ವಿಪತ್ತು ನಿರ್ವಹಣೆಗೆ ಭೌಗೋಳಿಕ ತಂತ್ರಜ್ಞಾನಗಳ ಬಳಕೆ: ಪೈಲಟ್ ಯೋಜನೆ ಉಡುಪಿ ಸೇರಿ ರಾಜ್ಯದ 5 ಜಿಲ್ಲೆಗಳಲ್ಲಿ ಜಾರಿ

Update: 2021-12-07 14:24 GMT
2020ರಲ್ಲಿ ಉಡುಪಿ ಜಿಲ್ಲೆಯಲ್ಲಿ ಕಾಣಿಸಿಕೊಂಡ ಪ್ರಾಕೃತಿಕ ವಿಕೋಪದ ವೇಳೆ ನಡೆದ ರಕ್ಷಣಾ ಕಾರ್ಯಾಚರಣೆ

ಉಡುಪಿ, ಡಿ.7: ಪ್ರಾಕೃತಿಕ ವಿಪತ್ತುಗಳು ಹೆಚ್ಚಾಗಿ ಯಾವುದೇ ಮುನ್ಸೂಚನೆಯನ್ನು ನೀಡದೇ ಸಂಭವಿಸುತ್ತವೆ. ಇತ್ತೀಚಿನ ದಿನಗಳಲ್ಲಂತೂ ಇವುಗಳ ಪ್ರಮಾಣ ಅಧಿಕವಾಗುತ್ತಿದೆ. ಒಂದು ವೇಳೆ ಮುನ್ಸೂಚನೆ ಇದ್ದರೂ ಅದರ ಹಾನಿಯ ಪ್ರಮಾಣವನ್ನು ತಕ್ಷಣದಲ್ಲಿ ಅಂದಾಜಿಸಲು ಸಾಧ್ಯವಾಗುವುದಿಲ್ಲ. ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಪ್ರತಿಯೊಂದು ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಸಹ ಹಲವು ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ.

ಅಲ್ಲದೇ ನಿರ್ವಹಣೆಗೆ ಸಂಬಂಧಿಸಿ ಸಿದ್ಧಪಡಿಸಿಟ್ಟಿರುವ ಎಲ್ಲಾ ಯೋಜನೆಗಳು ಪುಸ್ತಕ ರೂಪದಲ್ಲಿದ್ದು, ವಿಪತ್ತು ಸಂದರ್ಭದಲ್ಲಿ ತುರ್ತು ಪರಿಹಾರ ಮತ್ತು ಸಂಪನ್ಮೂಲ ಕ್ರೋಡೀಕರಣ, ಉಪಕರಣಗಳು ಮತ್ತು ಮಾನವ ಸಂಪನ್ಮೂಲ ಕ್ರಮಗಳನ್ನು ಕೈಗೊಳ್ಳಲು ಭೌಗೋಳಿಕ ಮಾಹಿತಿ ತಂತ್ರಜ್ಞಾನ (ಜಿಐಎಸ್) ಆಧಾರಿತ ನಕ್ಷೆ ಮತ್ತು ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ಅತ್ಯಂತ ಅಗತ್ಯವೆನಿಸಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯನ್ನು ಅಭಿವೃದ್ಧಿಗೊಳಿಸಲಾ ಗುತ್ತಿದ್ದು, ಈ ಯೋಜನೆಯು ದೇಶದ ಪ್ರಮುಖ ಕಾರ್ಯಕ್ರಮವಾದ ಡಿಜಿಟಲ್ ಇಂಡಿಯಾದ ಒಂದು ಭಾಗವಾಗಿದೆ. ಇಡೀ ದೇಶದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕದಲ್ಲಿ ಪ್ರಾಯೋಗಿಕವಾಗಿ ರಾಜ್ಯದ 5 ಜಿಲ್ಲೆಗಳಲ್ಲಿ ಇದನ್ನು ಅನುಷ್ಠಾನ ಗೊಳಿಸಲಾಗುತ್ತಿದ್ದು, ಉಡುಪಿ ಜಿಲ್ಲೆಯೂ ಇದರಲ್ಲಿ ಸೇರಿದೆ.

ದತ್ತಾಂಶಗಳ ಕ್ರೋಡೀಕರಣ:  ಈ ಯೋಜನೆಯು ವಿಪತ್ತು ನಿರ್ವಹಣೆಗೆ ಸಂಬಂಧಪಟ್ಟ ಇಲಾಖೆಗಳ ಮಾಹಿತಿ, ದತ್ತಾಂಶ, ಸಂಪನ್ಮೂಲಗಳು ಹಾಗೂ ಜಿಲ್ಲಾ ಮಟ್ಟದ ವಿಪತ್ತು ಸಂಭವನೀಯ ಪ್ರದೇಶಗಳ ನಕ್ಷೆಗಳನ್ನು ಹಾಗೂ ವಿಪತ್ತು ನಿರ್ವಹಣೆಯಲ್ಲಿ ಪ್ರಮಾಣಿತ ವಿಪತ್ತು ಕಾರ್ಯಾಚರಣೆ ಕಾರ್ಯ ವಿಧಾನಗಳು ಮತ್ತು ಮಾರ್ಗಸೂಚಿಗಳನ್ನು ಒಳಗೊಂಡಿದೆ. ಇದಕ್ಕಾಗಿ ವಿಪತ್ತು ನಿರ್ವಹಣೆಯ ಸಂಬಂಧಪಟ್ಟ ಇಲಾಖೆಗಳು ಮತ್ತು ಅಧಿಕಾರಿಗಳ ವಿಪತ್ತು ನಿರ್ವಹಣೆಗೆ ಅಗತ್ಯವಿರುವ ಮಾಹಿತಿ, ದತ್ತಾಂಶಗಳ ಸಂಗ್ರಹಣೆ ಮತ್ತು ರವಾನೆ, ಸಂಯೋಜನೆ ಗಾಗಿ ಮೊಬೈಲ್ ತಂತ್ರಾಂಶ ಮತ್ತು ಅಂರ್ತಜಾಲ ತಾಣವನ್ನು ಅಭಿವೃದ್ಧಿ ಗೊಳಿಸಲಾಗಿದೆ.

ವಿಪತ್ತು ಸಂಭವಿಸಿದ ಸಂದರ್ಭ ಸ್ಥಳೀಯ ಪ್ರದೇಶದಲ್ಲಿ ರಕ್ಷಣೆಗೆ ಅಗತ್ಯವಿರುವ ಲಭ್ಯ ಸಂಪನ್ಮೂಲಗಳು, ಲಭ್ಯವಿರುವ ಸಿಬ್ಬಂದಿ, ವಿಪತ್ತು ನಿರ್ವಹಣಾ ತರಬೇತಿ ಹೊಂದಿದ ಸ್ಥಳೀಯ ನಿವಾಸಿಗಳು, ಸಮೀಪದ ಶಾಲೆ, ಆಸ್ಪತ್ರೆ, ಅಲ್ಲಿನ ವೈದ್ಯಕೀಯ ಸೌಲಭ್ಯಗಳು ಮತ್ತು ಸಿಬ್ಬಂದಿ, ಕಾಳಜಿ ಕೇಂದ್ರಗಳು ಇವುಗಳೆಲ್ಲವುಗಳ ಬಗೆಗಿನ ಮಾಹಿತಿ, ಸಂಬಂಧಪಟ್ಟವರನ್ನು ಸಂಪರ್ಕಿಸ ಬಹುದಾದ ಮೊಬೈಲ್ ಸಂಖ್ಯೆ ಇವೆಲ್ಲಾ ಮಾಹಿತಿಗಳು ಕ್ಷಣಮಾತ್ರದಲ್ಲಿ ಬೆರಳ ತುದಿಯಲ್ಲಿಯೇ ಈ ಯೋಜನೆಯ ಮೂಲಕ ಲಭ್ಯವಾಗಲಿದ್ದು, ರಕ್ಷಣಾ ಕಾರ್ಯಗಳನ್ನು ಅತ್ಯಂತ ಶೀಘ್ರದಲ್ಲಿ ಕೈಗೊಳ್ಳಲು ನೆರವಾಗಲಿವೆ.

ವಿಪತ್ತು ಪರಿಣತರಿಗೆ ತರಬೇತಿ: ಜಿಲ್ಲೆಯ ಜಿಲ್ಲಾ ವಿಪತ್ತು ಪರಿಣಿತರಿಗೆ ಯೋಜನೆಯ ತಂತ್ರಾಂಶಗಳ ಬಳಕೆ ಮತ್ತು ಕಾರ್ಯವಿಧಾನಗಳ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದ್ದು, ಜಿಲ್ಲೆಯ ಎಲ್ಲಾ ಅಧಿಕಾರಿ ಮತ್ತು ತುರ್ತು ರಕ್ಷಣೆಗೆ ಸಿಬ್ಬಂದಿಗಳ ಮಾಹಿತಿ ಕ್ರೋಡೀಕರಣ ಕಾರ್ಯ ಆರಂಭಗೊಂಡಿದೆ. ಇವರುಗಳಿಗೆ ಮುಖ್ಯ ತರಬೇತುದಾರರಿಂದ ಮೊಬೈಲ್ ತಂತ್ರಾಂಶದ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ನಡೆಯಲಿದೆ. ಅಲ್ಲದೇ ಜಿಲ್ಲೆಯ ಎಲ್ಲಾ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಗೂ ಕ್ಷೇತ್ರ ಮೌಲ್ಯಮಾಪನ ಕುರಿತು ತರಬೇತಿ ನಡೆಯಲಿದ್ದು, 2022ರ ಜನವರಿ ತಿಂಗಳ ಅಂತ್ಯದೊಳಗೆ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯ ಕರಡು ರಚಿಸುವ ಗುರಿ ಹೊಂದಲಾಗಿದೆ.

ಯೋಜನೆಗೆ ಅಗತ್ಯವಾದ ವಿವಿಧ ಇಲಾಖೆಗಳ ಅಧಿಕೃತ ಮಾಹಿತಿ ಮತ್ತು ದತ್ತಾಂಶ ಸಂಗ್ರಹಣೆಯಲ್ಲಿ ಸಮನ್ವಯತೆ ಮತ್ತು ಮೇಲ್ವಿಚಾರಣೆ ಅತ್ಯಗತ್ಯ ವಾಗಿದ್ದು, ಮಾಹಿತಿ, ದತ್ತಾಂಶ ಸಂಗ್ರಹಣೆ ಮತ್ತು ಅವುಗಳನ್ನು ಅಧಿಕೃತ ಗೊಳಿಸಲು ನೋಡಲ್ ಅಧಿಕಾರಿಗಳನ್ನು ಸಹ ನಿಯೋಜಿಸಲಾಗಿದೆ.

ವೆಬ್‌ಸೈಟ್‌ನಲ್ಲಿ ಪ್ರಕಟ: ಯೋಜನೆಯು ಸಂಪೂರ್ಣವಾಗಿ ಸಿದ್ಧಗೊಂಡ ನಂತರ, ಅದರ ವಿವರಗಳನ್ನು ವೆಬ್‌ಸೈಟ್‌ನಲ್ಲಿ ಸಾರ್ವಜನಿಕರೂ ಸಹ ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಇದರಿಂದ ಸಾರ್ವಜನಿಕರು ತಮ್ಮ ವ್ಯಾಪ್ತಿಯಲ್ಲಿ ವಿಪತ್ತು ಸಂಭವಿಸಿದಾಗ ಲಭ್ಯವಿರುವ ಸುರಕ್ಷಾ ಉಪಕರಣಗಳು, ತುರ್ತು ಸಂದರ್ಭ ದಲ್ಲಿ ತೆರಳಬೇಕಾದ ಸಮೀಪದ ಸುರಕ್ಷಿತಾ ಸ್ಥಳಗಳು, ಅಲ್ಲಿಗೆ ತಲುಪಬೇಕಾದ ರಸ್ತೆ ಮಾರ್ಗ, ತಮ್ಮನ್ನು ಹುಡುಕಲು ಮತ್ತು ರಕ್ಷಿಸಲು ಸಂಪರ್ಕಿಸಬಹುದಾದ ಸಿಬ್ಬಂದಿಗಳ ಮಾಹಿತಿ ಎಲ್ಲವನ್ನೂ ವೀಕ್ಷಿಸಲು ಸಾಧ್ಯವಾಗಲಿದೆ.

ಯಾವುದೇ ಹೊಸ ಯೋಜನೆಗಳ ಅನುಷ್ಠಾನ ಸಂದರ್ಭದಲ್ಲಿ ಮೊದಲು ಪ್ರಾಯೋಗಿಕವಾಗಿ ಕೆಲವು ಜಿಲ್ಲೆಗಳಲ್ಲಿ ಅನುಷ್ಠಾನ ಮಾಡಿ, ಅದರ ಸಾಧಕ- ಭಾದಕಗಳನ್ನು ತಿಳಿದು ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತರುವುದು ಸಾಮಾನ್ಯ. ರಾಜ್ಯದಲ್ಲಿ ಪ್ರಮುಖ ಯೋಜನೆಗಳನ್ನು ಪೈಲಟ್ ಆಗಿ ಉಡುಪಿ ಜಿಲ್ಲೆಯಲ್ಲಿ ಆಯೋಜಿಸಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರಾಯೋಗಿಕ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾಗುತ್ತಿದ್ದು, ಇಲ್ಲಿ ಯೋಜನೆ ಯಶಸ್ವಿಯಾದರೆ ರಾಜ್ಯದಲ್ಲೂ ಯಶಸ್ವಿಯಾಗುತ್ತದೆ ಎಂಬ ಮಾತು ಇದೆ. ದೇಶದಲ್ಲೇ ಪ್ರಥಮ ವಾಗಿ ಪ್ರಾಯೋಗಿಕವಾಗಿ ಜಾರಿಯಾಗುತ್ತಿರುವ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯನ್ನೂ ಕೂಡಾ ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನ ಮಾಡಲು ಯೋಜನೆ ರೂಪಿಸಲಾಗಿದೆ.

''ತುರ್ತು ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವ ರೀತಿಯಲ್ಲಿ, ಎಲ್ಲಾ ಅತ್ಯಾವಶ್ಯಕ ಸೌಲಭ್ಯಗಳ ಮಾಹಿತಿ ಒಂದೇ ಕಡೆ ದೊರೆಯುವಂತೆ ಮಾಹಿತಿಗಳು ಕ್ರೋಡೀಕೃತವಾಗಿ ಲಭ್ಯವಿದ್ದಲ್ಲಿ, ಯಾವುದೇ ರೀತಿಯ ವಿಳಂಬವಿಲ್ಲದೇ ಶೀಘ್ರದಲ್ಲಿ ರಕ್ಷಣಾ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ. ಇದಕ್ಕೆ ಭೌಗೋಳಿಕ ಮಾಹಿತಿ ತಂತ್ರಜ್ಞಾನ ಆಧಾರಿತ ಜಿಲ್ಲಾ ವಿಫತ್ತು ನಿರ್ವಹಣೆ ಯೋಜನೆ ನೆರವು ನೀಡಲಿದೆ.

-ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News