ಪ್ರವಾಹ ಪರಿಹಾರ ಕಾರ್ಯದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಹೆಲಿಕಾಪ್ಟರ್ ಅವಘಡದಲ್ಲಿ ಮೃತಪಟ್ಟ ಕೇರಳದ ಅಧಿಕಾರಿ
ಕೇರಳ: ನಿನ್ನೆ ತಮಿಳುನಾಡಿನಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟವರಿಗೆ ದೇಶವೇ ಸಂತಾಪ ಸೂಚಿಸುತ್ತಿರುವಾಗಲೇ ಕೇರಳದಿಂದ ಹೃದಯ ವಿದ್ರಾವಕ ಕಥೆಯೊಂದು ಹೊರಬಿದ್ದಿದೆ. ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಸೇರಿದಂತೆ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ 13 ಜನರ ಪೈಕಿ ಜೂನಿಯರ್ ವಾರಂಟ್ ಅಧಿಕಾರಿ ಪ್ರದೀಪ್ ಅರಕ್ಕಲ್ ಅವರು ಮೂರು ವಾರಗಳ ಹಿಂದೆ ಅವರ ಪೋಷಕರೊಂದಿಗೆ ಇದ್ದರು. ಆಗ ಆಸ್ಪತ್ರೆಗೆ ದಾಖಲಾಗಿದ್ದ ಅವರ ತಂದೆಗೆ ಇದೀಗ ಮಗನ ಸಾವಿನ ಬಗ್ಗೆ ಇನ್ನೂ ತಿಳಿದಿಲ್ಲ ಎಂದು ndtv.com ವರದಿ ಮಾಡಿದೆ.
36 ವರ್ಷದ ಪ್ರದೀಪ್ ಅರಕ್ಕಲ್ ಅವರು ಕೇರಳದ ತ್ರಿಶೂರ್ ಜಿಲ್ಲೆಯ ನಿವಾಸಿಯಾಗಿದ್ದು, ತಂದೆ ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕಳೆದ ವಾರವಷ್ಟೇ ಕೆಲಸಕ್ಕೆ ಮರಳಿದ್ದರು ಎನ್ನಲಾಗಿದೆ.
ಅವರ ತಂದೆ ಇನ್ನೂ ಮನೆಯಲ್ಲಿ ಆಮ್ಲಜನಕದ ಬೆಂಬಲದಲ್ಲಿದ್ದು, ಅವರ ನೆರೆಹೊರೆಯವರಾದ ಶಿವಪ್ರಸಾದ್ ಪ್ರಕಾರ, ಅವರಿಗೆ ಮಗನ ಸಾವಿನ ಕುರಿತು ಯಾವುದೇ ಅರಿವಿಲ್ಲ ಎಂದು ವರದಿ ತಿಳಿಸಿದೆ. ಅವರ ತಾಯಿಗೆ ದುರಂತದ ಕುರಿತು ಅರಿವಿದ್ದು, ಕೇರಳದ ಕಂದಾಯ ಸಚಿವ ಕೆ ರಾಜನ್ ಇಂದು ಅವರ ಮನೆಗೆ ಭೇಟಿ ನೀಡಿ, ಅಧಿಕಾರಿಯ ಪಾರ್ಥಿವ ಶರೀರವನ್ನು ಬರಮಾಡಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಪ್ರದೀಪ್ ರೊಂದಿಗೆ ವಾಸಿಸುತ್ತಿದ್ದ ಅವರ ಪತ್ನಿ ಇನ್ನೂ ತ್ರಿಶೂರ್ ಗೆ ಹಿಂದಿರುಗಿಲ್ಲ. ಪ್ರದೀಪ್ ೭ರ ಹರೆಯದ ಮತ್ತು ೩ರ ಹರೆಯದ ಪುತ್ರರನ್ನು ಅಗಲಿದ್ದಾರೆ. ಕೇರಳದ ಪ್ರವಾಹ ರಕ್ಷಣಾ ಕಾರ್ಯಾಚರಣೆಯಲ್ಲಿ ಮೃತ ಅಧಿಕಾರಿ ಸಕ್ರಿಯವಾಗಿ ಭಾಗವಹಿಸಿದ್ದರು. ತಮ್ಮ ಊರಿನಲ್ಲಿ ಅಗತ್ಯವಿರುವವರಿಗೆ ಔಷಧಿ ಮತ್ತಿತರ ಸಾಮಗ್ರಿಗಳನ್ನು ಸ್ವಂತ ಹಣದಲ್ಲಿ ಖರೀದಿಸುತ್ತಿದ್ದರು ಎಂದು ನೆರೆಹೊರೆಯವರು ಅವರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ.
ಮೃತದೇಹ ಸ್ವೀಕರಿಸಲು ಅರಕ್ಕಲ್ ಅವರ ಸಹೋದರ ದಿಲ್ಲಿಗೆ ತೆರಳಿದ್ದಾರೆ. ತಂದೆಯ ಸ್ಥಿತಿಯನ್ನು ಗಮನಿಸಿದಂತೆ ಅಂತಿಮ ವಿಧಿವಿಧಾನಗಳ ವಿವರಗಳು ಇನ್ನೂ ಸ್ಪಷ್ಟವಾಗಿಲ್ಲ ಎಂದು ವರದಿ ತಿಳಿಸಿದೆ.