ಗುಂಪುಹತ್ಯೆಗಳನ್ನು ತಡೆಯಲು ಜಾರ್ಖಂಡ್ ವಿಧಾನಸಭಾ ಅಧಿವೇಶನದಲ್ಲಿ ಮಸೂದೆ ಮಂಡನೆ ಸಾಧ್ಯತೆ

Update: 2021-12-09 16:45 GMT
ಸಾಂದರ್ಭಿಕ ಚಿತ್ರ:PTI

ರಾಂಚಿ,ಡಿ.9: ಬುಡಕಟ್ಟು ರಾಜ್ಯ ಜಾರ್ಖಂಡ್‌ನಲ್ಲಿ  ಹೆಚ್ಚುತ್ತಿರುವ ಗುಂಪಿನಿಂದ ಹಲ್ಲೆ ಮತ್ತು ಹತ್ಯೆ ಘಟನೆಗಳಿಗೆ ಕಡಿವಾಣ ಹಾಕಲು ಮುಂಬರುವ ರಾಜ್ಯ ವಿಧಾನಸಭಾ ಅಧಿವೇಶನದಲ್ಲಿ ಮಸೂದೆಯೊಂದು ಮಂಡಿಸಲ್ಪಡುವ ಸಾಧ್ಯತೆಯಿದೆ. ಜಾರ್ಖಂಡ್ (ಗುಂಪಿನಿಂದ ಹತ್ಯೆ ತಡೆ) ಮಸೂದೆ,2021 ಡಿ.16ರಿಂದ 22ರವರೆಗೆ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಮಂಡನೆಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೋರ್ವರು ಸುದ್ದಿಸಂಸ್ಥೆಗೆ ತಿಳಿಸಿದರು.

ಪಶ್ಚಿಮ ಬಂಗಾಳ ಮತ್ತು ರಾಜಸ್ಥಾನಗಳಂತಹ ರಾಜ್ಯಗಳ ವಿಧಾನಸಭೆಗಳು ಈಗಾಗಲೇ ಇಂತಹ ಶಾಸನವನ್ನು ಅಂಗೀಕರಿಸಿವೆ.

ಗುಂಪಿನಿಂದ ಹತ್ಯೆ ಪ್ರಕರಣಗಳಿಂದಾಗಿ ಸುದ್ದಿಯಲ್ಲಿರುವ ಜಾರ್ಖಂಡ್‌ನಲ್ಲಿ  2019ರಲ್ಲಿ ಸೆರಾಯಕೇಲಾ ಖರಸ್ವಾನ್ ಜಿಲ್ಲೆಯ ಧಾತಕಿದಿ ಗ್ರಾಮದಲ್ಲಿ ಗುಂಪೊಂದು ಕಳ್ಳತನದ ಶಂಕೆಯಲ್ಲಿ ತಬ್ರೇಝ್ ಅನ್ಸಾರಿ (24)ಯನ್ನು ಕಂಬಕ್ಕೆ ಕಟ್ಟಿಹಾಕಿ,ದೊಣ್ಣೆಗಳಿಂದ ಥಳಿಸಿ ಹತ್ಯೆಗೈದಿತ್ತು. ಈ ಹೇಯ ಘಟನೆ ಸಂಸತ್ತಿನಲ್ಲಿಯೂ ಪ್ರತಿಧ್ವನಿಸಿತ್ತು. ಇಂತಹ ದಾಳಿಗಳಲ್ಲಿ ವ್ಯಕ್ತಿಯು ಮೃತಪಟ್ಟರೆ ಅದಕ್ಕೆ ಕಾರಣರಾದವರಿಗೆ ಮರಣ ದಂಡನೆ ಅಥವಾ ಕಠಿಣ ಜೀವಾವಧಿ ಶಿಕ್ಷೆ ಮತ್ತು ಕನಿಷ್ಠ 10 ಲ.ರೂ.ಗಳ ದಂಡವನ್ನು ಒದಗಿಸುವ ಪ್ರಸ್ತಾವವನ್ನು ಮಸೂದೆಯು ಒಳಗೊಂಡಿದೆ. 

ದಾಳಿಯಿಂದ ವ್ಯಕ್ತಿಯು ಗಾಯಗೊಂಡರೆ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ಒಂದು ಲ.ದಿಂದ ಮೂರು ಲ.ರೂ.ವರೆಗೆ ದಂಡ ಹಾಗೂ ಘಟನೆಯಲ್ಲಿ ವ್ಯಕ್ತಿಯು ತೀವ್ರವಾಗಿ ಗಾಯಗೊಂಡಿದ್ದರೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಮೂರು ಲ.ರೂ.ನಿಂದ ಐದು ಲ.ರೂ.ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶವಿದೆ.

ಈ ಕಾಯ್ದೆಯಡಿ ಸಾಕ್ಷಿಗೆ ಬೆದರಿಕೆ ಒಡ್ಡುವವರಿಗೆ ಐದು ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ಎರಡರಿಂದ ಐದು ಲ.ರೂ.ವರೆಗೆ ದಂಡವನ್ನು ವಿಧಿಸಲಾಗುವುದು.

ಗುಂಪಿನಿಂದ ಹಲ್ಲೆ/ಹತ್ಯೆಗಳನ್ನು ತಡೆಯುವುದರ ಮೇಲೆ ನಿಗಾಯಿರಿಸಲು ಐಜಿಪಿ ದರ್ಜೆಯ ಅಧಿಕಾರಿಯನ್ನು ನೋಡಲ್ ಅಧಿಕಾರಿ ಎಂದು ನೇಮಕಗೊಳಿಸಲಾಗುತ್ತದೆ. ಜೊತೆಗೆ ಪ್ರತಿ ಠಾಣಾ ವ್ಯಾಪ್ತಿಗಳಲ್ಲಿ ಸಂಬಂಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ದಂಡಾಧಿಕಾರಿಗಳು ಇಂತಹ ಘಟನೆಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News