2019 ಜಾಮಿಯಾ ಹಿಂಸಾಚಾರ: ಸಾಮಾಜಿಕ ಹೋರಾಟಗಾರ ಶರ್ಜೀಲ್ ಇಮಾಮ್ ಗೆ ಒಂದು ಪ್ರಕರಣದಲ್ಲಿ ಜಾಮೀನು
ಹೊಸದಿಲ್ಲಿ, ಡಿ. 9: ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ ಹಾಗೂ ಸಮೀಪದ ಪ್ರದೇಶಗಳಲ್ಲಿ 2019ರ 13 ಹಾಗೂ 14ರಂದು ಸಂಭವಿಸಿದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ ಶರ್ಜೀಲ್ ಇಮಾಮ್ ಗೆ ದಿಲ್ಲಿಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. ಆದರೆ, ದಿಲ್ಲಿಯಲ್ಲಿ 2019 ಫ್ರೆಬ್ರವರಿಯಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ಇತರ ಮೂರು ಪ್ರಕರಣಗಳಲ್ಲಿ ಆರೋಪಿಯಾಗಿರುವುದರಿಂದ ಇಮಾಮ್ ಅವರು ಜೈಲಿನಲ್ಲೇ ಇರಲಿದ್ದಾರೆ.
ಕಳೆದ ವರ್ಷ ಫೆಬ್ರವರಿ 23 ಹಾಗೂ ಫೆಬ್ರವರಿ 26ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಗರು ಹಾಗೂ ವಿರೋಧಿಗಳ ನಡುವೆ ಕೋಮು ಹಿಂಸಾಚಾರ ಸಂಭವಿಸಿತ್ತು. ಈ ಹಿಂಸಾಚಾರದಲ್ಲಿ 53 ಮಂದಿ ಸಾವನ್ನಪ್ಪಿದ್ದರು (ಮುಸ್ಲಿಮರೇ ಹೆಚ್ಚು). ಹಿಂಸಾಚಾರಕ್ಕೆ ಅತಿ ದೊಡ್ಡ ಪಿತೂರಿ ಕಾರಣವಾಗಿತ್ತು ಎಂದು ದಿಲ್ಲಿ ಪೊಲೀಸರು ಪ್ರತಿಪಾದಿಸಿದ್ದರು.
ಈ ಪ್ರಕರಣದ ಕುರಿತು ಗುರುವಾರ ವಿಚಾರಣೆಗೆ ನಡೆಯಿತು. ಇಮಾಮ್ ಅವರ ವಿರುದ್ಧ ಗಲಭೆ, ಕಾನೂನು ಬಾಹಿರ ಗುಂಪುಗೂಡಿರುವುದು ಹಾಗೂ ಕ್ರಿಮಿನಲ್ ಪಿತೂರಿಗೆ ಸಂಬಂಧಿಸಿರುವುದು ಸೇರಿದಂತೆ ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಪ್ರತಿಭಟನೆ ಸಂದರ್ಭ ಪೊಲೀಸರೊಂದಿಗೆ ಘರ್ಷಣೆ ಸಂಭವಿಸಿದ ಬಳಿಕ ದಿಲ್ಲಿಯ ಜಾಮಿಯಾ ನಗರ ಪ್ರದೇಶದಲ್ಲಿ ಡಿಸೆಂಬರ್ 13ರಂದು ಹಿಂಸಾಚಾರ ಭುಗಿಲೆದ್ದಿತ್ತು.