ಉಡುಪಿ: ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಸಮಾರೋಪ

Update: 2021-12-07 16:58 GMT

ಉಡುಪಿ, ಡಿ.7: ಇಂದ್ರಾಳಿ ಯಕ್ಷಗಾನ ಕೇಂದ್ರದಲ್ಲಿ ಮಣಿಪಾಲ ಮಾಹೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಒಂದು ತಿಂಗಳ ಕಾಲ ಜರಗಿದ ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟ ಮಂಗಳವಾರ ಸಮಾಪ್ತಿ ಗೊಂಡಿತು.

ಮಾಹೆ ಸಹಾ ಕುಲಾಧಿಪತಿ ಡಾ.ಎಚ್. ಎಸ್. ಬಲ್ಲಾಳ್ ಸಮರೋಪ ಭಾಷಣದಲ್ಲಿ ಮಾತನಾಡಿ, ಇಂದ್ರಾಳಿ ಯಕ್ಷಗಾನ ಕಲಾ ಕೇಂದ್ರವು ಯಕ್ಷ ಶಿಕ್ಷಣದ ಮೂಲಕ ವಿಶಿಷ್ಟವಾಗಿ ಕಲಾ ಸೇವೆಯನ್ನು ಮಾಡುತ್ತಿದೆ. ಹೊಸ ಶಿಕ್ಷಣ ನೀತಿ ಅನ್ವಯ ಮಣಿಪಾಲ ಮಾಹೆ ಕಲಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಸಂಪೂರ್ಣ ಪ್ರೋತ್ಸಾಹ ನೀಡಲಿದೆ. ಕೇಂದ್ರದ ಎಲ್ಲ ಅಗತ್ಯತೆಗಳನ್ನು ಪೂರೈಸುತ್ತ, ನಿರಂತರ ಸಹಕರಿಸಲಾಗುವುದು ಎಂದು ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯ್ಕಾ ಮಾತನಾಡಿ, ಯಕ್ಷಗಾನ ಪರಿಪೂರ್ಣ ಕಲೆಯಾಗಿದ್ದು, ಈ ಜಾನಪದ ಕಲೆ ನಾಡಿನ ಗೌರವವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.

ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ.ಪಿ.ಎಲ್.ಎನ್.ರಾವ್, ಸದಸ್ಯ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ಕೇಂದ್ರದ ಆಡಳಿತಾಧಿಕಾರಿ ಜಗದೀಶ್ ಶೆಟ್ಟಿ ಸ್ವಾಗತಿಸಿ, ಡಾ.ಪ್ರಶಾಂತ್ ಶೆಟ್ಟಿ ವಂದಿಸಿ, ಮಂಜುನಾಥ ಮಯ್ಯ ನಿರೂಪಿಸಿದರು.

ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಿಕ ತರಬೇತಿ ಪಡೆದ ಹೊರರಾಜ್ಯದ ವಿದ್ಯಾರ್ಥಿಗಳು ‘ನಳಾ ಕಾರ್ಕೋಟಕ ಯಕ್ಷಗಾನ ಪ್ರಸ್ತುತ ಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News