ಮತಾಂತರ ನಿಷೇಧ ಕಾಯಿದೆ ಜಾರಿಗೆ ವ್ಯವಸ್ಥಿತ ಹುನ್ನಾರ: ಬಾಲಕೃಷ್ಣ ಶೆಟ್ಟಿ

Update: 2021-12-07 16:52 GMT

ಉಡುಪಿ, ಡಿ.7: ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಗೆ ಬೇಕಾದ ತಯಾರಿಯನ್ನು ರಾಜ್ಯ ಸರಕಾರ ನಡೆಸುತ್ತಿದ್ದು, ಅದಕ್ಕೆ ಅನು ಕೂಲವಾಗುವಂತೆ ರಾಜ್ಯದಾದ್ಯಂತ ಮತಾಂತರದ ಸುಳ್ಳು ಸುದ್ದಿಗಳನ್ನು ಹೆಚ್ಚಿಸ ಲಾಗುತ್ತಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.

ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಖಂಡಿಸಿ ಸಿಪಿಐಯಂ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಮಂಗಳವಾರ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ವಾತನಾಡುತಿದ್ದರು.

ಬಿಜೆಪಿ ಮತ್ತು ಸಂಘಪರಿವಾರ ದೇಶದಲ್ಲೆಡೆ ಜನತೆಯ ನಡುವೆ ವಿಷ ಬೀಜ ಬಿತ್ತಿ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. 2021ರ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ದೇಶದಲ್ಲಿ ಸುಮಾರು 305 ದಾಳಿಗಳು ಕ್ರಿಶ್ಚಿಯನ್ ಸಮು ದಾಯದ ಮೇಲೆ ನಡೆದಿದೆ. ಇದರಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದ್ದು, 32 ಅಂತಹ ಘಟನೆಗಳು ರಾಜ್ಯದಲ್ಲಿ ನಡೆದಿದೆ ಎಂದು ಅವರು ತಿಳಿಸಿದರು.

ಇಂತಹ ಸಂಘಟನೆಗಳ ಕೃತ್ಯದಿಂದ ಪ್ರಜಾಪ್ರಭುತ್ವ ಶಕ್ತಿಗಳ ಧ್ವನಿ ಕುಂಠಿತಗೊಳ್ಳುವ ಅಪಾಯ ಎದುರಾಗುತ್ತಿದೆ. ಜನರ ಐಕ್ಯತೆಗೆ ಕುಂದು ಉಂಟಾ ಗುತ್ತಿದೆ. ಇದನ್ನು ಮನಗಂಡು ಜನತೆ, ಐಕ್ಯತೆಯನ್ನು ಒಡೆಯುವ ಘೋಷಣೆ ಗಳಿಗೆ ಮಾರು ಹೋಗದೆ ದಿನನಿತ್ಯದ ಸಮಸ್ಯೆಗಳಿಗೆ ಐಕ್ಯತೆಯಿಂದ ಹೋರಾಟ ಮಾಡಬೇಕು ಎಂದು ಅವರು ಕರೆ ನೀಡಿದರು.

ಸಭೆಯನ್ನು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯ ಕೆ.ಶಂಕರ್ ಉದ್ಘಾಟಿಸಿದರು. ಉಡುಪಿ ತಾಲೂಕು ಕಾರ್ಯದರ್ಶಿ ಶಶಿಧರ್ ಗೊಲ್ಲ, ಪಕ್ಷದ ಉಡುಪಿ ಜಿಲ್ಲಾ ಸಮಿತಿ ಸದಸ್ಯರಾದ ಸುರೇಶ ಕಲ್ಲಾಗಾರ್, ವೆಂಕಟೇಶ್ ಕೊಣಿ, ಕವಿರಾಜ್ ಎಸ್., ರಮೇಶ್ ಗುಲ್ವಾಡಿ, ರಾಮ ಕಾರ್ಕಡ, ಉಮೇಶ್ ಕುಂದರ್, ತಾಲೂಕು ಸಮಿತಿ ಸದಸ್ಯರಾದ ನಳಿನಿ, ಗಾಡ್ವಿನ್ ಬ್ರಹ್ಮಾವರ, ಸಂಜೀವ ಬಳ್ಕೂರು, ಬುದ್ಯ, ಉಡುಪಿ ಜಿಲ್ಲಾ ಕಟ್ಟಡ ಸಂಘದ ಅಧ್ಯಕ್ಷ ಶೇಖರ್ ಬಂಗೇರ, ಖಜಾಂಚಿ ಗಣೇಶ ನಾಯ್ಕ, ರಾಜು ದೇವಾಡಿಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News