ಮಂಗಳೂರು; ದೇವಸ್ಥಾನ, ದೈವಸ್ಥಾನ, ಮನೆ ಕಳ್ಳತನ ಪ್ರಕರಣಗಳ ಇಬ್ಬರು ಆರೋಪಿಗಳ ಬಂಧನ

Update: 2021-12-09 11:00 GMT

ಮಂಗಳೂರು : ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದೈವಸ್ಥಾನ, ದೇವಸ್ಥಾನ ಹಾಗೂ ಮನೆಗಳು ಸೇರಿ ಒಟ್ಟು 16 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚಿಕ್ಕಮಗಳೂರು ತರಿಕೆರೆಯ ಬೈರಪುರ ನಿವಾಸಿ ನಾಗ ನಾಯ್ಕ (55) ಹಾಗೂ ದಾವಣಗೆರೆ ಚೆನ್ನಗಿರಿ ಕಣದ ಸಾಲು ಬೀದಿಯ ಮಾರುತಿ ಸಿ.ವಿ. (33) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಒಟ್ಟು 28 ಲಕ್ಷ ರೂ. ಅಧಿಕ ಮೌಲ್ಯದ ಚಿನ್ನ, ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ನಗರದ ವಿವಿಧ ಠಾಣೆಗಳಲ್ಲಿ 2018ರಲ್ಲಿ ನಡೆದ ಒಂದು ಪ್ರಕರಣ ಸೇರಿದಂತೆ, ಈವರೆಗೆ ನಡೆದ 13 ದೈವಸ್ಥಾನ, ದೇವಸ್ಥಾನಗಳಲ್ಲಿ ಕಳವು ಹಾಗೂ 3 ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಈ ಇಬ್ಬರು ಆರೋಪಿಗಳು ಭಾಗಿಯಾಗಿರುವುದು ಬೆರಳಚ್ಚುವಿನಿಂದಲೂ ಸಾಬೀತಾಗಿದೆ. ಪ್ರಮುಖ ಆರೋಪಿ ನಾಗ ನಾಯ್ಕ ಕುಖ್ಯಾತ ಆರೋಪಿಯಾಗಿದ್ದು, ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ಅವರು ಹೇಳಿದರು.

ಉರ್ವಾ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ ನಗರ ನಿವಾಸಿಯೊಬ್ಬರು ನ. 10ರಂದು ತನ್ನ ಮಗಳ ಮದುವೆ ಮಾತುಕತೆಗಾಗಿ ಮನೆಗೆ ಲಾಕ್ ಮಾಡಿಕೊಂಡು ತಮಿಳುನಾಡಿನ ತಂಜಾವೂರಿಗೆ ಹೋಗಿದ್ದು, ನ. 12ರಂದು ಬೆಳಗ್ಗೆ ಮನೆಗೆ ಬಂದು ನೋಡಿದಾಗ ಮನೆಯ ಗೇಟ್ ತೆರೆದು ಮನೆಯ ಮುಂಬಾಗಿಲನ್ನು ತೆರೆಯಲು ಪ್ರಯತ್ನಿಸಿ ಹಾನಿಗೊಳಿಸಿರುವುದು ತಿಳಿದಿ ಬಂದಿತ್ತು. ಮಾತ್ರವಲ್ಲದೆ ಕಿಟಕಿ ಮೂಲಕ ಮನೆಯ ಬೆಡ್‌ರೂಂ ಕಪಾಟುಗಳನ್ನು ತೆರೆದು ಕಾಪಾಟಿನಲ್ಲಿ ಇರಿಸಿದ್ದ 6,86,000 ರೂ. ಮೌಲ್ಯದ ಚಿನ್ನದ ಆಭರಣ ಕಳವು ಮಾಡಿಕೊಂಡು ಹೋಗಿದ್ದ ಬಗ್ಗೆ ದೂರು ನೀಡಲಾಗಿತ್ತು. ಈ ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪತ್ತೆಯ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಂಗಳೂರು ಸಿಸಿಬಿ ಪೊಲೀಸರು ಈ ಪ್ರಕರಣದಲ್ಲಿ ಭಾಗಿಯಾದ ಈ ಇಬ್ಬರು ಆರೋಪಿಗಳನ್ನು ಡಿ. 3ರಂದು ದಸ್ತಗಿರಿ ಮಾಡಿದ್ದರು ಎಂದು ಕಮಿಷನರ್ ಎನ್. ಶಶಿಕುಮಾರ್ ಮಾಹಿತಿ ನೀಡಿದರು.

ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದ ವೇಳೆ ನಾಗ ನಾಯ್ಕ ಈ ಹಿಂದೆ ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ದೈವಸ್ಥಾನ, ದೇವಸ್ಥಾನಗಳಲ್ಲಿ ಕಳ್ಳತನ ನಡೆಸಿರುವುದು ಬೆಳಕಿಗೆ ಬಂದಿದೆ.

* 2018ರಲ್ಲಿ ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕನಗರದ ಮಾತಾ ಚೌಡೇಶ್ವರಿ ದೇವಸ್ಥಾನ
*2019ರಲ್ಲಿ ಎಡಪದವು ರಾಮಮಂದಿರ
*2020ರಲ್ಲಿ ಸುರತ್ಕಲ್‌ನ ಕುಳಾಯಿ ಪಾಂಡುರಂಗ ಭಜನಾ ಮಂದಿರದ ಸಮೀಪದ ಸತ್ಯ ದೇವತಾ ದೈವಸ್ಥಾನ * 2020ರಲ್ಲಿ ಸುರತ್ಕಲ್ ಠಾಣೆ ವ್ಯಾಪ್ತಿಯ ಕುಳಾಯಿ ಕಲ್ಲುಟ್ಟಿ ಪಂಜುರ್ಲಿ ದೈವಸ್ಥಾನ
*2021ರಲ್ಲಿ ಸುರತ್ಕಲ್ ಠಾಣಾ ವ್ಯಾಪ್ತಿಯ ಹೊಸೆಟ್ಟು ಕಲ್ಲುಟ್ಟಿ ಪಂಜುರ್ಲಿ ದೈವಸ್ಥಾನ
*ಹೊಸಬೆಟ್ಟು ವರ್ತೇಶ್ವರಿ ಕಲ್ಲುರ್ಟ್ಟಿ ದೈವಸ್ಥಾನ
*ಕುಳಾಯಿ ಕಾವಿನಕಲ್ಲು ಕಲ್ಲುಟ್ಟಿ ದೈವಸ್ಥಾನ
*ಕಾವಿನಕಲ್ಲು ಸತ್ಯದೇವತಾ ದೇವಸ್ಥಾನ, ಬೈಕಂಪಾಡಿ ಮೀನಕಳಿಯ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನ
*ಮುಲ್ಕಿ ಠಾಣೆ ವ್ಯಾಪ್ತಿಯ ಹಳೆಯಂಗಡಿ ದುರ್ಗಾ ಪರಮೇಶ್ವರಿ ದೇವಸ್ಥಾನ
*ಕಾವೂರು ಠಾಣೆ ವ್ಯಾಪ್ತಿಯ ದೇರೆಬೈಲ್ ರೇಣುಕ ಎಲ್ಲಮ್ಮ ದೇವಸ್ಥಾನ
*ಉಳ್ಳಾಲದ ಮಾಡೂರು ಕೋಟೆಕಾರು ಅಯ್ಯಪ್ಪ ಸ್ವಾಮಿ ಭಜನಾ ಮಂದಿರ
*ಸುರತ್ಕಲ್‌ನ ಕುಳಾಯಿ ಧೂಮಾವತಿ ಮೈಸಂದಾಯ ದೈವಸ್ಥಾನಗಳಲ್ಲಿ ನಡೆದ ಕಳ್ಳತನ ಪ್ರಕರಣಗಳಲ್ಲಿ ಈ ಆರೋಪಿಗಳು ಭಾಗಿಯಾಗಿದ್ದಾರೆ. ಅದಲ್ಲದೆ 2020ರಲ್ಲಿ ಕಾವೂರು ಪಂಜಿಮೊಗರು ಬಳಿಯ ಮನೆ ಕಳ್ಳತನ, *2021ರಲ್ಲಿ ಬಪ್ಪನಾಡು ಬಳಿಯ ಮನೆ ಕಳ್ಳತನ, *ಉರ್ವ ಠಾಣೆ ವ್ಯಾಪ್ತಿಯ ಅಶೋಕನಗರದ ಮನೆ ಕಳ್ಳತನದಲ್ಲಿಯೂ ಈ ಆರೋಪಿಗಳು ಭಾಗಿಯಾಗಿದ್ದಾರೆ ಎಂದು ಶಶಿಕುಮಾರ್ ಮಾಹಿತಿ ನೀಡಿದರು.

ಆರೋಪಿಗಳು ಕಳ್ಳತನ ಮಾಡಿದ ಪ್ರಕರಣಗಳಲ್ಲಿ 18 ಲಕ್ಷ ರೂ. ಮೌಲ್ಯದ 406 ಗ್ರಾಂ ಚಿನ್ನಾಭರಣ, 10.40 ಲಕ್ಷ ರೂ. ಮೌಲ್ಯದ 16 ಕೆಜಿ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡು ಒಟ್ಟು ಸೊತ್ತಿನ ಅಂದಾಜು 28.40 ಲಕ್ಷ ರೂ.ಗಳಾಗಿರುತ್ತದೆ. ಸೊತ್ತನ್ನು ದಾವಣಗೆರೆಯ ಜುವೆಲ್ಲರಿ ಹಾಗೂ ಆರೋಪಿ ಮಾರುತಿ ಎಂಬಾತನ ಚೆನ್ನಗಿರಿಯ ಜುವೆಲ್ಲರಿ ಹಾಗೂ ನಾಗ ನಾಯ್ಕನ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.

ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್ ಮಾರ್ಗದರ್ಶನದಲ್ಲಿ ಸಿಸಿಬಿ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪಿಎಸ್‌ಐ ರಾಜೇಂದ್ರ ಬಿ. ಮತ್ತು ಸಿಸಿಬಿ ಸಿಬ್ಬಂದಿ ಆರೋಪಿಗಳು ಹಾಗೂ ಕಳವಾದ ಸೊತ್ತು ವಶಪಡಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಭದ್ರತೆ, ಸಿಸಿ ಕ್ಯಾಮರಾ ಇಲ್ಲದ ದೇವಸ್ಥಾನ, ದೈವಸ್ಥಾನ ಟಾರ್ಗೆಟ್ !

''ಆರೋಪಿ ನಾಗ ನಾಯ್ಕ ಎಂಬಾತನ ವಿರುದ್ಧ ತರೀಕೆರೆ ಅಜಂಪುರ ಕಡೂರುಗಳಲ್ಲಿ ಹಾಗೂ ಶಿವಮೊಗ್ಗ ಜಿಲ್ಲೆಯ ತುಂಗಾನಗರ ಪೊಲೀಸ್ ಠಾಣೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಈತನು ತರೀಕರೆಯಿಂದ ಬಸ್ಸಿನಲ್ಲಿ ಮಂಗಳೂರಿಗೆ ಬಂದು ಮಂಗಳೂರು ನಗರದ ಬಸ್ಸು ನಿಲ್ದಾಣ, ಮೈದಾನಗಳಲ್ಲಿ ವಾಸವಿದ್ದು, ಹಗಲು ವೇಳೆಯಲ್ಲಿ ಒಂಟಿ ಮನೆ, ದೇವಸ್ಥಾನ, ದೈವಸ್ಥಾನಗಳನ್ನು ಗುರುತಿಸಿ ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ. ಬಳಿಕ ತನ್ನ ಊರಿಗೆ ಹೋಗಿ ಇನ್ನೋರ್ವ ಆರೋಪಿಯಾದ ಮಾರುತಿಯ ಜುವೆಲ್ಲರಿಗೆ ಚಿನ್ನ ಹಾಗೂ ಬೆಳ್ಳಿ ಮಾರಾಟ ಮಾಡುತ್ತಿದ್ದ. ಭದ್ರತೆ, ಸಿಸಿ ಕ್ಯಾಮರಾ ಇಲ್ಲದ ದೇವಸ್ಥಾನ, ದೈವಸ್ಥಾನ ಹಾಗೂ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವೇ ಆರೋಪಿಯ ಟಾರ್ಗೆಟ್ ಆಗಿರುತ್ತಿತ್ತು. ಆರೋಪಿ ಮಾರುತಿ ಈ ಹಿಂದೆ ಆಟೋ ಚಾಲಕನಾಗಿ ಕೆಲ ಮಾಡಿಕೊಂಡಿದ್ದು, ನಾಗ ನಾಯ್ಕನ ಜತೆ ಸೇರಿ ಸ್ವಂತ ಜುವೆಲ್ಲರಿ ಅಂಗಡಿ ಮಾಡಿಕೊಂಡು ಆರೋಪಿ ಜತೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಆರೋಪಿ ತನ್ನ ಜುವೆಲ್ಲರಿಯಲ್ಲಿ ಕಳ್ಳತನದ ಸಾಮಗ್ರಿ ಇರಿಸಿಕೊಂಡು ದಾವಣಗೆರೆಯ ಜುವೆಲ್ಲರಿಗೆ ಮಾರಾಟ ಮಾಡುತ್ತಿದ್ದ''.

- ಎನ್. ಶಶಿಕುಮಾರ್, ಪೊಲೀಸ್ ಕಮಿಷನರ್, ಮಂಗಳೂರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News