ಕೊಲಂಬಿಯಾದ ವೀಡಿಯೊವನ್ನು ಬಳಸಿ ನಾಗಲ್ಯಾಂಡ್‌ ಸೇನಾ ಕಾರ್ಯಾಚಾರಣೆ ಸಮರ್ಥನೆಗೆ ಯತ್ನ

Update: 2021-12-08 13:53 GMT

ಹೊಸದಿಲ್ಲಿ: ಡಿಸೆಂಬರ್ 4ರಂದು ನಾಗಾಲ್ಯಾಂಡ್ ಮೊನ್ ಜಿಲ್ಲೆಯ ಗ್ರಾಮದಲ್ಲಿ ಸೇನಾ ಕಾರ್ಯಾಚರಣೆಯೊಂದರ ವೇಳೆ  ತಪ್ಪಾದ ಗುರುತಿಸುವಿಕೆಯಿಂದ  ಕನಿಷ್ಠ 15 ನಾಗರಿಕರು ಹತ್ಯೆಗೀಡಾದ ಘಟನೆಯ ಬೆನ್ನಲ್ಲೇ ಮಾಜಿ ರಕ್ಷಣಾ ಅಧಿಕಾರಿ ಹಾಗೂ ಲೈಫ್ ಕೋಚ್ ಎ ಕೆ ನೈಥಾನಿ ಎಂಬವರು ಒಂದು ವೀಡಿಯೋವನ್ನು ಟ್ವೀಟ್ ಮಾಡಿದ್ದಾರೆ. ನಾಗರಿಕರ ಮೇಲೆ ಗುಂಡು ಹಾರಿಸಿದ್ದನ್ನು ಸಮರ್ಥಿಸುವಂತಿರುವ ಆ ವೀಡಿಯೋ ನಾಗಾಲ್ಯಾಂಡ್‌ ನದ್ದಲ್ಲ, ಅದು ಕೊಲಂಬಿಯಾದ ವೀಡಿಯೋವಾಗಿದೆ ಎಂದು altnews.in ಸತ್ಯಶೋಧನಾ ವರದಿಯ ಮೂಲಕ ಪತ್ತೆ ಹಚ್ಚಿದೆ. 

ವೀಡಿಯೋದಲ್ಲಿ ಇಬ್ಬರು ನಾಗರಿಕರು ಸೇನಾ ವಸ್ತ್ರದಲ್ಲಿರುವವರಿಗೆ ಚೂರಿ ತೋರಿಸಿ ಬೆದರಿಸುತ್ತಿರುವುದು ಹಾಗೂ ನಂತರ ಸೇನಾ ಪಡೆಗಳು ನೆಲಕ್ಕೆ ಗುಂಡು ಹಾರಿಸುತ್ತಿರುವುದು ಕಾಣಿಸುತ್ತದೆ.

"ಈ ರೀತಿಯ ಪ್ರಚೋದನೆಗೆ ಒಬ್ಬರು ಹೇಗೆ ಪ್ರತಿಕ್ರಿಯಿಸಬಹುದು?" ಎಂಬರ್ಥದ ಟ್ವೀಟ್ ಅನ್ನು ನೈಥಾನಿ ಮಾಡಿದ್ದಾರೆ. ಇದು ನಾಗಾಲ್ಯಾಂಡ್ ವೀಡಿಯೋ ಹೌದೇ ಎಂದು ಒಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ನೈಥಾನಿ. ಅಲ್ಲಿನದಲ್ಲ ಎಂಬುದಕ್ಕೆ ಯಾವುದೇ ಕಾರಣವಿಲ್ಲ ಎಂದಿದ್ದರು.

ಕೆಲ ಟ್ವಿಟ್ಟರ್ ಬಳಕೆದಾರರು ಹಾಗೂ ರಾಜೀವ್‌ ಚಂದ್ರಶೇಖರ್‌ ಸೇರಿದಂತೆ ಕೆಲ ಖ್ಯಾತನಾಮರು ಕೂಡ ಇದೇ ವೀಡಿಯೋ ಆಧಾರವಾಗಿಸಿ ನಾಗರಿಕರ ಪ್ರಚೋದನೆಯಿಂದಾಗಿ ಸೇನಾ ಪಡೆಗಳು ಸ್ವರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು ಎಂಬರ್ಥದ ಟ್ವೀಟ್‍ಗಳನ್ನು ಮಾಡಿದ್ದಾರೆ.

ಈ ನಿರ್ದಿಷ್ಟ ವೀಡಿಯೋವನ್ನು ಆಲ್ಟ್ ನ್ಯೂಸ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ವೀಡಿಯೋವನ್ನು ಕೊಲಂಬಿಯಾ ಮೂಲದ ಸುದ್ದಿ ಸಂಸ್ಥೆ ನೋಟಿಸಿಯಾಸ್ ಕರಾಕೋಲ್ ಟಿವಿ 2018ರಲ್ಲಿ ಪ್ರಸಾರ ಮಾಡಿತ್ತು ಹಾಗೂ ಈ ಘಟನೆ ಗ್ರಾಮೀಣ ಭಾಗವಾದ ಕೊರಿಂಟೋ ಎಂಬಲ್ಲಿನ ಹಸೀಂಡ ಮಿರಾಫ್ಲೋರೆಸ್ ಎಂಬಲ್ಲಿ ನಡೆದಿತ್ತು ಎಂದು ತಿಳಿದು ಬಂದಿದೆ. ಕೊಲಂಬಿಯಾದ ಹಲವು ಸುದ್ದಿ ಸಂಸ್ಥೆಗಳು ಇದೇ ಸುದ್ದಿಯನ್ನು ಪ್ರಸಾರ ಮಾಡಿದ್ದವು.

ಹಳೆಯ ವೀಡಿಯೋವನ್ನು ಬಳಸಿಕೊಂಡು ನಾಗಾಲ್ಯಾಂಡ್‍ನಲ್ಲಿನ ಸೇನಾ ಕಾರ್ಯಾಚರಣೆಯಲ್ಲಿ ನಾಗರಿಕರ ಹತ್ಯೆಯನ್ನು ಸಮರ್ಥಿಸುವ ಯತ್ನ ನಡೆದಿದೆ ಎಂಬುದು ಇಲ್ಲಿ ಸ್ಪಷ್ಟವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News