ಕುತುಬ್ ಮಿನಾರ್‌ ನೊಳಗೆ ಹಿಂದು ಮತ್ತು ಜೈನ ದೇವತೆಗಳ ಮರುಸ್ಥಾಪನೆ ಕೋರಿದ್ದ ದಾವೆಗೆ ಕೋರ್ಟ್ ತಿರಸ್ಕಾರ

Update: 2021-12-09 15:53 GMT
ಕುತುಬ್ ಮಿನಾರ್‌(photo:PTI)

ಹೊಸದಿಲ್ಲಿ,ಡಿ.9: ಕುತುಬ್ ಮಿನಾರ್ ಸಂಕೀರ್ಣದಲ್ಲಿ ಹಿಂದು ದೇವತೆಗಳು ಮತ್ತು ಜೈನ ತೀರ್ಥಂಕರರ ವಿಗ್ರಹಗಳ ಮರುಸ್ಥಾಪನೆ ಮತ್ತು ಅವುಗಳನ್ನು ಪೂಜಿಸುವ ಹಕ್ಕನ್ನು ಕೋರಿದ್ದ ಅರ್ಜಿಯನ್ನು ದಿಲ್ಲಿಯ ನ್ಯಾಯಾಲಯವೊಂದು ತಿರಸ್ಕರಿಸಿದೆ. ತನ್ನ ಆದೇಶದಲ್ಲಿ ಅಯೋಧ್ಯೆ ಭೂವಿವಾದ ಪ್ರಕರಣದ ತೀರ್ಪನ್ನು ಪ್ರಸ್ತಾಪಿಸಿರುವ ನ್ಯಾಯಾಲಯವು,‌ ವರ್ತಮಾನದಲ್ಲಿ ಮತ್ತು ಭವಿಷ್ಯದಲ್ಲಿ ಜನರು ಕಾನೂನುಗಳನ್ನು ತಮ್ಮ ಕೈಗಳಲ್ಲಿ ತೆಗೆದುಕೊಂಡು ಶಾಂತಿಯನ್ನು ಕದಡುವ ಮೂಲಕ ಭೂತಕಾಲದ ತಪ್ಪುಗಳನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಜೈನ ತೀರ್ಥಂಕರ ರಿಷಭ ದೇವ ಮತ್ತು ಹಿಂದು ದೇವರು ವಿಷ್ಣು ಪರವಾಗಿ ದಾಖಲಿಸಲಾಗಿದ್ದ ದಾವೆಯಲ್ಲಿ ಮುಹಮ್ಮದ್ ಘೋರಿಯ ಸೇನೆಯ ದಂಡನಾಯಕ ಕುತ್ಬುದ್ದೀನ್ ಐಬಕ್ 27 ದೇವಸ್ಥಾನಗಳನ್ನು ಭಾಗಶಃ ನೆಲಸಮಗೊಳಿಸಿದ್ದ ಮತ್ತು ಅವುಗಳ ಸಾಮಗ್ರಿಗಳನ್ನು ಮರುಬಳಸಿ ಸಂಕೀರ್ಣದೊಳಗೆ ಖುವ್ವತುಲ್ ಇಸ್ಲಾಮ್ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂದು ಹೇಳಲಾಗಿತ್ತು.

ದಾವೆಯನ್ನು ತಿರಸ್ಕರಿಸಿದ ಸಿವಿಲ್ ನ್ಯಾಯಾಧೀಶೆ ನೇಹಾ ಶರ್ಮಾ ಅವರು,‘ಭಾರತವು ಸಾಂಸ್ಕೃತಿಕವಾಗಿ ಶ್ರೀಮಂತ ಇತಿಹಾಸವನ್ನು ಹೊಂದಿತ್ತು. ಹಲವಾರು ರಾಜ ಮನೆತನಗಳು ಅದನ್ನು ಆಳಿವೆ. ವಾದವಿವಾದಗಳ ಸಂದರ್ಭದಲ್ಲಿ ಅರ್ಜಿದಾರರ ಪರ ವಕೀಲರು ರಾಷ್ಟ್ರೀಯ ಅವಮಾನದ ಅಂಶದ ಮೇಲೆ ತೀವ್ರ ವಾದವನ್ನು ಮಂಡಿಸಿದ್ದರು. ಆದಾಗ್ಯೂ ಹಿಂದೆ ತಪ್ಪುಗಳನ್ನು ಎಸಗಲಾಗಿತ್ತು ಎನ್ನುವುದನ್ನು ಯಾರೂ ನಿರಾಕರಿಸಿಲ್ಲ,ಆದರೆ ಇಂತಹ ತಪ್ಪುಗಳು ನಮ್ಮ ವರ್ತಮಾನ ಮತ್ತು ಭವಿಷ್ಯದ ಶಾಂತಿಯನ್ನು ಕದಡಲು ಆಧಾರವಾಗುವುದಿಲ್ಲ ’ಎಂದು ಹೇಳಿದರು.

‘ನಮ್ಮ ದೇಶವು ಶ್ರೀಮಂತ ಇತಿಹಾಸವನ್ನು ಹೊಂದಿದೆ ಮತ್ತು ಸವಾಲಿನ ಸಮಯಗಳನ್ನು ಎದುರಿಸಿದೆ. ಆದಾಗ್ಯೂ ಇತಿಹಾಸವನ್ನು ಸಮಗ್ರವಾಗಿ ಸ್ವೀಕರಿಸಬೇಕು. ಒಳ್ಳೆಯದನ್ನು ಉಳಿಸಿಕೊಂಡು ಕೆಟ್ಟದ್ದನ್ನು ಇತಿಹಾಸದಿಂದ ಅಳಿಸಲು ಸಾಧ್ಯವೇ ಎಂದು ನ್ಯಾ.ಶರ್ಮಾ ಪ್ರಶ್ನಿಸಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News