ಇಂಡಿಯಾನ ಆಸ್ಪತ್ರೆಯಲ್ಲಿ ನವಜಾತ ಶಿಶುವಿಗೆ ಅಪರೂಪದ ಹೃದಯ ಶಸ್ತ್ರಚಿಕಿತ್ಸೆ

Update: 2021-12-09 10:09 GMT

ಮಂಗಳೂರು: ನಗರದ ಇಂಡಿಯಾನ ಆಸ್ಪತ್ರೆಯ ವೈದ್ಯಕೀಯ ತಂಡವು ಜನ್ಮಜಾತ ಹೃದಯ ದೋಷದೊಂದಿಗೆ ಹುಟ್ಟಿದ 10 ಘಂಟೆಗಳ ನವಜಾತ ಶಿಶುವಿಗೆ ಅತ್ಯಂತ ಕ್ಲಿಷ್ಟಕರ ಮತ್ತು ಅಪರೂಪದ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ ಎಂದು ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಯೂಸುಫ್ ಕುಂಬ್ಳೆ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಗರ್ಭಿಣಿಯೋರ್ವರು ಗರ್ಭಾಶಯದಲ್ಲಿ ಗಂಭೀರವಾದ ಹೃದಯ ದೋಷದಿಂದ ಬಳಲುತ್ತಿರುವ ಮಗುವನ್ನು ಹೊಂದಿರುವುದು ಪ್ರಸವಪೂರ್ವ ತಪಾಸಣೆಯಲ್ಲಿ ಪತ್ತೆಯಾಯಿತು. ಬಳಿಕ ಆ ದಂಪತಿ ಹೃದಯ ಚಿಕಿತ್ಸೆ ಮತ್ತು ನವಜಾತ ಶಿಶುಗಳ ಆರೈಕೆಗಾಗಿ  ಇಂಡಿಯಾನ ಆಸತ್ರೆಯನ್ನು ಆರಿಸಿಕೊಂಡರು. ಹೆರಿಗೆಯ ನಂತರದ ಮಗುವಿನ ಏಕೋಕಾರ್ಡಿಯೋಗ್ರಾಮ್ ತಪಾಸಣೆ ನಡೆಸಿದಾಗ  ಮಹಾಪಧಮನಿಯ ಕವಾಟದ ಸ್ಟೆನೋಸಿಸ್ ರೋಗ ಪತ್ತೆಯಾಯಿತು.

ಹೃದಯದಿಂದ ದೇಹಕ್ಕೆ ರಕ್ತದ ಹರಿವನ್ನು ತಡೆಯುವ ಜನ್ಮಜಾತ ಹೃದಯ ದೋಷಕ್ಕಾಗಿ 10 ಘಂಟೆಗಳ ಮಗುವಿನ ಮೇಲೆ ಶಸ್ತ್ರಚಿಕಿತ್ಸೆ ಮಾಡುವುದು ಒಂದು ದೊಡ್ಡ ಸವಾಲಾಗಿತ್ತು. ಇಂತಹ ಪ್ರಕರಣಗಳಲ್ಲಿ ಮಗು ಮರಣ ಹೊಂದುವ ಸಾಧ್ಯತೆ ಅತ್ಯಂತ ಹೆಚ್ಚಾಗಿರುತ್ತದೆ. ಬದುಕುಳಿಯುವ ಸಾಧ್ಯತೆಗಳು ಶೇಕಡಾ 10 ಕ್ಕಿಂತ ಕಡಿಮೆ ಇರುತ್ತದೆ. ಮಗು ಬದುಕುಳಿದರೂ ಅದು ಇತರ ತೊಡಕುಗಳನ್ನು ಹೊಂದಿರುವ ಸಾಧ್ಯತೆ ಇರುತ್ತದೆ. ಆದರೂ ಇಂಡಿಯಾನ ಆಸ್ಪತ್ರೆಯ ವೈದ್ಯರು ಮಗುವಿನ ಜೀವ ಉಳಿಸಲು ಪ್ರಯತ್ನಿಸಲು ನಿರ್ಧರಿಸಿದರು. ಮಗುವನ್ನು ತಕ್ಷಣವೇ ಕ್ಯಾಮ್ ಲ್ಯಾಬ್‌ಗೆ ಸ್ಥಳಾಂತರಿಸಿ ವಾಲ್ಸ್ ತೆರೆದು ದೋಷವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯನ್ನು ಮಾಡಲಾಯಿತು. ಮಗುವನ್ನು ತರುವಾಯ ಡಾ.ಅಭಿಷೇಕ್ ಮತ್ತು  ತಜ್ಞರನ್ನು ಹೊಂದಿರುವ ಸುಸಜ್ಜಿತವಾದ ನವಜಾತ ಶಿಶುಗಳ ವಿಶೇಷ ನಿಗಾ ವಿಭಾಗಕ್ಕೆ ಸ್ಥಳಾಂತರಿಸಲಾಯಿತು. ಮಗು  ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಕೆಲವು ದಿನಗಳನ್ನು ಕಳೆದ ಬಳಿಕ ಚೇತರಿಸಿಕೊಂಡಿತು ಮತ್ತು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದು ಇಂಡಿಯಾನಾ, ಆಸ್ಪತ್ರೆಯ ವೈದ್ಯರು ಮಾಡಿದ ಮತ್ತೊಂದು ಗಮನಾರ್ಹ ಸಾಧನೆಯಾಗಿದೆ. ಕ್ಲಿಷ್ಟಕರ ಮತ್ತು ಅಪರೂಪದ ಪ್ರಕರಣಗಳಲ್ಲಿ ಯಶಸ್ಸು ಗಳಿಸುವಲ್ಲಿ ಮಂಗಳೂರಿನ ಆರೋಗ್ಯ ಕ್ಷೇತ್ರದ ಖ್ಯಾತಿಯನ್ನು ಹೆಚ್ಚಿಸಿದೆ. ಅದಲ್ಲದೆ ನುರಿತ ತಜ್ಞರನ್ನು ಮತ್ತು ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಇಂಡಿಯಾನ ಆಸತ್ರೆಯು ಅಪರೂಪದ ಮತ್ತು ಕ್ಲಿಷ್ಟಕರ ವೈದ್ಯಕೀಯ ನಿರ್ವಹಿಸುವಲ್ಲಿ ಸಮರ್ಥವಾಗಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಡಾ.ಯೂಸುಫ್ ಕುಂಬ್ಳೆ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಇಂಡಿಯಾನ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಡಾ. ಅಲಿಕುಂಬ್ಳೆ, ವೈದ್ಯರಾದ ಡಾ. ಅಭಿಷೇಕ್ ಫಡ್ಕೆ, ಡಾ.ಅರುಣ್ ವರ್ಗೀಸ್ ಮೊದಲಾ ದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News