ಆರೋಪಿ ವಕೀಲ ರಾಜೇಶ್ ಭಟ್ ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲ: ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಆರೋಪ

Update: 2021-12-07 16:03 GMT

ಮಂಗಳೂರು, ಡಿ.7: ಕಾನೂನು ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ನಾಪತ್ತೆಯಾಗಿರುವ ಆರೋಪಿ ವಕೀಲ ಕೆ.ಎಸ್.ಎನ್. ರಾಜೇಶ್ ಭಟ್ ನನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಈ ಪ್ರಕರಣದ ತನಿಖೆಯನ್ನು ಎಸಿಪಿ ಬದಲು ಡಿಸಿಪಿಗೆ ವಹಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಸನ್ನ ರವಿ ಆಗ್ರಹಿಸಿದ್ದಾರೆ.

ಮಂಗಳವಾರ ಮಂಗಳೂರಿನಲ್ಲಿ ದ.ಕ. ಜಿಲ್ಲಾ ಆಲ್ ಕಾಲೇಜ್ ಸ್ಟೂಡೆಂಟ್ಸ್ ಅಸೋಸಿಯೇಷನ್ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಸನ್ನ ರವಿ, ಅ.18ರಂದು ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಆರೋಪಿ ವಕೀಲ ರಾಜೇಶ್ ಭಟ್ ವಿರುದ್ಧ ಎಫ್‌ಐಆರ್ ಆಗಿತ್ತು. ಅ.23ರಂದು ಬಾರ್ ಕೌನ್ಸಿಲ್‌ನಿಂದ ಆತನನ್ನು ಅಮಾನತು ಮಾಡಲಾಗಿದೆ. 29ರಂದು ಜಿಲ್ಲಾ 6ನೇ ಹೆಚ್ಚುವರಿ ಸತ್ರ ನ್ಯಾಯಾಲಯ, ಬಳಿಕ ಹೈಕೋರ್ಟ್ ಕೂಡ ನಿರೀಕ್ಷಣಾ ಜಾಮೀನು ಪುರಸ್ಕರಿಸಿಲ್ಲ. ಘಟನೆ ನಡೆದು 50 ದಿನ ಕಳೆದರೂ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.

ಆರೋಪಿ ರಾಜೇಶ್ ಭಟ್ ಪತ್ತೆಗೆ ಪೊಲೀಸ್ ಕಮಿಷನರ್ ನಾಲ್ಕು ತಂಡ ರಚಿಸಿದ್ದಾಗಿ ಹೇಳಿದ್ದಾರೆ. ಆರೋಪಿ ಕೈಗೆ ಸಿಗದಂತೆ ಬಹುದೂರ ಪರಾರಿಯಾಗಿರುವ ಸಾಧ್ಯತೆ ಇದ್ದು, ಈ ಪ್ರಕರಣ ತನಿಖೆ ಅಧಿಕಾರವನ್ನು ಎಸಿಪಿ ರಂಜಿತ್ ಬಂಡಾರು ಬದಲು ಡಿಸಿಪಿ ಹರಿರಾಂ ಶಂಕರ್‌ಗೆ ವರ್ಗಾವಣೆಗೊಳಿಸಬೇಕು ಎಂದು ಆಗ್ರಹಿಸಿದರು.

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿ ತನಿಖಾಧಿಕಾರಿಯಿಂದ ಕಿರುಕುಳ ಕೊಟ್ಟು ತೇಜೋವಧೆ ಮಾಡಲಾಗಿದೆ ಎಂದು ಪ್ರಸನ್ನ ರವಿ ಆರೋಪಿಸಿದರು.

ಪೊಲೀಸ್ ಆಯುಕ್ತರು ನಾಲ್ಕು ತಂಡ ಮಾಡಿ ತನಿಖೆ ನಡೆಸುವುದಾಗಿ ಹೇಳಿದ್ದಾರೆ. ಆರೋಪಿ ಪತ್ತೆಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದೇವೆ ಎನ್ನುತ್ತಾರೆ. ಆದರೆ ರೈಲು ನಿಲ್ದಾಣದಲ್ಲಿ ಕೇಳಿದರೆ ಈ ಬಗ್ಗೆ ಸೂಕ್ತ ದಾಖಲೆ ನಮಗಿಲ್ಲ ಎನ್ನುತ್ತಾರೆ. ಮಂಗಳೂರು ಆಯುಕ್ತರ ಮೇಲೆ ಯಾವುದೇ ವಯಕ್ತಿಕ ದ್ವೇಷ ಇಲ್ಲ, ಗೌರವ ಇದೆ. ಆದರೆ ಈ ರೀತಿ ಮಾಡುವುದರಿಂದ ಬೇಸರ ಆಗಿದೆ. ಆರೋಪಿ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನ ಇಲ್ಲ. ನಾವು ಪ್ರತಿಭಟನೆ ನಡೆಸಲು ಅನುಮತಿ ಕೇಳಿದರೆ ನೀತಿ ಸಂಹಿತೆ ಎನ್ನುತ್ತಾರೆ. ಉಳಿದವರು ಎಷ್ಟು ಬೇಕಾದರೂ ಪ್ರತಿಭಟನೆ ಮಾಡುತ್ತಾರೆ ಎಂದು ಹೇಳಿದರು. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಅಧ್ಯಕ್ಷ ತನುಷ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ವಿಖ್ಯಾತ್ ಉಳ್ಳಾಲ್ ಇದ್ದರು.

ಕೆ.ಎಸ್.ಎನ್. ರಾಜೇಶ್ ಭಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News