ಒಂದೇ ಕುಟುಂಬದ ನಾಲ್ವರ ಮೃತ್ಯು ಪ್ರಕರಣ; ಮತಾಂತರ ಬಗ್ಗೆ ಸದ್ಯಕ್ಕೆ ಮಾಹಿತಿ ಲಭ್ಯವಾಗಿಲ್ಲ: ಕಮಿಷನರ್ ಶಶಿಕುಮಾರ್

Update: 2021-12-09 11:45 GMT
ಕಮಿಷನರ್ ಶಶಿಕುಮಾರ್

ಮಂಗಳೂರು, ಡಿ.9: ಜೆಪ್ಪು ಮಾರುಕಟ್ಟೆ ಸಮೀಪದ ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ಕು ಮಂದಿ (ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳು) ನಿನ್ನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಪ್ರತಿಯೊಂದು ಆಯಾಮದಲ್ಲೂ ಸಮಗ್ರ ತನಿಖೆಯನ್ನು ನಡೆಸಲಾಗುತ್ತಿದೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದಾಕ್ಷಣ ಮೃತದೇಹಗಳನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಮೃತ ನಾಗೇಶ್ ಎಎಸ್‌ಐ ಓರ್ವರಿಗೆ ಕಳುಹಿಸಿರುವ ವಾಯ್ಸ್ ಮೆಸೇಜ್ ಹಾಗೂ ಡೆತ್‌ ನೋಟ್‌ನಲ್ಲಿ ನೂರ್ ಜಹಾನ್ ಎಂಬ ಮಹಿಳೆ ತನ್ನ ಪತ್ನಿಯನ್ನು ಇಸ್ಲಾಂ ಧಮಕ್ಕೆ ಮತಾಂತರಿಸಿದ್ದಾಳೆ ಎಂದು ಉಲ್ಲೇಖಿಸಿರುವ ಆಧಾರದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ಸದ್ಯದ ವಿಚಾರಣೆಯ ವೇಳೆ ಆರೋಪಿತ ಮಹಿಳೆಯಿಂದ ಮತಾಂತರಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಮಾಹಿತಿ ದೊರಕಿಲ್ಲ. ತನ್ನ ಮನೆಗೆ ಕೆಲಸಕ್ಕೆ ಬರುತ್ತಿದ್ದ ಸಂದರ್ಭ ಹಣಕಾಸಿನ ನೆರವು ನೀಡಿರುವುದಾಗಿ ಹೇಳಿಕೊಂಡಿದ್ದಾಳೆ. ವಿಚಾರಣೆ ಮುಂದುವರಿದಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಈ ನಡುವೆ ಮೃತ ಮಹಿಳೆ ತನ್ನ ಪರಿಚಯಸ್ಥರ ಬಳಿ ತಾನು ಪತಿಗೆ ಡೈವೋರ್ಸ್ ನೀಡುವುದಾಗಿ, ಆತನ ದೈಹಿಕ ಹಿಂಸೆ ಸಹಿಸಲಾಗುತ್ತಿಲ್ಲ ಎಂದು ಹೇಳಿಕೊಂಡಿರುವ ಬಗ್ಗೆ ಹಾಗೂ ಮೃತ ವ್ಯಕ್ತಿಯೂ ಡೈವೋರ್ಸ್‌ಗಾಗಿ ವಕೀಲರನ್ನು ಪರಿಚಯಿಸುವಂತೆ ತನ್ನ ಪರಿಚಯಸ್ಥರನ್ನು ಕೇಳಿಕೊಂಡಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಎಲ್ಲಾ ದಿಕ್ಕಿನಲ್ಲೂ ಪ್ರಕರಣದ ತನಿಖೆ ನಡೆಯುತ್ತಿದೆ. ಪ್ರಸಕ್ತ ನಾಲ್ಕು ಮೃತದೇಹಗಳನ್ನು ವೆನ್‌ಲಾಕ್‌ನ ಶವಾಗಾರದಲ್ಲಿ ಇರಿಸಲಾಗಿದೆ ಎಂದು ಅವರು ಹೇಳಿದರು.

ಮೃತ ನಾಗೇಶ್ ತನ್ನ ಪತ್ನಿ ಮಕ್ಕಳನ್ನು ಕೊಲೆ ಮಾಡಿ ಆತ್ಮಹತ್ಯೆಗೈದಿರಬಹುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕಮಿಷನರ್, ನಿನ್ನೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪತ್ನಿಯ ದೇಹದಲ್ಲಿ ಗಾಯದ ಗುರುತು, ರಕ್ತ ಕಂಡು ಬಂದಿತ್ತು. ಮಾತ್ರವಲ್ಲದೆ ಮಂಚದ ಮೇಲಿದ್ದ ತಲೆದಿಂಬುವಿನಲ್ಲೂ ರಕ್ತದ ಕಲೆ ಕಂಡು ಬಂದಿರುವುದರಿಂದ ನಾವು ಈ ಹಿಂದೆಲ್ಲಾ ನಡೆದಿರುವ ಕೊಲೆ ಪ್ರಕರಣಗಳಲ್ಲಿ ಗಮನಿಸಿರುವಂತೆ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಮೃತ ನಾಗೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಹೆಣ್ಣು ಮಗುವಿನ ಬಾಯಿಯಿಂದ ನೊರೆ ಬಂದಿರುವುದು ವಿಷ ಪ್ರಾಶನವಾಗಿರುವ ಶಂಕೆಯನ್ನು ಮೂಡಿಸಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಎದುರು ನೋಡಲಾಗುತ್ತಿದೆ ಎಂದು ಅವರು ಹೇಳಿದರು.

ಮೂಲತಃ ಬಾಗಲಕೋಟೆ ಜಿಲ್ಲೆಯವರಾಗಿದ್ದು ಮಂಗಳೂರಿನಲ್ಲಿ ಕಳೆದ ಸುಮಾರು 8 ವರ್ಷಗಳಿಂದ ವಾಸವಿದ್ದ ನಾಗೇಶ್ ಶೇರಿಗುಪ್ಪಿ(30), ಆತನ ಪತ್ನಿ ವಿಜಯಲಕ್ಷ್ಮೀ (26), ಮಕ್ಕಳಾದ ಸಪ್ನಾ (8) ಮತ್ತು ಸಮರ್ಥ್(4) ನಿನ್ನೆ ಮೋರ್ಗನ್ಸ್ ಗೇಟ್‌ನಲ್ಲಿ ವಾಸವಾಗಿದ್ದ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News