ಮಧ್ಯಪ್ರದೇಶ: ಶಾಲೆಯಲ್ಲಿ ಸಂಘ ಪರಿವಾರದಿಂದ ದಾಂಧಲೆ; ನಾಲ್ವರು ವಶಕ್ಕೆ

Update: 2021-12-07 17:28 GMT

ಭೋಪಾಲ್, ಡಿ. 7: ಎಂಟು ವಿದ್ಯಾರ್ಥಿಗಳನ್ನು ಮತಾಂತರ ಮಾಡಲಾಗಿದೆ ಎಂದು ಆರೋಪಿಸಿ ಸಂಘ ಪರಿವಾರದ ಕಾರ್ಯಕರ್ತರು ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಗಂಜ್ಬಸೌದ ಪಟ್ಟಣದಲ್ಲಿರುವ ಮಿಷನರಿ ಶಾಲೆ ಪ್ರವೇಶಿಸಿ ದಾಂಧಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಖಾತರಿ ನೀಡಲು ಪೊಲೀಸರಿಗೆ ನಿರ್ದೇಶಿಸಲಾಗಿದೆ ಎಂದು ಮಧ್ಯಪ್ರದೇದ ಗೃಹ ಸಚಿವ ನರೋತ್ತಮ ಮಿಶ್ರಾ ಅವರು ಮಂಗಳವಾರ ಹೇಳಿದ್ದಾರೆ.

ಭೋಪಾಲದಿಂದ 105 ಕಿ.ಮೀ. ದೂರದಲ್ಲಿರುವ ಗಂಜ್ ಬಸೌದಾದಲ್ಲಿರುವ ಸಂತ ಜೋಸೆಫ್ ಶಾಲೆಯ ಆವರಣದಲ್ಲಿ ಘಟನೆ ನಡೆದ ಬಳಿಕ ಪೊಲೀಸರು ಸೋಮವಾರ ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಗಲಭೆ ಪ್ರಕರಣ ದಾಖಲಿಸಿದ್ದಾರೆ.

‘‘ಗಂಜ್ ಬಸೌದಾ ಘಟನೆ ವಿಭಿನ್ನವಾಗಿದೆ. ನಾಲ್ಕು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇಂತಹ ಘಟನೆ ನಡೆಯದಂತೆ ತಡೆಯಲು ನಿರ್ದೇಶನ ನೀಡಲಾಗಿದೆ’’ ಎಂದು ಮಿಶ್ರಾ ತಿಳಿಸಿದ್ದಾರೆ.

ಸಂತ ಜೋಸೆಫ್ ಚರ್ಚ್ ಹಾಗೂ ಶಾಲೆ ಮತಾಂತರದಲ್ಲಿ ತೊಡಗಿದೆ ಎಂದು ಸಂಘ ಪರಿವಾರ ಆರೋಪಿಸಿದೆ. ಆದರೆ, ಈ ಆರೋಪವನ್ನು ಶಿಕ್ಷಣ ಸಂಸ್ಥೆ ನಿರಾಕರಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News