‘ಇದು ಹಾಸ್ಯಾಸ್ಪದ’: ಕೋವಿಡ್ ಪರಿಹಾರದ ಕುರಿತು ರಾಜ್ಯಗಳಿಗೆ ಸುಪ್ರೀಂ ತರಾಟೆ

Update: 2021-12-06 15:04 GMT

ಹೊಸದಿಲ್ಲಿ,ಡಿ.6: ಕೋವಿಡ್‌ನಿಂದಾಗಿ ಸಂಭವಿಸಿರುವ ಸಾವುಗಳಿಗೆ ಪರಿಹಾರ ಪಾವತಿಯಲ್ಲಿ ವಿಳಂಬಕ್ಕಾಗಿ ಮಹಾರಾಷ್ಟ್ರ,ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನ ಸೇರಿದಂತೆ ರಾಜ್ಯ ಸರಕಾರಗಳಿಗೆ ಸರ್ವೋಚ್ಚ ನ್ಯಾಯಾಲಯವು ಸೋಮವಾರ ಚಾಟಿಯೇಟು ನೀಡಿದೆ. ಕೋವಿಡ್‌ನಿಂದ ಸಾವನ್ನಪ್ಪಿದವರ ಕುಟುಂಬಗಳಿಗೆ ವಿವಿಧ ಜನಹಿತ ಯೋಜನೆಗಳಡಿ ಕೇಂದ್ರ ಮತ್ತು ರಾಜ್ಯದಿಂದ ನೀಡಲಾಗುವ ಪರಿಹಾರಕ್ಕೆ ಅತಿರಿಕ್ತವಾಗಿ 50,000 ರೂ.ಗಳನ್ನು ಪಾವತಿಸಲು ಸರ್ವೋಚ್ಚ ನ್ಯಾಯಾಲಯವು ಕಳೆದ ಅಕ್ಟೋಬರ್ನಲ್ಲಿ ಅನುಮೋದಿಸಿತ್ತು.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಬಿ.ವಿ.ನಾಗರತ್ನಾ ಅವರ ಪೀಠವು ಈ ಬಗ್ಗೆ ವಿಚಾರಣೆಯನ್ನು ಕೈಗೆತ್ತಿಕೊಂಡಿತ್ತು.

‘ಮಹಾರಾಷ್ಟ್ರ ಸರಕಾರವು ಸಲ್ಲಿಸಿರುವ ಅಫಿಡವಿಟ್ ನಮಗೆ ಎಳ್ಳಷ್ಟೂ ತೃಪ್ತಿಯನ್ನು ನೀಡಿಲ್ಲ. ಮಹಾರಾಷ್ಟ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಸಾವುಗಳು ದಾಖಲಾಗಿವೆ,ಆದರೆ ಕೇವಲ 37,000 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈವರೆಗೆ ಒಬ್ಬನೇ ಒಬ್ಬ ವ್ಯಕ್ತಿಗೆ ಕೋವಿಡ್ ಪರಿಹಾರವನ್ನು ಪಾವತಿಸಲಾಗಿಲ್ಲ ’ ಎಂದು ಮಹಾರಾಷ್ಟ ಸರಕಾರದ ಪರ ವಕೀಲ ಸಚಿನ್ ಪಾಟೀಲ್ ಅವರಿಗೆ ತಿಳಿಸಿದ ನ್ಯಾ.ಶಾ ಅವರು,‌ ಇದು ಹಾಸ್ಯಾಸ್ಪದವಾಗಿದೆ ಮತ್ತು ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಪರಿಹಾರ ವಿತರಣೆಯನ್ನು ಆರಂಭಿಸಲು ಹೆಚ್ಚಿನ ಕಾಲಾವಕಾಶವನ್ನು ಕೋರಿದ ಪಾಟೀಲ,ಅನುಸರಣೆ ಕುರಿತು ಶೀಘ್ರವೇ ಅಫಿಡವಿಟ್ ಸಲ್ಲಿಸುತ್ತೇವೆ ಎಂದು ತಿಳಿಸಿದರು.
‘ರಾಜ್ಯ ಸರಕಾರದ ವಿರುದ್ಧ ನಾವು ಖಂಡನೆಯನ್ನು ಹೊರಡಿಸುತ್ತೇವೆ ’ ಎಂದು ಅವರಿಗೆ ಎಚ್ಚರಿಕೆ ನೀಡಿದ ನ್ಯಾ.ಶಾ,ಅಫಿಡವಿಟ್ ಅನ್ನು ನಿಮ್ಮ ಜೇಬಿನಲ್ಲಿಯೇ ಇಟ್ಟುಕೊಳ್ಳಿ ಮತ್ತು ಅದನ್ನು ನಿಮ್ಮ ಮುಖ್ಯಮಂತ್ರಿಗಳಿಗೆ ನೀಡಿ ಎಂದು ಕುಟುಕಿದರು. ಬಳಿಕ ಸರ್ವೋಚ್ಚ ನ್ಯಾಯಾಲಯವು ಪರಿಹಾರ ಪಾವತಿಯನ್ನು ತಕ್ಷಣವೇ ಆರಂಭಿಸುವಂತೆ ಮಹಾರಾಷ್ಟ್ರ ಸರಕಾರವನ್ನು ಆದೇಶಿಸಿತು.

ಪ.ಬಂಗಾಳದಲ್ಲಿ 19,000ಕ್ಕೂ ಹೆಚ್ಚು ಕೋವಿಡ್ ಸಾವುಗಳು ಸಂಭವಿಸಿವೆ ಮತ್ತು ಕೇವಲ 467 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 110 ಜನರಿಗೆ ಮಾತ್ರ ಈವರೆಗೆ ಪರಿಹಾರವನ್ನು ವಿತರಿಸಲಾಗಿದೆ. ಅತ್ತ ರಾಜಸ್ಥಾನದಲ್ಲಿ ಸುಮಾರು 9,000 ಸಾವುಗಳು ಸಂಭವಿಸಿವೆ,ಕೇವಲ 595 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈವರೆಗೆ ಒಬ್ಬರಿಗೂ ಪರಿಹಾರವನ್ನು ವಿತರಿಸಿಲ್ಲ ಎಂದು ಬೆಟ್ಟು ಮಾಡಿದ ಪೀಠವು ಉಭಯ ರಾಜ್ಯಗಳ ಪರ ವಕೀಲರನ್ನು ತರಾಟೆಗೆತ್ತಿಕೊಂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News