ಮಮತಾ ನೇಪಾಳ ಭೇಟಿಗೆ ಕೊನೆಕ್ಷಣದಲ್ಲಿ ಅವಕಾಶ ನಿರಾಕರಿಸಿದ ಕೇಂದ್ರ ಸರ್ಕಾರ

Update: 2021-12-11 02:52 GMT
Photo: PTI

ಕೊಲ್ಕತ್ತಾ: ನೇಪಾಳ ಕಾಂಗ್ರೆಸ್‌ನ 14ನೇ ರಾಷ್ಟ್ರೀಯ ಅಧಿವೇಶನದಲ್ಲಿ ಪಾಲ್ಗೊಳ್ಳಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕೈಗೊಳ್ಳಲು ಉದ್ದೇಶಿಸಿದ್ದ ನೇಪಾಳ ಪ್ರವಾಸಕ್ಕೆ ಕೇಂದ್ರ ಸರ್ಕಾರ ಕೊನೆಕ್ಷಣದಲ್ಲಿ ಅವಕಾಶ ನಿರಾಕರಿಸಿದೆ ಎಂದು ಪಶ್ಚಿಮ ಬಂಗಾಳ ಸರ್ಕಾರ ಆಪಾದಿಸಿದೆ.

ನೇಪಾಳ ಕಾಂಗ್ರೆಸ್ ಅಧ್ಯಕ್ಷ ಶೇರ್ ಬಹದ್ದೂರ್ ದೇವೂಬಾ ಅವರು ನವೆಂಬರ್ 26ರಂದು ನೀಡಿದ ಆಹ್ವಾನದಂತೆ ಶುಕ್ರವಾರ ನಡೆಯುವ ಅಧಿವೇಶನದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡುವಂತೆ ಮಮತಾ ಬ್ಯಾನರ್ಜಿ, ಕೇಂದ್ರದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದರು. "ಮಮತಾ ಬ್ಯಾನರ್ಜಿಯವರ ಉಪಸ್ಥಿತಿಯು, ಈ ಭಾಗದಲ್ಲಿ ಮತ್ತು ಈ ಪ್ರದೇಶದಿಂದಾಚೆಗೆ ಪ್ರಜಾಪ್ರಭುತ್ವವನ್ನು ಒಟ್ಟಾಗಿ ಬಲಗೊಳಿಸುವ ಪ್ರಯತ್ನಕ್ಕೆ ಉತ್ತೇಜನ ನೀಡಲಿದೆ ಹಾಗೂ ಪಕ್ಷ- ಪಕ್ಷದ ಸಂಬಂಧ ಬಲಗೊಳ್ಳಲು ಕಾರಣವಾಗಲಿದೆ" ಎಂದು ದೇವೂಬಾ ಬಣ್ಣಿಸಿದ್ದರು.

ನಿಯಮಾವಳಿಗೆ ಅನುಸಾರವಾಗಿ ಪಶ್ಚಿಮ ಬಂಗಾಳ ಸರ್ಕಾರ, ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮತಿ ಕೋರಿತ್ತು. ಎಂಇಎ ಕೇಳಿದ ಸ್ಪಷ್ಟನೆಗಳಿಗೆ ರಾಜ್ಯ ಸರ್ಕಾರ ಸ್ಪಂದಿಸಿತ್ತು ಎಂದು ರಾಜ್ಯ ಸರ್ಕಾರದ ಹಿರಿಯ ಅದಿಕಾರಿಗಳು ಹೇಳಿದ್ದಾರೆ. ಆದರೆ ಇದು ಖಾಸಗಿ ಆಹ್ವಾನ ಎಂಬ ಕಾರಣ ನೀಡಿ ಗುರುವಾರ ತಡರಾತ್ರಿ ಅನುಮತಿ ನಿರಾಕರಿಸಿತು ಎಂದು ಅವರು ಹೇಳಿದ್ದಾರೆ.

ಕಳೆದ ಸೆಪ್ಟೆಂಬರ್‌ನಲ್ಲಿ ರೋಮ್ ಪ್ರವಾಸ ಕೈಗೊಳ್ಳಲು ಮತ್ತು 2018ರಲ್ಲಿ ಚಿಕಾಗೊ ಪ್ರವಾಸ ಕೈಗೊಳ್ಳಲು ಕೂಡಾ ಮಮತಾ ಬ್ಯಾನರ್ಜಿಯವರಿಗೆ ಕೇಂದ್ರ ಸರ್ಕಾರ ಅನುಮತಿ ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News