ಮ್ಯಾನ್ಮಾರ್:‌ ಆಂಗ್‌ ಸಾನ್‌ ಸೂಕಿಗೆ 4 ವರ್ಷಗಳ ಜೈಲುಶಿಕ್ಷೆ ವಿಧಿಸಿದ ಸೇನಾಡಳಿತ

Update: 2021-12-06 18:04 GMT

ಯಾಂಗಾನ್, ಡಿ.6: ಸೇನೆಯ ವಿರುದ್ಧ ದಂಗೆಗೆ ಪ್ರಚೋದನೆ ನೀಡಿದ ಮತ್ತು ಕೊರೋನ ನಿಯಮವನ್ನು ಉಲ್ಲಂಘಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನ ಪದಚ್ಯುತ ನಾಯಕಿ ಆಂಗ್ ಸಾನ್ ಸೂಕಿಗೆ ವಿಶೇಷ ನ್ಯಾಯಾಲಯ 4 ವರ್ಷದ ಜೈಲುಶಿಕ್ಷೆ ವಿಧಿಸಿರುವುದಾಗಿ ವರದಿಯಾಗಿದೆ. ‌

76 ವರ್ಷದ ಸೂಕಿ ವಿರುದ್ಧ ದಾಖಲಾಗಿರುವ ಸರಣಿ ಪ್ರಕರಣಗಳಲ್ಲಿ ಇನ್ನೂ ಕೆಲವು ಪ್ರಕರಣಗಳ ಕುರಿತ ತೀರ್ಪು ಬರಬೇಕಿದೆ. ಫೆ.1ರಂದು ಸೂಕಿ ನೇತೃತ್ವದ ಸರಕಾರವನ್ನು ಪದಚ್ಯುತಗೊಳಿಸಿದ್ದ ಸೇನೆ ಅಧಿಕಾರ ವಶಪಡಿಸಿಕೊಂಡಂದಿನಿಂದ ಸೂಕಿ ಬಂಧನದಲ್ಲಿದ್ದಾರೆ. ಸರಕಾರದ ರಹಸ್ಯ ಉಲ್ಲಂಘನೆ, ಭ್ರಷ್ಟಾಚಾರ, ಚುನಾವಣೆಯಲ್ಲಿ ಅಕ್ರಮ ಎಸಗಿರುವುದು ಸೇರಿದಂತೆ ಹಲವು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿದ್ದು ಅಪರಾಧಿಯೆಂದು ಸಾಬೀತಾದರೆ ಸುಮಾರು 100 ವರ್ಷ ಜೈಲುಶಿಕ್ಷೆಗೆ ಗುರಿಯಾಗಲಿದ್ದಾರೆ. 

ಸೇನೆಯ ವಿರುದ್ಧ ದಂಗೆಗೆ ಪ್ರಚೋದನೆ ನೀಡಿದ್ದಕ್ಕೆ 2 ವರ್ಷ, ಕೊರೋನ ಸೋಂಕಿಗೆ ಸಂಬಂಧಿಸಿದ ಪ್ರಾಕೃತಿಕ ದುರಂತ ಕಾಯ್ದೆಯ ಉಲ್ಲಂಘನೆಗೆ ಮತ್ತೂ 2 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ ಎಂದು ಸೇನಾಡಳಿತದ ವಕ್ತಾರ ಝಾವೊ ಮಿನ್ಟುನ್ ಹೇಳಿಕೆಯನ್ನು ಉಲ್ಲೇಖಿಸಿ ಎಎಫ್ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಇದೇ ಅಪರಾಧದಡಿ ಮಾಜಿ ಅಧ್ಯಕ್ಷ ವಿನ್ ಮಿಂಟ್ ಅವರಿಗೂ 4 ವರ್ಷ ಜೈಲುಶಿಕ್ಷೆ ವಿಧಿಸಲಾಗಿದೆ. ಆದರೆ ಇಬ್ಬರು ಮುಖಂಡರನ್ನು ಇನ್ನೂ ಜೈಲಿನಲ್ಲಿ ಇರಿಸಲಾಗಿಲ್ಲ. ಅವರು ಈಗ ಬಂಧನದಲ್ಲಿರುವ ಸ್ಥಳದಲ್ಲೇ ಉಳಿದ ಪ್ರಕರಣಗಳ ವಿಚಾರಣೆ ಮುಗಿದ ಬಳಿಕ ಅವರನ್ನು ಜೈಲಿಗೆ ಹಾಕಲಾಗುವುದು ಎಂದವರು ಹೇಳಿದ್ದಾರೆ. 

1989ರಿಂದ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗಾಗಿ ಹೋರಾಟ ನಡೆಸುತ್ತಿರುವ ಸೂಕಿ, ಇದುವರೆಗೆ 15 ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಸೂಕಿ ಸ್ಪರ್ಧಿಸದಂತೆ ನೋಡಿಕೊಳ್ಳುವುದು ಸೇನಾಡಳಿತದ ಉದ್ದೇಶವಾಗಿದೆ. ಮ್ಯಾನ್ಮಾರ್ ಕಾನೂನಿನ ಪ್ರಕಾರ, ಕ್ರಿಮಿನಲ್ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದವರು ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಸೇನಾ ಕ್ರಾಂತಿಯನ್ನು ಖಂಡಿಸಿ ಸೂಕಿ ಅವರ ಪಕ್ಷ ‘ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ’ ಫೇಸ್‌ಬುಕ್‌ನಲ್ಲಿ ನೀಡಿದ ಹೇಳಿಕೆಗೆ ಸಂಬಂಧಿಸಿ ಪ್ರಥಮ ಪ್ರಕರಣ ದಾಖಲಾಗಿದ್ದರೆ, ಕೊರೋನ ಸೋಂಕು ನಿಯಮ ಉಲ್ಲಂಘನೆ ಪ್ರಕರಣ ಕಳೆದ ವರ್ಷ ನಡೆದ ಚುನಾವಣೆಗೆ ಸಂಬಂಧಿಸಿದ್ದಾಗಿದೆ( ಚುನಾವಣೆಯಲ್ಲಿ ಸೂಕಿ ಅವರ ಪಕ್ಷ ಭರ್ಜರಿ ಬಹುಮತದಿಂದ ಗೆಲುವು ಸಾಧಿಸಿತ್ತು). 

ಚುನಾವಣೆಯಲ್ಲಿ ಸೇನೆ ಬೆಂಬಲಿತ ಪಕ್ಷ ಪರಾಜಯಗೊಂಡಿದ್ದು ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಸೇನೆ ಆರೋಪಿಸಿತ್ತು. ಆದರೆ ಚುನಾವಣೆಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಚುನಾವಣೆಯ ಉಸ್ತುವಾರಿ ವಹಿಸಿದ್ದ ಸ್ವತಂತ್ರ ವೀಕ್ಷಕರ ತಂಡ ಹೇಳಿತ್ತು. ನೇಪಿಡಾವ್ನಲ್ಲಿ ಸೋಮವಾರ ನಡೆದ ವಿಶೇಷ ನ್ಯಾಯಾಲಯದ ಕಾರ್ಯಕಲಾಪಕ್ಕೆ ಹಾಜರಾಗಲು ಪತ್ರಕರ್ತರಿಗೆ ಅವಕಾಶ ನಿರಾಕರಿಸಲಾಗಿತ್ತು. ಸೂಕಿ ಅವರ ವಕೀಲರು ಮಾಧ್ಯಮದವರೊಂದಿಗೆ ಮಾತನಾನಾಡುವುದನ್ನೂ ನಿಷೇಧಿಸಲಾಗಿತ್ತು. ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಸೂಕಿ ಅವರ ವಕೀಲರು ಹೇಳಿದ್ದಾರೆ.

ಈ ಮಧ್ಯೆ, ಸೂಕಿ ಹಾಗೂ ವಿನ್ ಮಿಂಟ್ ವಿರುದ್ಧ ಕಳೆದ ವಾರ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ನ್ಯಾಷನಲ್ ಲೀಗ್ ಪಕ್ಷದ ಹಲವು ಮುಖಂಡರಿಗೆ ದೀರ್ಘಾವಧಿ ಜೈಲುಶಿಕ್ಷೆ ಪ್ರಕಟಿಸಲಾಗಿದೆ. ಪಕ್ಷದ ಮುಖಂಡ, ಮಾಜಿ ಮುಖ್ಯಮಂತ್ರಿಯೊಬ್ಬರಿಗೆ 75 ವರ್ಷದ ಜೈಲುಶಿಕ್ಷೆ, ಸೂಕಿಯ ನಿಕಟವರ್ತಿ ಮುಖಂಡನಿಗೆ 20 ವರ್ಷದ ಜೈಲುಶಿಕ್ಷೆಯಾಗಿದೆ. 

ಆ್ಯಮ್ನೆಸ್ಟಿ ಖಂಡನೆ: ಸೂಕಿ ವಿರುದ್ಧದ ತೀರ್ಪಿಗೆ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಖಂಡನೆ ಸೂಚಿಸಿದೆ. ಎಲ್ಲಾ ವಿಪಕ್ಷದವರನ್ನೂ ನಿವಾರಿಸಿ, ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಹತ್ತಿಕ್ಕುವ ಸೇನಾಡಳಿತದ ಉದ್ದೇಶಕ್ಕೆ ಬೋಗಸ್ ಆರೋಪದಡಿ ಸೂಕಿಗೆ ಶಿಕ್ಷೆ ವಿಧಿಸಿರುವುದು ಮತ್ತೊಂದು ಉದಾಹರಣೆಯಾಗಿದೆ ಎಂದು ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ನ ಉಪ ಪ್ರಾದೇಶಿಕ ನಿರ್ದೇಶಕ ಮಿಂಗ್ ಯು ಹಾ ಖಂಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News