ಬುದ್ಧರ ಚಿಂತನೆಗಳು ನೈತಿಕ ಬದುಕಿಗೆ ಪ್ರೆರಣೆ : ಬಿಕ್ಕುಣಿ ವಂದನಾ ಮಾತಾಜಿ

Update: 2021-12-07 14:39 GMT

ಉಡುಪಿ, ಡಿ.7: ಬಾಬಾ ಸಾಹೇಬ್ ಡಾ. ಬಿ.ಆರ್.ಅಂಬೇಡ್ಕರ ಅವರ 65ನೇ ಮಹಾ ಪರಿನಿಬ್ಬಾಣ ದಿನದ ನಮನ ಹಾಗೂ ಬುದ್ಧಿಸ್ಟ್ ಸೊಸೈಟಿ ಅಫ್ ಇಂಡಿಯ ಇದರ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ರವಿವಾರ ಆದಿ ಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಬೋಧಿರತ್ನ ಬಂತೇಜಿ ಹಾಗೂ ಬಿಕ್ಕುಣಿ ವಂದನಾ ಮಾತಾಜಿ ಉದ್ಘಾಟಿಸಿ ಧಮ್ಮೋಪದೇಶ ನೀಡಿದರು. ಬಳಿಕ ಮಾತನಾಡಿದ ವಂದನಾ ಮಾತಾಜಿ, ಜಗತ್ತಿನಲ್ಲಿ ದುಃಖವಿದೆ ಮತ್ತು ಅದಕ್ಕೆ ಕಾರಣವಿದೆ. ದುಃಖ ನಿವಾರಣೆಯ ಮಾರ್ಗವಿದೆ. ದುಃಖ ಉಂಟಾಗದಂತೆ ಬದುಕುವ ಮಾರ್ಗವೇ ಭಗವಾನ್ ಬುದ್ಧರ ಮಧ್ಯಮ ಮಾರ್ಗ. ಬುದ್ಧರ ಚಿಂತನೆಗಳು ಮನುಷ್ಯ ಕೇಂದ್ರಿತವಾಗಿರುವ ಮನುಷ್ಯನನ್ನು ನೈತಿಕ ಬದುಕಿಗೆ ಪ್ರೆರೇಪಿಸುವ ಉದಾತ್ತ ಗುಣಗಳನ್ನು ಹೊಂದಿದೆ ಎಂದು ಹೇಳಿದರು.

ಅಯುಷ್ಮಾನ್ ನಾಗಸಿದ್ದಾರ್ಥ ಹೊಲೆಯಾರ್, ಅಂಬೇಡ್ಕರ್ ಅವರಿಗೆ ನುಡಿನಮನ ಸಲ್ಲಿಸಿದರು. ತದನಂತರ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಇದರ ರಾಜ್ಯ ಪ್ರತಿನಿಧಿ ಹಾಗೂ ಸಮತಾ ಸೈನಿಕ ದಳದ ರಾಜ್ಯ ಕಾರ್ಯದರ್ಶಿ ಅಯುಷ್ಮಾನ್ ವಿರೂಪಾಕ್ಷ ಎಫ್. ಮೇತ್ರಿ, ಜಿಲ್ಲಾ ಸಮಿತಿ ಪದಾಧಿಕಾರಿಗಳಿಗೆ ದಮ್ಮದ ಶಾಲು ಹೊದಿಸಿ ಪದಗ್ರಹಣ ನೆರವೇರಿಸಿದರು.

ಅಧ್ಯಕ್ಷ ರಾಘವೇಂದ್ರ ಜಿ. ಹಾಗೂ ಪ್ರಧಾನ ಕಾರ್ಯದರ್ಶಿ ರಮೇಶ್ ಇತರ ಪದಾಧಿಕಾರಿಗಳೊಂದಿಗೆ ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಇದರ ಜಿಲ್ಲಾ ಸಮಿತಿಯ ಜವಾಬ್ದಾರಿಗಳನ್ನು ವಹಿಸಿಕೊಂಡರು. 2022ನೇ ವರ್ಷದ ಸೊಸೈಟಿಯ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಯನ್ ಮಲ್ಪೆ, ಮಂಜುನಾಥ ಗಿಳಿಯಾರ, ಶೇಖರ ಹಾವಂಜೆ, ರಮೆಶ ಕೋಟ್ಯಾನ್, ಸುರೇಶ್ ಬಾರ್ಕೂರು, ಕೃಷ್ಣ ಎಲ್‌ಐಸಿ, ದಮ್ಮಚಾರಿ ಅಯುಷ್ಮಾನ್, ಎಸ್.ಆರ್.ಲಕ್ಷ್ಮಣ್, ಭಾಸ್ಕರ್ ಕವತಾರ್, ಭಾಸ್ಕರ ವಿಟ್ಲಾ, ಕೇಶವ್, ನಯನ್ ಮುಂತಾದವರು ಉಪಸ್ಥಿತರಿದ್ದರು. ಖಜಾಂಚಿ ರವೀಂದ್ರ ಬಂಟಕಲ್ ಸ್ವಾಗತಿಸಿದರು. ಸೊಸೈಟಿಯ ದ.ಕ. ಜಿಲ್ಲಾ ಖಜಾಂಚಿ ಮನೋಹರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News