"ಭಾರತದಲ್ಲಿ ಜನರು ತೀವ್ರ ನೋವಿನಲ್ಲಿದ್ದಾರೆ, ಆರ್ಥಿಕತೆ 2019ರ ಮಟ್ಟಕ್ಕಿಂತಲೂ ಕೆಳಗಿದೆ"

Update: 2021-12-05 18:21 GMT
ಅಭಿಜಿತ್ ಬ್ಯಾನರ್ಜಿ(Photo credit: PTI)

ಅಹ್ಮದಾಬಾದ್,ಡಿ.5: ಭಾರತದಲ್ಲಿಯ ಜನರು ತೀವ್ರ ನೋವನ್ನು ಅನುಭವಿಸುತ್ತಿದ್ದಾರೆ ಮತ್ತು ಆರ್ಥಿಕತೆಯು ಈಗಲೂ 2019ರ ಮಟ್ಟಕ್ಕಿಂತ ಕೆಳಗೇ ಇದೆ, ಜನರ ಸಣ್ಣ ಆಕಾಂಕ್ಷೆಗಳು ಈಗ ಇನ್ನೂ ಸಣ್ಣದಾಗುತ್ತಿವೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಆರ್ಥಿಕ ತಜ್ಞ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

ಶನಿವಾರ ರಾತ್ರಿ ಆನ್‌ಲೈನ್‌ನಲ್ಲಿ ನಡೆದ ಅಹ್ಮದಾಬಾದ್ ವಿವಿಯ 11ನೇ ವಾರ್ಷಿಕ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅಮೆರಿಕದಿಂದ ವರ್ಚುವಲ್ ಭಾಷಣವನ್ನು ಮಾಡಿದ ಬ್ಯಾನರ್ಜಿ,ಪ.ಬಂಗಾಳಕ್ಕೆ ತನ್ನ ಇತ್ತೀಚಿನ ಭೇಟಿಯ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡರು.
 
‘ನೀವು (ವಿದ್ಯಾರ್ಥಿಗಳು) ಮರಳಿ ನೀಡುವ ಸ್ಥಿತಿಯಲ್ಲಿದ್ದೀರಿ. ಸಮಾಜಕ್ಕೆ ನಿಜವಾಗಿಯೂ ಅದರ ಅಗತ್ಯವಿದೆ. ನಾವಿಂದು ಭಾರತದಲ್ಲಿ ಅತ್ಯಂತ ನೋವಿನ ಸಮಯದಲ್ಲಿದ್ದೇವೆ. ನಾನು ಇತ್ತೀಚಿಗೆ ಗ್ರಾಮೀಣ ಪ.ಬಂಗಾಳದಲ್ಲಿ ಕೆಲ ಸಮಯ ಕಳೆದಿದ್ದೇನೆ. ಮೊದಲೇ ಮೊಟಕುಗೊಂಡಿದ್ದ ಜನರ ಆಕಾಂಕ್ಷೆಗಳು ಈಗ ಇನ್ನಷ್ಟು ಸಣ್ಣದಾಗಿವೆ ’ ಎಂದ ಅವರು,‘ನಾವಿಂದು ತುಂಬ ನೋವಿನ ಘಳಿಗೆಯಲ್ಲಿದ್ದೇವೆ,ಆರ್ಥಿಕತೆ ಈಗಲೂ 2019ರ ಮಟ್ಟಕ್ಕಿಂತ ಕೆಳಗೆಯೇ ಇದೆ. ಎಷ್ಟು ಕೆಳಗಿದೆ ಎನ್ನುವುದು ನಮಗೆ ಗೊತ್ತಿಲ್ಲ,ಆದರೆ ಅದು ಸಾಕಷ್ಟು ಕೆಳಗೇ ಇದೆ. ನಾನು ಯಾರನ್ನೂ ದೂರುತ್ತಿಲ್ಲ,ಕೇವಲ ಹೇಳುತ್ತಿದ್ದೇನೆ ’ಎಂದರು.

ತಮ್ಮ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವಾಗ ಕುಟುಂಬ ಅಥವಾ ಸಮಾಜದ ಒತ್ತಡಕ್ಕೆ ಬಲಿಯಾಗದಂತೆ ವಿದ್ಯಾರ್ಥಿಗಳನ್ನು ಆಗ್ರಹಿಸಿದ ಬ್ಯಾನರ್ಜಿ,ಆದರೆ ಜೀವನದಲ್ಲಿ ನಿಜಕ್ಕೂ ಏನನ್ನು ಮಾಡಲು ಬಯಸಿದ್ದೀರೋ ಅದನ್ನು ಮಾಡಲು ನಿಮಗೆ ಧೈರ್ಯವಿರಬೇಕು ಎಂದು ಕಿವಿಮಾತು ಹೇಳಿದರು.

‘ನಾನು ದಿಲ್ಲಿಯ ಜೆಎನ್‌ಯು ತೊರೆದು ಹಾರ್ವರ್ಡ್ ಗೆ ತೆರಳಲಿದ್ದಾಗ ವಿದ್ಯಾರ್ಥಿಗಳ ಪ್ರತಿಭಟನೆಯೊಂದರಲ್ಲಿ ಪಾಲ್ಗೊಂಡಿದ್ದೆ ಮತ್ತು ಅದಕ್ಕಾಗಿ ನನ್ನನ್ನು ತಿಹಾರ ಜೈಲಿನಲ್ಲಿ 10 ದಿನ ಬಂಧನದಲ್ಲಿಡಲಾಗಿತ್ತು. ನಾನು ಹೊರಗೆ ಬಂದಾಗ,ವೃತ್ತಿಜೀವನವನ್ನು ಹಾಳುಮಾಡಿಕೊಂಡಿದ್ದೇನೆ ಮತ್ತು ಹಾರ್ವರ್ಡ್ ಅಥವಾ ಅಮೆರಿಕ ಎಂದೂ ಪ್ರವೇಶ ನೀಡುವುದಿಲ್ಲ ಎಂದು ಬಹಳಷ್ಟು ಹಿರಿಯರು ನನಗೆ ಹೇಳಿದ್ದರು. ನಾನು ವಿಷಾದಿಸಬೇಕೆಂದು ಅವರು ಯೋಚಿಸಿದ್ದರು ಎಂದರು. 

ವೃತ್ತಿಜೀವನದ ಆಯ್ಕೆಯ ಕುರಿತು ತನ್ನ ಮಾತನ್ನು ಪುಷ್ಟೀಕರಿಸಲು ಬ್ಯಾನರ್ಜಿ,ಭಾರತದ ಇಬ್ಬರು ಮಹಾನ್ ಚಿತ್ರನಿರ್ದೇಶಕರಾದ ಸತ್ಯಜಿತ್ ರೇ ಮತ್ತು ಶ್ಯಾಮ್ ಬೆನೆಗಲ್ ಅವರು ಅರ್ಥಶಾಸ್ತ್ರದ ಪದವೀಧರರಾಗಿದ್ದರು,ಆದರೆ ಅವರು ಬೇರೆಯೇ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದ್ದರು ಮತ್ತು ಜೀವನದಲ್ಲಿ ಉತ್ತಮ ಸಾಧನೆಯನ್ನು ಮಾಡಿದ್ದರು. ಹೀಗಾಗಿ ನಿರ್ದಿಷ್ಟ ತರಬೇತಿಯ ಬದಲು ನೀವು ಉತ್ಸಾಹಭರಿತ,ಚಿಂತನಶೀಲ ಮತ್ತು ಮುಕ್ತ ಮನಸ್ಸಿನ ಮಾನವನಾಗುವುದು ನಿಜಕ್ಕೂ ಮುಖ್ಯವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News