ಭಾರತದ ಮಕ್ಕಳಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆ ಪ್ರವೃತ್ತಿ
ಭಾರತದಲ್ಲಿ 2020ರಲ್ಲಿ 18 ವರ್ಷಕ್ಕಿಂತ ಕೆಳಗಿನ ಒಟ್ಟು 11,396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಸಿಆರ್‌ಬಿ ಕಳೆದ ತಿಂಗಳು ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ. ಅಂದರೆ ಪ್ರತಿದಿನ ಸುಮಾರು 31 ಮಕ್ಕಳು ಆತ್ಮಹತ್ಯೆಯಿಂದ ಮೃತಪಟ್ಟಂತಾಯಿತು.
ಮಕ್ಕಳಲ್ಲಿ ಈ ಅಗಾಧ ಆತ್ಮಹತ್ಯೆ ಪೃವೃತ್ತಿಗೆ ಕಾರಣವೇನು? ನಮ್ಮ ದೇಶದ ಮಕ್ಕಳನ್ನು ಅಪಾಯಕ್ಕೆ ಒಡ್ಡುವ ಆ ಒತ್ತಡಗಳನ್ನು ನಿವಾರಿಸಲು ಏನು ಮಾಡಬಹುದು?
ಭಾರತಕ್ಕೆ ಕೊರೋನ ವೈರಸ್ ಸಾಂಕ್ರಾಮಿಕವು ಅಪ್ಪಳಿಸುವ ಮೊದಲೇ ಮಕ್ಕಳು ಆತ್ಮಹತ್ಯೆ ಮಾಡಿಕೊಂಡು ಸಾಯುವ ದರವು ಕಳವಳಪಡುವಷ್ಟು ಅಧಿಕವಾಗಿತ್ತು. ಆದರೆ ಈ ಸಂಖ್ಯೆಯು 2020ರಲ್ಲಿ ಸುಮಾರು 11 ಶೇಕಡಾದಷ್ಟು ಹೆಚ್ಚಿದೆ ಎನ್ನುವುದನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಕಂಡು ಕೊಂಡಿದೆ.
ಭಾರತದಲ್ಲಿ 2020ರಲ್ಲಿ 18 ವರ್ಷಕ್ಕಿಂತ ಕೆಳಗಿನ ಒಟ್ಟು 11,396 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಎನ್‌ಸಿಆರ್‌ಬಿ ಕಳೆದ ತಿಂಗಳು ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ. ಅಂದರೆ ಪ್ರತಿದಿನ ಸುಮಾರು 31 ಮಕ್ಕಳು ಆತ್ಮಹತ್ಯೆಯಿಂದ ಮೃತಪಟ್ಟಂತಾಯಿತು. ಮಕ್ಕಳಲ್ಲಿ ಈ ಅಗಾಧ ಆತ್ಮಹತ್ಯೆ ಪೃವೃತ್ತಿಗೆ ಕಾರಣವೇನು?
ನಮ್ಮ ದೇಶದ ಮಕ್ಕಳನ್ನು ಅಪಾಯಕ್ಕೆ ಒಡ್ಡುವ ಆ ಒತ್ತಡಗಳನ್ನು ನಿವಾರಿಸಲು ಏನು ಮಾಡಬಹುದು?
► ಕುಟುಂಬ ಮತ್ತು ಇತರ ಸಮಸ್ಯೆಗಳು
18 ವರ್ಷಕ್ಕಿಂತ ಕೆಳಗಿನ ಮಕ್ಕಳ ಆತ್ಮಹತ್ಯೆಗಳಿಗೆ ಪ್ರಧಾನ ಕಾರಣ ‘ಕೌಟುಂಬಿಕ ಸಮಸ್ಯೆಗಳು’ ಎಂಬುದಾಗಿ ಎನ್‌ಸಿಆರ್‌ಬಿ ವರದಿಯು ಹೇಳುತ್ತದೆ. ಆದರೆ, ಈ ಪದ ಅಸ್ಪಷ್ಟವಾಗಿದೆ. ಇದರಲ್ಲಿ ಹಲವಾರು ವಿಷಯಗಳು ಒಳಗೊಂಡಿರಬಹುದಾಗಿದೆ.
‘ಕೌಟುಂಬಿಕ ಸಮಸ್ಯೆ’ಗಳಲ್ಲಿ ಹಲವಾರು ವಿಷಯಗಳು ಒಳಗೊಳ್ಳಬಹುದಾಗಿದೆ ಎಂದು ಮುಂಬೈಯಲ್ಲಿರುವ ಸಾಮಾಜಿಕ ಸಂಘಟನೆ ‘ಸ್ನೇಹ’ದಲ್ಲಿ ತಾರುಣ್ಯ ಆರೋಗ್ಯ ಮತ್ತು ಲೈಂಗಿಕ ಶಿಕ್ಷಣ ಕಾರ್ಯಕ್ರಮದ ನಿರ್ದೇಶಕಿ ರಮಾ ಶ್ಯಾಮ್ ಹೇಳುತ್ತಾರೆ.
‘‘ಮಕ್ಕಳ ಮೇಲೆ ಅಧಿಕಾರ ಚಲಾಯಿಸುವುದು ಮತ್ತು ಅವರಿಗೆ ಬೆದರಿಕೆಯೊಡ್ಡುವುದು ಮಕ್ಕಳ ಆತ್ಯಹತ್ಯೆಗೆ ಅತ್ಯಂತ ಪ್ರಮುಖ ಕಾರಣವಾಗಿದೆ. ಯಾಕೆಂದರೆ, ಮಕ್ಕಳ ವಿಷಯದಲ್ಲಿ ಸಮಾನತೆ ಮತ್ತು ನ್ಯಾಯಪರತೆಯನ್ನು ಅರ್ಥಮಾಡಿಕೊಳ್ಳುವಲ್ಲಿ ನಮಗೆ ಹೆತ್ತವರಾಗಿ ಸಾಕಷ್ಟು ತರಬೇತಿ ಸಿಕ್ಕಿಲ್ಲ’’ ಎಂದು ಅವರು ಹೇಳುತ್ತಾರೆ.
ಇನ್ನೊಂದು ಪ್ರಮುಖ ಕಾರಣವೆಂದರೆ, ಮನೆಯ ಮಾತು ಮನೆಯಿಂದ ಹೊರಗೆ ಹೋಗಬಾರದು ಎನ್ನುವ ಕಲ್ಪನೆ. ಮಕ್ಕಳು ಚಿಕ್ಕವರಾಗಿದ್ದಾಗಿನಿಂದಲೇ ಅವರಲ್ಲಿ ಬೆಳೆಸುವ ಹಾಗೂ ತಾರುಣ್ಯಾವಸ್ಥೆಯಲ್ಲಿ ಮುಂದುವರಿಯುವ ಮೌನ ಸಂಸ್ಕೃತಿಯು ಇನ್ನೊಂದು ಕಾರಣ ಎಂದು ರಮಾ ಹೇಳುತ್ತಾರೆ.
‘‘ಮಕ್ಕಳಲ್ಲಿ ತುಂಬಾ ಹತ್ತಿಕ್ಕಲ್ಪಟ್ಟ ಭಾವನೆಗಳು ಮತ್ತು ಅಧಿಕಾರವನ್ನು ಪ್ರಶ್ನಿಸಲಾಗದ ಅಸಹಾಯಕತೆಯಿರುತ್ತದೆ. ಸಮಗ್ರ ಪೋಷಕ ವ್ಯವಸ್ಥೆಯನ್ನು ಪ್ರಶ್ನಿಸಲಾಗದ ಅಸಹಾಯಕತೆಯು ಮಕ್ಕಳಲ್ಲಿ ಉಸಿರುಗಟ್ಟುವಂತಹ ಭಾವನೆಯನ್ನು ಸೃಷ್ಟಿಸಬಹುದು’’ ಎಂದು ಅವರು ಹೇಳಿದರು.
ಇಡೀ ದಿನವನ್ನು ಮನೆಯಲ್ಲೇ ಕಳೆಯುವಂತಹ ಅನಿವಾರ್ಯತೆಗೆ ಮಕ್ಕಳು ಒಳಗಾಗುವ ಸಂದರ್ಭಕ್ಕೆ ಇದು ಹೊಂದುತ್ತದೆ. ಮನೆಯಲ್ಲಿ ಸುರಕ್ಷಿತ ಪರಿಸರ ಲಭ್ಯವಿರುವ ಬಗ್ಗೆ ಗೊಂದಲ ಹೊಂದಿರುವ ಮಕ್ಕಳಿಗೆ ಇದು ಅನ್ವಯಿಸುತ್ತದೆ.
ಈಗಾಗಲೇ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು ಹಾಗೂ ಆರ್ಥಿಕ ಮತ್ತು ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದ ಮಕ್ಕಳಿಗೆ ಕೋವಿಡ್ ಸಾಂಕ್ರಾಮಿಕವು ಹಲವಾರು ಹೊಸ ಸವಾಲುಗಳನ್ನು ಸೃಷ್ಟಿಸಿತು.
‘‘ಜನರನ್ನು ಬೀಗ ಹಾಕಿ ಒಳಗಿರಿಸಿದ್ದು ಬಹುಶಃ ಇದೇ ಮೊದಲ ಬಾರಿ. ಅದರಲ್ಲೂ ಮುಖ್ಯವಾಗಿ ಮುಂಬೈನಂತಹ ನಗರಗಳಲ್ಲಿ ಜನರು 10x10 ಅಡಿಯ ಸಣ್ಣ ಕೋಣೆಗಳಲ್ಲಿ ವಾಸಿಸುತ್ತಿದ್ದಾರೆ. ಇಂತಹ ಸಣ್ಣ ಜಾಗದಲ್ಲಿ ಇಡೀ ದಿನವನ್ನು ಕಳೆಯುವುದು ಅತ್ಯಂತ ದೊಡ್ಡ ಸಮಸ್ಯೆಯಾಯಿತು’’ ಎಂದು ರಮಾ ಹೇಳುತ್ತಾರೆ.
‘‘ಮೊದಲು ಈ ಸ್ಥಳಗಳನ್ನು ಮುಖ್ಯವಾಗಿ ಒಟ್ಟಿಗೆ ಊಟ ಮಾಡುವುದಕ್ಕಾಗಿ ಅಥವಾ ರಾತ್ರಿ ಮಲಗಲು ಉಪಯೋಗಿಸಲಾಗುತ್ತಿತ್ತು. ಇಷ್ಟು ಸಣ್ಣ ಜಾಗದಲ್ಲಿ ಎಲ್ಲರೂ ಒಟ್ಟಿಗೆ ತಿಂಗಳುಗಳ ಕಾಲ ನೆಲೆಸಬೇಕಾಗುತ್ತದೆ ಎನ್ನುವುದನ್ನು ಜನರು ಯಾವತ್ತೂ ಊಹಿಸಿರಲಿಲ್ಲ. ಅದು ಸಹಜವಾಗಿಯೇ ಸಾಕಷ್ಟು ಕಿರಿಕಿರಿಗೆ ಕಾರಣವಾಯಿತು. ಇದು ಮನೆಯೊಳಗಡೆ ಸಾಕಷ್ಟು ಹಿಂಸೆ ಮತ್ತು ದೌರ್ಜನ್ಯಕ್ಕೆ ಕಾರಣವಾಗಿರಬಹುದು’’.
ಅದೂ ಅಲ್ಲದೆ, ಮಕ್ಕಳು ತಮ್ಮನ್ನು ಅಭಿವ್ಯಕ್ತಿಪಡಿಸುವ ಹಾಗೂ ತಮ್ಮ ಸಂಕಟಗಳನ್ನು ನಿಭಾಯಿಸುವ ಎಲ್ಲ ದಾರಿಗಳನ್ನು ಲಾಕ್‌ಡೌನ್‌ಗಳು ಮುಚ್ಚಿದವು.
‘‘ಮಹಿಳೆಯರು ಮತ್ತು ಮಕ್ಕಳಿಗೆ ನಮ್ಮನ್ನು ಸಂಪರ್ಕಿಸಲು ಕಷ್ಟವಾಯಿತು. ಯಾಕೆಂದರೆ ಹೆಚ್ಚಿನ ಪ್ರಕರಣಗಳಲ್ಲಿ, ಮಹಿಳೆಯರು ಮತ್ತು ಮಕ್ಕಳಿಗೆ ಫೋನ್ ಲಭ್ಯವಿರಲಿಲ್ಲ’’ ಎಂದರು.
ಈ ಸಮಸ್ಯೆಯನ್ನು ನಿಭಾಯಿಸಲು ತನ್ನ ಸಂಘಟನೆ ‘ಸ್ನೇಹ’ವು ಸ್ಮಾರ್ಟ್ ಫೋನ್ ಲೈಬ್ರರಿ ಮತ್ತು ರಿಲೇ ವ್ಯವಸ್ಥೆಯನ್ನು ಸ್ಥಾಪಿಸಿತು ಎಂದು ರಮಾ ಹೇಳುತ್ತಾರೆ. ಇದರಿಂದಾಗಿ, ಸಮುದಾಯಗಳ ಹೆಚ್ಚಿನ ಸಂಖ್ಯೆಯ ಮಕ್ಕಳು ಮತ್ತು ಮಹಿಳೆಯರಿಗೆ ಫೋನ್‌ಗಳು ಲಭಿಸಿದವು. ದೂರುಗಳನ್ನು ಸಲ್ಲಿಸುವುದಕ್ಕಾಗಿ ಮತ್ತು ಆನ್‌ಲೈನ್ ತರಗತಿಗಳಿಗಾಗಿಯೂ ಅವರು ಪೋನ್‌ಗಳನ್ನು ಬಳಸಿದರು ಎಂದರು. ಆದರೆ ಅಷ್ಟೇ ಸಾಕಾಗಲಿಲ್ಲ.
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಅದರ ಬಗ್ಗೆ ದೂರು ನೀಡುವುದು ಅತ್ಯಂತ ಕಷ್ಟವಾಗಿತ್ತು. ಯಾಕೆಂದರೆ ದೌರ್ಜನ್ಯಗಳ ಬಗ್ಗೆ ಹೇಳಲು ಅವರಿಗೆ ಖಾಸಗಿ ಸ್ಥಳ ಯಾವತ್ತೂ ಸಿಕ್ಕಿರಲಿಲ್ಲ. ಅದೂ ಅಲ್ಲದೆ ಕರೆ ಮಾಡುವ ಅವಕಾಶವೂ ಅವರಿಗೆ ಸಿಕ್ಕಿರಲಿಲ್ಲ’’.
ಸಾಂಕ್ರಾಮಿಕ ಪೂರ್ವ ಕಾಲದಲ್ಲಿ, ಹೆಚ್ಚಿನ ಮಕ್ಕಳಿಗೆ ಶಾಲೆಗಳು ಕಲಿಯುವ ಸ್ಥಳಗಳು ಮಾತ್ರ ಆಗಿರಲಿಲ್ಲ, ಮನೆಯಿಂದ ತಪ್ಪಿಸಿಕೊಳ್ಳುವ ವಿಧಾನವೂ ಆಗಿತ್ತು. ಆ ಮಕ್ಕಳು ಶಾಲೆಗಳಲ್ಲಿ ತಮ್ಮದೇ ಆದ ಪುಟ್ಟ ಜಗತ್ತನ್ನು ಹೊಂದಿದ್ದರು.
► ಮಾನಸಿಕ ಆರೋಗ್ಯದ ಮೇಲೆ ಪರಿಣಾಮ
ಸಾಂಕ್ರಾಮಿಕವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹಲವು ವಿಧಗಳಲ್ಲಿ ಪರಿಣಾಮ ಬೀರಿದೆ.
‘‘ಸಾಂಕ್ರಾಮಿಕ ಮತ್ತು ಅದರ ಜೊತೆಗೆ ಬಂದ ಲಾಕ್‌ಡೌನ್ ಮಕ್ಕಳಲ್ಲಿ ಭಾರೀ ಪ್ರಮಾಣದಲ್ಲಿ ಕಳವಳ ಮತ್ತು ಅನಿಶ್ಚಿತತೆಯನ್ನು ಹುಟ್ಟು ಹಾಕಿದೆ’’ ಎಂದು ಎಸ್‌ಒಎಸ್ ಚಿಲ್ಡ್ರನ್ಸ್ ವಿಲೇಜಸ್ ಆಫ್ ಇಂಡಿಯದ ಪ್ರಧಾನ ಕಾರ್ಯದರ್ಶಿ ಸುಮಂತಾ ಕಾರ್ ಹೇಳುತ್ತಾರೆ. ‘‘ಮಕ್ಕಳ ದೈನಂದಿನ ಚಟುವಟಿಕೆಗಳು ಅಸ್ತವ್ಯವಸ್ತಗೊಂಡವು; ಅವರು ತಮ್ಮ ಸ್ನೇಹಿತರ ಸಂಪರ್ಕವನ್ನು ಕಳೆದುಕೊಂಡರು ಹಾಗೂ ಹೊರಾಂಗಣ ಕ್ರೀಡೆಗಳನ್ನು ಆಡುವ ಮತ್ತು ಹೊರಗೆ ಸುತ್ತಾಡುವ ಅವಕಾಶಗಳಿಂದಲೂ ಅವರು ವಂಚಿತರಾದರು. ಈ ಎಲ್ಲ ಅಂಶಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಗಣನೀಯ ಪರಿಣಾಮ ಬೀರಿವೆ’’ ಎಂದು ಸುಮಂತಾ ಹೇಳುತ್ತಾರೆ.
‘‘ಇದನ್ನು ಎದುರಿಸಲು, ಸಾಂಕ್ರಾಮಿಕ ದಾಳಿಯಿಟ್ಟ ಸ್ವಲ್ಪವೇ ಸಮಯದ ಬಳಿಕ, ಮಕ್ಕಳ ದೈನಂದಿನ ಚಟುವಟಿಕೆಗಳು ತೀವ್ರವಾಗಿ ಅಸ್ತವ್ಯಸ್ತಗೊಳ್ಳದಂತೆ ನಾವು ನೋಡಿಕೊಂಡೆವು. ಪಾಲನೆಯಲ್ಲಿ ತರಬೇತಿ ಪಡೆದ ನಮ್ಮ ‘ಎಸ್‌ಒಎಸ್ ಮದರ್‌ಗಳು’ ಮಕ್ಕಳನ್ನು ಚಿತ್ರ ಬಿಡಿಸುವುದು, ಕತೆ ಹೇಳುವುದು, ಕುಸುರಿ, ಸಂಗೀತ, ನೃತ್ಯ, ಒಳಾಂಗಣ ಆಟಗಳು, ಅಡುಗೆ ತಯಾರಿ ಮುಂತಾದ ವಿವಿಧ ಒಳಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿದರು ಹಾಗೂ ಫೋನ್‌ನಲ್ಲಿ ತಮ್ಮ ಸ್ನೇಹಿತರೊಡನೆ ಮಾತನಾಡುವಂತೆ ಉತ್ತೇಜಿಸಿದರು.
ಕುಟುಂಬ ಸದಸ್ಯರಲ್ಲಿ ಕಾಣಸಿಕೊಂಡ ಕೋವಿಡ್‌ನೊಂದಿಗೆ ವ್ಯವಹರಿಸುವುದು, ಅತ್ಯಂತ ಆಪ್ತ ಕುಟುಂಬ ಸದಸ್ಯರನ್ನು ಸಾಂಕ್ರಾಮಿಕಕ್ಕೆ ಕಳೆದುಕೊಂಡಿರುವುದು ಹಾಗೂ ಕಳೆದುಹೋದ ಜೀವನೋಪಾಯ ಮತ್ತು ಆರ್ಥಿಕ ಸಂಕಷ್ಟ ಹಾಗೂ ಅದರೊಂದಿಗೆ ಬರುವ ಖಿನ್ನತೆ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರಿವೆ’’ ಎಂದು ಸುಮಂತಾ ವಿವರಿಸುತ್ತಾರೆ.
‘‘ಸಾಂಕ್ರಾಮಿಕದ ಅವಧಿಯಲ್ಲಿ ಹೆತ್ತವರು ಮಕ್ಕಳ ಮೇಲೆ ಹೆಚ್ಚಿನ ಗಮನವನ್ನು ನೀಡಲಿಲ್ಲ. ಯಾಕೆಂದರೆ ಅವರೆಲ್ಲ ಜೊತೆಗಿದ್ದರು. ಹಾಗಾಗಿ, ಎಲ್ಲರೂ ಕ್ಷೇಮವಾಗಿದ್ದಾರೆ ಎಂಬ ತೀರ್ಮಾನಕ್ಕೆ ಹೆತ್ತವರು ಬಂದರು’’ ಎಂದು ರೋಟರಿ ಕ್ಲಬ್ ಆ್ಯಂಡ್ ಮೆಂಟಲ್ ಹೆಲ್ತ್ ಪರಿಣತ ಡಾ. ಪ್ರಕೃತಿ ಪೋಡಾರ್ ಹೇಳುತ್ತಾರೆ.
‘‘ಆತ್ಮಹತ್ಯೆಗೆ ಯತ್ನಿಸಿ ಬದುಕುಳಿದ ವರನ್ನು ಮಾತನಾಡಿಸಿರುವ ಅವರು, ತಮ್ಮನ್ನು ಒಬ್ಬ ಅಥವಾ ಇಬ್ಬರೂ ಹೆತ್ತವರು ಕಡೆಗಣಿಸುತ್ತಾರೆ ಎಂಬ ಅಭಿಪ್ರಾಯಕ್ಕೆ ಮಕ್ಕಳು ಬಂದಿದ್ದಾರೆ’’ ಎಂದು ಹೇಳಿದರು.
‘‘ಇದು ‘ಓಹ್ ಅವರು ಜಗಳ ಮಾಡುತ್ತಿದ್ದಾರೆ’ ಎಂದಷ್ಟೇ ಹೇಳುವಷ್ಟು ಸಲಭವಲ್ಲ’’ ಎಂದು ಅವರು ಅಭಿಪ್ರಾಯಪಡುತ್ತಾರೆ. ‘‘ಹುಡುಗಿಯ ಹಾಗೆ ಅಳುವುದನ್ನು ನಿಲ್ಲಿಸು’’ ಅಥವಾ ‘‘ನೀನು ನನಗೆ ಹುಟ್ಟಬಾರದಾಗಿತ್ತು’’ ಮುಂತಾದ ಕೋಪದ ಭರದಲ್ಲಿ ಹೇಳಿದ ಮಾತುಗಳು ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಬಹುದು ಹಾಗೂ ತಮಗೆ ಈ ಜಗತ್ತಿನಲ್ಲಿ ಇರಲು ಇನ್ನು ಅವಕಾಶವಿಲ್ಲ ಎಂಬಂತಹ ಭಾವುಕ ನಿರ್ಧಾರಕ್ಕೆ ಮಕ್ಕಳು ಬರಬಹುದಾಗಿದೆ’’ ಎಂದು ಡಾ. ಪೃಕೃತಿ ಅಭಿಪ್ರಾಯಪಡುತ್ತಾರೆ.
ಭಾರತದಲ್ಲಿ ಮಾನಸಿಕ ಆರೋಗ್ಯ ಸೇವೆ ಈಗಲೂ ಶೋಚನೀಯವಾಗಿದೆ. 2020ರಲ್ಲಿ ಭಾರತದಲ್ಲಿ ಒಂದು ಲಕ್ಷ ಜನರಿಗೆ 0.3 ಮಾನಸಿಕ ಆರೋಗ್ಯ ಚಿಕಿತ್ಸಕರು ಮತ್ತು 0.75 ಮನಃಶಾಸ್ತ್ರಜ್ಞರು ಇದ್ದರು ಹಾಗೂ ಅವರ ಪೈಕಿ ಹೆಚ್ಚಿನವರು ನಗರ ಪ್ರದೇಶಗಳಲ್ಲಿದ್ದರು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಕೃಪೆ: fit.thequint.com