12 ಮಹಿಳಾ ಸೇನಾಧಿಕಾರಿಗಳು ಕಾಯಂ ಸೇವಾವಧಿಗೆ ಅರ್ಹರು:‌ ಸುಪ್ರೀಂ ಘೋಷಣೆ

Update: 2021-12-07 18:18 GMT

ಹೊಸದಿಲ್ಲಿ,ಡಿ.7: ಕಾಯಂ ಸೇವಾವಧಿ (ಪರ್ಮನಂಟ್ ಕಮಿಷನ್)ಗೆ ಅನರ್ಹರೆಂಬ ನೆಲೆಯಲ್ಲಿ ಸೇವೆಯಿಂದ ಬಿಡುಗಡೆಗೊಳಿಸಲಾಗಿದ್ದ 12 ಮಹಿಳಾ ಕಿರು ಸೇವಾವಧಿ (ಶಾರ್ಟ್ ಸರ್ವಿಸ್ ಕಮಿಷನ್) ಸೇನಾಧಿಕಾರಿಗಳನ್ನು ಮರುನೇಮಕಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವು ಸೇನೆಗೆ ಸೂಚಿಸಿದೆ.

ಈ ಮಹಿಳಾ ಅಧಿಕಾರಿಗಳ ಹಣಕಾಸು ಮತ್ತು ಇತರ ಸೇವಾ ಸೌಲಭ್ಯಗಳನ್ನು ರಕ್ಷಿಸುವಂತೆಯೂ ನ್ಯಾಯಮೂರ್ತಿಗಳಾದ ಡಿ.ವಿ.ಚಂದ್ರಚೂಡ ಮತ್ತು ಎ.ಎಸ್.ಬೋಪಣ್ಣ ಅವರ ಪೀಠವು ಸೇನೆಗೆ ನಿರ್ದೇಶ ನೀಡಿದೆ.

ವಿಚಾರಣೆಯು ಬಾಕಿಯಿದ್ದಾಗ ಸೇವೆಯಿಂದ ಬಿಡುಗಡೆಗೊಂಡಿದ್ದ ಕಿರು ಸೇವಾವಧಿ ಮಹಿಳಾ ಅಧಿಕಾರಿಗಳು ಸೇವೆಯಲ್ಲಿ ಮುಂದುವರಿದ್ದರು ಎಂದ ಪರಿಗಣಿಸಬೇಕು ಮತ್ತು ಕಾಯಂ ಸೇವಾವಧಿ ಮಂಜೂರು ಮಾಡಲು ಅವರು ಅರ್ಹರಾಗಿದ್ದಾರೆ ಎಂದು ನ್ಯಾಯಾಲಯವು ತಿಳಿಸಿತು. ಕಳೆದ ವರ್ಷದ ಮಹತ್ವದ ತೀರ್ಪೊಂದರಲ್ಲಿ ಸರ್ವೋಚ್ಚ ನ್ಯಾಯಾಲಯವು ದೈಹಿಕ ಇತಿಮಿತಿಗಳು ಅಡ್ಡಿಯಾಗುತ್ತವೆ ಎಂಬ ಕೇಂದ್ರದ ನಿಲುವನ್ನು ತಿರಸ್ಕರಿಸಿ ಸೇನೆಯ ಮಹಿಳಾ ಅಧಿಕಾರಿಗಳಿಗೆ ಕಾಯಂ ಸೇವಾವಧಿಯನ್ನು ಮಂಜೂರು ಮಾಡುವಂತೆ ನಿರ್ದೇಶ ನೀಡಿತ್ತು.
ಆಗಿನಿಂದಲೂ ತಾವು ಕಾಯಂ ಸೇವಾವಧಿಗೆ ಅರ್ಹರಾಗಿದ್ದರೂ ಸೇನೆಯು ತಮಗೆ ಅದನ್ನು ನಿರಾಕರಿಸುತ್ತಿದೆ ಎಂದು ಹಲವಾರು ಮಹಿಳಾ ಅಧಿಕಾರಿಗಳು ಸಲ್ಲಿಸಿರುವ ದೂರುಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ನಡೆಸುತ್ತಿದೆ.
ಮಾರ್ಚ್‌ನಲ್ಲಿ ಸೇವೆಯಿಂದ ಬಿಡುಗಡೆಗೊಳ್ಳಲಿರುವ ಇಬ್ಬರು ಮಹಿಳಾ ಅಧಿಕಾರಿಗಳಿಗೂ ಕಾಯಂ ಸೇವಾವಧಿಯನ್ನು ಮಂಜೂರು ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಸೇನೆಗೆ ಆದೇಶಿಸಿದೆ.
ಪ್ರಸಕ್ತ ಪರಿಶೀಲನೆಗೊಳಪಟ್ಟ 615 ಮಹಿಳಾ ಕಿರು ಸೇವಾವಧಿ ಅಧಿಕಾರಿಗಳ ಪೈಕಿ 487 ಅಧಿಕಾರಿಗಳು ಕಾಯಂ ಸೇವಾವಧಿಯನ್ನು ಪಡೆದುಕೊಂಡಿದ್ದಾರೆ.
ಕಾಯಂ ಸೇವಾವಧಿಯ ಅಧಿಕಾರಿಗಳು ನಿವೃತ್ತಿಯವರೆಗೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ. ಕಿರು ಸೇವಾವಧಿಯು 10 ವರ್ಷಗಳದ್ದಾಗಿದ್ದು,10 ವರ್ಷಗಳ ಬಳಿಕ ಸೇವೆಯನ್ನು ತೊರೆಯುವ ಅಥವಾ ಕಾಯಂ ಸೇವಾವಧಿಯ ಆಯ್ಕೆಯ ಅವಕಾಶವಿರುತ್ತದೆ. ಕಾಯಂ ಸೇವಾವಧಿ ಬೇಡವಾಗಿದ್ದರೆ ನಾಲ್ಕು ವರ್ಷಗಳ ಸೇವಾ ವಿಸ್ತರಣೆಯನ್ನು ಅಧಿಕಾರಿ ಆಯ್ಕೆ ಮಾಡಿಕೊಳ್ಳಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News