ಆನ್‌ಲೈನ್ ತರಗತಿ: ಶೇಕಡ 70ರಷ್ಟು ಮಕ್ಕಳಿಗೆ ಮೊಬೈಲ್ ವ್ಯಸನ!

Update: 2021-12-11 02:10 GMT
File Photo: PTI

ಬೆಂಗಳೂರು: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಆನ್‌ಲೈನ್ ತರಗತಿಗಳು ದೇಶಾದ್ಯಂತ ಹೊಸ ಸಹಜ ಸ್ಥಿತಿ ಎನಿಸಿದ್ದು, ಇದು ಮಕ್ಕಳ ಮೇಲೆ ಗಂಭೀರ ವ್ಯತಿರಿಕ್ತ ಪರಿಣಾಮ ಬೀರಿದೆ. ಇದು ಬಹುತೇಕ ಮಕ್ಕಳು ಮೊಬೈಲ್ ವ್ಯಸನಿಗಳಾಗಿ ಪರಿವರ್ತನೆಯಾಗಲು ಕಾರಣವಾಗಿದೆ ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ.

ಸಾಂಕ್ರಾಮಿಕದ ಅವಧಿಯಲ್ಲಿ ಕರ್ನಾಟಕ ಚೈಲ್ಡ್ ರೈಟ್ಸ್ ಟ್ರಸ್ಟ್ ಅಬ್ಸರ್ವೇಟರಿ (ಕೆಸಿಆರ್‌ಓ) ನಡೆಸಿದ ರಾಜ್ಯವ್ಯಾಪಿ ಅಧ್ಯಯನದ ಪ್ರಕಾರ, ಶೇಕಡ 70ರಷ್ಟು ಮಕ್ಕಳು ಮೊಬೈಲ್‌ಫೋನ್ ಗೇಮಿಂಗ್, ಹಾಡುಗಳು, ಚಲನಚಿತ್ರಗಳು ಮತ್ತು ಚಾಟಿಂಗ್ ವ್ಯಸನ ಅಭ್ಯಾಸ ಮಾಡಿಕೊಂಡಿದ್ದಾರೆ. ಶುಕ್ರವಾರ ಈ ಅಧ್ಯಯನ ವರದಿ ಬಿಡುಗಡೆ ಮಾಡಲಾಗಿದ್ದು, ಇಂತಹ ಮಕ್ಕಳಿಗೆ ತಕ್ಷಣ ಕೌನ್ಸಿಲಿಂಗ್ ವ್ಯವಸ್ಥೆ ಮಾಡುವಂತೆ ಸಲಹೆ ಮಾಡಿದೆ. ಜತೆಗೆ ಸ್ಮಾರ್ಟ್‌ಫೋನ್ ಖರೀದಿಸಲು ಶಕ್ತವಲ್ಲದ ಕುಟುಂಬಗಳ ಮಕ್ಕಳು ಹಾಗೂ ಇತರ ಮಕ್ಕಳ ನಡುವಿನ ಅಂತರ ಹೆಚ್ಚಲು ಕೂಡಾ ಇದು ಕಾರಣವಾಗಿದೆ.

ಮಕ್ಕಳ ಹಕ್ಕುಗಳ ಸರ್ಕಾರೇತರ ಸಂಸ್ಥೆಗಳ ಒಕ್ಕೂಟವಾದ ಕೆಸಿಆರ್‌ಓ, ರಾಜ್ಯದ 20 ಜಿಲ್ಲೆಗಳಿಗೆ ಭೇಟಿ ನೀಡಿ ಮಕ್ಕಳ ಆರೋಗ್ಯ, ಪೌಷ್ಟಿಕತೆ ಮತ್ತು ಶಿಕ್ಷಣದ ಸ್ಥಿತಿ ಬಗ್ಗೆ ಅರ್ಥ ಮಾಡಿಕೊಳ್ಳಲು ನೂರಾರು ಮಂದಿ ಸಂಬಂಧಿತ ಹಕ್ಕುದಾರರ ಜತೆ ಸಂವದ ನಡೆಸಿದೆ.

ಒಟ್ಟು ಮಕ್ಕಳ ಪೈಕಿ ಶೇಕಡ 30ರಷ್ಟು ಮಕ್ಕಳಿಗೆ ಮಾತ್ರ ಆನ್‌ಲೈನ್ ತರಗತಿಗಳು ಲಭ್ಯವಾಗಿದ್ದು, ಈ ಪೈಕಿ ಶೇಕಡ 70ರಷ್ಟು ಮಕ್ಕಳು ಮೊಬೈಲ್ ವ್ಯನಸಕ್ಕೆ ಬಲಿಯಾಗಿದ್ದಾರೆ. ಈ ಮಕ್ಕಳು ಈ ವ್ಯಸನದಿಂದ ಹೊರಬರಲು ತಕ್ಷಣ ಕೌನ್ಸಿಲಿಂಗ್ ಅಗತ್ಯವಿದೆ ಎಂದು ವರದಿ ಹೇಳಿದೆ. ಒಂದರಿಂದ ನಾಲ್ಕನೇ ತರಗತಿವರೆಗಿನ ಮಕ್ಕಳು ಶಾಲಾ ಅನುಭವವನ್ನು ಕಳೆದುಕೊಂಡಿದ್ದು, ಹಿಂದಿನ ತರಗತಿಗಳಲ್ಲಿ ಕಲಿತದ್ದನ್ನು ಮರೆತಿದ್ದಾರೆ. ಅಂತೆಯೇ ಸ್ಮಾರ್ಟ್‌ಫೋನ್ ಲಭ್ಯತೆ ಇಲ್ಲದ ಕುಟುಂಬಗಳ ಮಕ್ಕಳು ತರಗತಿಗಳನ್ನು ತಪ್ಪಿಸಿಕೊಂಡಿದ್ದು, ಪೋಷಕರ ಜತೆ ದುಡಿಯಲು ಆರಂಭಿಸಿದ್ದಾರೆ ಎಂದೂ ವರದಿ ವಿವರಿಸಿದೆ. ಕೋವಿಡ್-19 ಪರಿಸ್ಥಿತಿ ಹಲವು ಜಿಲ್ಲೆಗಳಲ್ಲಿ ಬಾಲ್ಯವಿವಾಹ ಪ್ರಕರಣಗಳ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ವರದಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News