ಕೋವಿಡ್ ನಿರ್ಬಂಧದಿಂದ ವಿಮಾನ ಯಾನ ಸಂಸ್ಥೆಗಳು, ವಿಮಾನ ನಿಲ್ದಾಣಗಳಿಗೆ 20,000 ಕೋಟಿ ರೂ. ನಷ್ಟ: ಕೇಂದ್ರ

Update: 2021-12-10 18:20 GMT
Photo: PTI 

ಹೊಸದಿಲ್ಲಿ, ಡಿ. 10: ಕೋವಿಡ್ ನಿರ್ಬಂಧದಿಂದಾಗಿ ಭಾರತದ ವಿಮಾನ ಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳಿಗೆ 20,000 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ಲೋಕಸಭೆಗೆ ತಿಳಿಸಿತು.

ಬಿಜೆಪಿ ಸಂಸದೆ ಪೂನಂಬೆನ್ ಅವರ ಪ್ರಶ್ನೆಗೆ ಕೇಂದ್ರ ನಾಗರಿಕ ವಿಮಾನ ಯಾನ ಖಾತೆಯ ಸಹಾಯಕ ಸಚಿವ ಜನರಲ್ ಡಾ. ವಿ.ಕೆ. ಸಿಂಗ್ ಈ ಮಾಹಿತಿ ನೀಡಿದರು. ವೈಮಾನಿಕ ವಲಯ ಹಣಕಾಸು ಪರಿಸ್ಥಿತಿಯನ್ನು ಸರಕಾರ ಅಂದಾಜಿಸಿದೆಯೇ ಎಂದು ತಿಳಿಸುವಂತೆ ಅವರು ಕೋರಿದ್ದರು. ‘‘ಕೋವಿಡ್ ಸಾಂಕ್ರಾಮಿಕ ರೋಗದಿಂದ ಉಂಟಾದ ಅಡೆತಡೆಗಳು ಭಾರತದ ವೈಮಾನಿಕ ವಲಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿವೆ. ಹಣಕಾಸು ವರ್ಷ 2020-21ರಲ್ಲಿ ಭಾರತದಲ್ಲಿರುವ ವಿಮಾನಯಾನ ಸಂಸ್ಥೆಗಳು ಹಾಗೂ ವಿಮಾನ ನಿಲ್ದಾಣಗಳಿಗೆ ಅನುಕ್ರಮವಾಗಿ ಸರಿ ಸುಮಾರು 19,564 ಕೋ. ರೂ. ಹಾಗೂ 5,116 ಕೋಟಿ ರೂಪಾಯಿ ನಷ್ಟ ಉಂಟಾಗಿದೆ ’’ ಎಂದು ಸಿಂಗ್ ಅವರು ಹೇಳಿಕೆಯಲ್ಲಿ ತಿಳಿಸಿದರು.

‘‘ದಿಲ್ಲಿ, ಹೈದರಾಬಾದ್ ಹಾಗೂ ಬೆಂಗಳೂರಿನಲ್ಲಿರುವ ಮೂರು ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ)ದಲ್ಲಿ 2025ರ ಒಳಗೆ 30,000 ಕೋಟಿ ರೂಪಾಯಿ ವೆಚ್ಚದಲ್ಲಿ ಪ್ರಮುಖ ವಿಸ್ತರಣೆಯನ್ನು ನಡೆಸಲಿದೆ. ಇದಲ್ಲದೇ ಪಿಪಿಪಿ ಮಾದರಿಯಲ್ಲಿ ದೇಶಾದ್ಯಂತ ನೂತನ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣಗಳನ್ನು ಅಭಿವೃದ್ದಿಪಡಿಸಲು 36,000 ಕೋಟಿ ರೂಪಾಯಿ ಹೂಡಿಕೆಗೆ ಚಿಂತಿಸುತ್ತಿದೆ’’ ಎಂದು ಸಿಂಗ್ ತಿಳಿಸಿದ್ದಾರೆ.
 ಆಂತರಿಕ ನಿರ್ವಹಣೆ, ದುರಸ್ಥಿ ಹಾಗೂ ಕೂಲಂಕಷ ಪರೀಕ್ಷೆ (ಎಂಆರ್ಒ)ಯ ಜಿಎಸ್ಟಿ ದರವನ್ನು ಶೇ. 18ರಿಂದ ಶೇ. 5ಕ್ಕೆ ಇಳಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

 ಭಾರತದ ಸರಕು ಸಾಗಾಟ ಸಂಸ್ಥೆಗಳು ನಿಯೋಜಿಸಿದ ವಿಮಾನಗಳ ಸಂಖ್ಯೆ 2018ರಲ್ಲಿ 7 ಇದ್ದುದು, 2021ರಲ್ಲಿ 28ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಭಾರತದಿಂದ ತೆರಳುವ ಹಾಗೂ ಆಗಮಿಸುವ ಭಾರತೀಯ ಸರಕು ಸಾಗಾಟ ಸಂಸ್ಥೆಗಳ ಅಂತರಾಷ್ಟ್ರೀಯ ವಿಮಾನಗಳ ಸಂಖ್ಯೆ ಕಳೆದ ಎರಡು ವರ್ಷಗಳಲ್ಲಿ ಶೇ. 2ರಿಂದ ಶೇ. 19ಕ್ಕೆ ಏರಿಕೆಯಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News