ್ರತಿಭಟನೆ ಮಾಡಿಲ್ಲ ? ಆದರೆ ನಮಗೆ ಅವರ ಅಗತ್ಯ ಇಲ್ಲ. ನಮಗೆ ನಮ್ಮದೇ ಸಂಘಟನೆಗಳಿವೆ. ಅವುಗಳೇ ಸಾಕು.

ಪೆರ್ಲದ ದೈವಸ್ಥಾನದ ಸಮಸ್ಯೆಯನ್ನು ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್‌ನವರು ಪರಿಹರಿಸಿ ಅವರೇ ಹೇಳುವಂತೆ ‘ಹಿಂದೂ ನಾವೆಲ್ಲ ಬಂಧು’ ಎನ್ನುವ ಭಾವನೆ ಮೂಡಿಸಬಹುದು ಎಂಬ ಆಶಾಭಾವನೆ ಇತ್ತು. ಆದರೆ ಇತ್ತೀಚೆಗೆ ಹಿಂದೂ ವಿಶ್ವ ಪರಿಷತ್ ನಡೆಸಿದ ದೊಂದಿ ಮೆರವಣಿಗೆ ಬಳಿಕ ಅದೆಲ್ಲ ಸುಳ್ಳೆಂಬುದು ಖಚಿತವಾಯಿತು. ಯಾವುದೇ ತೀರ್ಥಕ್ಷೇತ್ರಗಳಲ್ಲಿ ಏನೇ ಆದರೂ ಕೂಡಲೇ ಪ್ರತಿಭಟನೆ ಮಾಡುವ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್ ನಂತಹ ಸಂಘಟನೆಗಳು ಪೆರ್ಲದ ದೈವಸ್ಥಾನದಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಏಕೆ ಪ್ರತಿಭಟನೆ ಮಾಡಿಲ್ಲ ? ಆದರೆ ನಮಗೆ ಅವರ ಅಗತ್ಯ ಇಲ್ಲ. ನಮಗೆ ನಮ್ಮದೇ ಸಂಘಟನೆಗಳಿವೆ. ನಮಗೆ ಅವುಗಳೇ ಸಾಕು ಎಂದು ಹೇಳಿದರು.

ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಸಾಹಿತಿ, ಪತ್ರಕರ್ತ ರಾಧಾಕೃಷ್ಣ ಉಳಿಯತ್ತಡ್ಕ, ‘ದಲಿತ ಸಂಸ್ಕೃತಿ’ ಅಥವಾ ‘ದಲಿತತ್ವ’ ಇಲ್ಲಿನ ಸಂಸ್ಕೃತಿಗೆ ಪೂರಕವಾಗಿದೆ. ಇಲ್ಲಿನ ಮೂಲ ನಿವಾಸಿಗಳಾದ ಮೊಗೇರರು ಇಲ್ಲಿನ ಮಣ್ಣಿನೊಂದಿಗೆ ಸೆಣಸಾಡಿ, ದುಡಿದು ದೇಶವನ್ನು ಸಂಪನ್ನಗೊಳಿಸಿದ್ದಾರೆ. ಮೊಗೇರ ಅರಸರು ಇಲ್ಲಿ ಆಡಳಿತ ನಡೆಸಿದ್ದಾರೆ. ಆದರೆ ಪರಂಪರಾಗತವಾಗಿ ಇಲ್ಲಿನ ಆಡಳಿತಶಾಹಿ ಅಥವಾ ಜಾತೀಯ ವ್ಯವಸ್ಥೆ ಮೊಗೇರ ಸಮುದಾಯವನ್ನು ಹೀನಾಯವಾಗಿ, ತಿರಸ್ಕಾರ ಮನೋಭಾವನೆಯಿಂದ ನೋಡುತ್ತಾ ಬಂದಿದೆ ಎಂದು ತಿಳಿಸಿದರು.

ಜಾತಿ ವ್ಯವಸ್ಥೆಯಿಂದ ಸಾಂಸ್ಕೃತಿಕ ವಿಕೇಂದ್ರೀಕರಣ ನಡೆಯುತ್ತಿದೆ. ನಮ್ಮ ಹಕ್ಕುಗಳನ್ನು ಸಂರಕ್ಷಿಸಲು ನಾವು ಬದ್ಧರಾಗಿರಬೇಕು. ಈ ಬಗ್ಗೆ ತಿಳುವಳಿಕೆ ಮೂಡಿಸಲು, ಚಿಂತನೆ ಹಾಗೂ ಆಚಾರ ವಿಚಾರಗಳ ವಿನಿಮಯ ನಡೆಸಲು ವೇದಿಕೆ ಸೃಷ್ಟಿಯಾಗಬೇಕು ಎಂದರು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಜೀವ ಪೆರಿಯಾಲ್ ಮಾತನಾಡಿ, ಮನುಷ್ಯ ಮನಸ್ಸಿನಲ್ಲಿ ಹುದುಗಿರುವ ಕೊಳಕು. ಯಾರನ್ನೂ ಹೀನ ದೃಷ್ಟಿಯಿಂದ ನೋಡುವುದು ಸರಿಯಲ್ಲ. ಎಲ್ಲರಿಗೂ ಮಾನುಷಿಕ ಪರಿಗಣನೆ ನೀಡಬೇಕು. ಹೋರಾಟ ಎಂಬುದು ಮಾತಿಗೆ ಸೀಮಿತವಾಗಿರದೆ, ಧರ್ಮ, ನೀತಿ, ಹಕ್ಕುಗಳಿಗಾಗಿ ಒಗ್ಗಟ್ಟಿನಿಂದ ಹೋರಾಡಬೇಕು ಎಂದರು.

ರಂಗ ನಿರ್ದೇಶಕ ಉದಯ ಸಾರಂಗ್, ಎಣ್ಮಕಜೆ ಗ್ರಾಪಂ ಸದಸ್ಯ ಶಶಿಧರ ಕಾಟುಕುಕ್ಕೆ, ಶಿಕ್ಷಕ, ಸಾಹಿತಿ ಸುಧೀಶ್ ಚಟ್ಟಂಚಾಲ್, ಮಂಜೇಶ್ವರ ಮೊಗೇರ ಸೊಸೈಟಿಯ ಉಪಾಧ್ಯಕ್ಷೆ ಗಿರಿಜಾ ತಾರಾನಾಥ್, ಮಧೂರು ಮಾತಾ ಸೇವಾ ಸಮಿತಿ ಜಿಲ್ಲಾಧ್ಯಕ್ಷ ವಸಂತ ಅಜಕೋಡು, ಆದಿ ದಲಿತ ಮುನ್ನೋಟ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಕುಂಬಳೆ, ಸುಂದರ ಅಪ್ಪಯ್ಯ ಮೂಲೆ, ಪ್ರದೀಪ್ ಮುಂಡಿತಡ್ಕ, ಕನ್ವೀನರ್ ಕೃಷ್ಣಮೋಹನ ಪೊಸೋಳ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.

ಅಂಬೇಡ್ಕರ್ ವಿಚಾರ ವೇದಿಕೆಯ ಅಧ್ಯಕ್ಷ ರಾಮ ಪಟ್ಟಾಜೆ, ಎಸ್‌ಸಿ ಪ್ರೊಮೋಟರ್ ಸುಜಾತಾ, ಸದಾನಂದ ಶೇಣಿ ಉಪಸ್ಥಿತರಿದ್ದರು. ಶಿಕ್ಷಕ ರಂಜಿತ್ ಎ.ಎಸ್.ಸ್ವಾಗತಿಸಿದರು. ದೀಪ್ತಿ ಪಡ್ಪು ವಂದಿಸಿದರು.

ಸಮಾಜದಲ್ಲಿ ಎಲ್ಲರಿಗೂ ಬದುಕುವ, ಮಾತನಾಡುವ, ಹೋರಾಡುವ ಸಮಾನ ಹಕ್ಕಿದೆ. ಮೂಢನಂಬಿಕೆಗಳನ್ನು ಬದಿಗೆ ಸರಿಸಿ, ಮೂಲ ನಂಬಿಕೆಗಳಿಗೆ ಪ್ರಾಶಸ್ತ್ಯ ನೀಡುವ ಮೂಲಕ ಇಲ್ಲಿನ ನೆಲ ಮೂಲ ಸಂಸ್ಕೃತಿ ಉಳಿಸಲು ಪ್ರಯತ್ನಿಸಬೇಕು. ಧಾರ್ಮಿಕ ಮೌಲ್ಯ ಹಾಗೂ ಆರಾಧನಾ ಪರಂಪರೆಯನ್ನು ಎತ್ತಿ ಹಿಡಿಯಲು ಐಕ್ಯದಿಂದ ಹೋರಾಡಬೇಕು. ಮೂಲ ಸಂಸ್ಕೃತಿಗೆ ಚ್ಯುತಿ ಬಾರದಂತೆ ಸಮಾಜವನ್ನು ತಿದ್ದುವ ಸಾಮರ್ಥ್ಯ ನಮ್ಮಲ್ಲಿ ಮೂಡಿ ಬರಬೇಕು ಹಾಗೂ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಯಬೇಕು.

- ರಾಧಾಕೃಷ್ಣ ಉಳಿಯತ್ತಡ್ಕ, ಸಾಹಿತಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News