ಮೊದಲ ಆ್ಯಶಸ್ ಟೆಸ್ಟ್: ಲಿಯೊನ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ ತತ್ತರ, ಆಸ್ಟ್ರೇಲಿಯಕ್ಕೆ ಭರ್ಜರಿ ಜಯ

Update: 2021-12-11 12:31 GMT
Photo: AFP

 ಬಿಸ್ಬೇನ್, ಡಿ.11: ಸ್ಪಿನ್ನರ್ ನಥಾನ್ ಲಿಯೊನ್(4-91)ಸ್ಪಿನ್ ಬೌಲಿಂಗ್ ದಾಳಿಗೆ ತತ್ತರಿಸಿದ ಇಂಗ್ಲೆಂಡ್ ತಂಡ ಆ್ಯಶಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ವಿರುದ್ಧ 9 ವಿಕೆಟ್‌ಗಳ ಅಂತರದಿಂದ ಸೋಲುಂಡಿದೆ. ಒಟ್ಟು 4 ವಿಕೆಟ್‌ಗಳನ್ನು ಕಬಳಿಸಿದ ಲಿಯೊನ್ ಬಹುನಿರೀಕ್ಷಿತ 400ನೇ ಟೆಸ್ಟ್ ವಿಕೆಟನ್ನು ಪಡೆದು ಹೊಸ ದಾಖಲೆ ನಿರ್ಮಿಸಿದರು.

ನಾಲ್ಕನೇ ದಿನವಾದ ಶನಿವಾರ 2 ವಿಕೆಟ್ ನಷ್ಟಕ್ಕೆ 220 ರನ್‌ನಿಂದ ಎರಡನೇ ಇನಿಂಗ್ಸ್ ಮುಂದುವರಿಸಿದ ಇಂಗ್ಲೆಂಡ್ ದಿಢೀರ್ ಕುಸಿತ ಕಂಡಿತು. 77 ರನ್ ಗಳಿಸುವಷ್ಟರಲ್ಲಿ 8 ವಿಕೆಟ್‌ಗಳನ್ನು ಕ್ಷಿಪ್ರವಾಗಿ ಕಳೆದುಕೊಂಡು 103 ಓವರ್‌ಗಳಲ್ಲಿ 297 ರನ್ ಗಳಿಸಿ ಆಲೌಟಾಯಿತು.

 ಗೆಲ್ಲಲು 20 ರನ್ ಗುರಿ ಪಡೆದ ಆಸ್ಟ್ರೇಲಿಯ 5.1 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 20 ರನ್ ಗಳಿಸಿತು. ಮೊದಲ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದ ಆಸ್ಟ್ರೇಲಿಯ 5 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆಯಿತು. ಹೊಸ ನಾಯಕ ಪ್ಯಾಟ್ ಕಮಿನ್ಸ್ ನಾಯಕತ್ವದಲ್ಲಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡಿರುವ ಆಸ್ಟ್ರೇಲಿಯವು ಗುರುವಾರದಿಂದ ಅಡಿಲೇಡ್‌ನಲ್ಲಿ ಆರಂಭವಾಗಲಿರುವ ಹಗಲು-ರಾತ್ರಿ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾಗಲಿದೆ.

 ಇಂಗ್ಲೆಂಡ್ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯಕ್ಕೆ ಒಳಗಾಯಿತು. ಬ್ರಿಸ್ಬೇನ್‌ನಲ್ಲಿ ಕಳಪೆ ಪ್ರದರ್ಶನ ಮುಂದುವರಿಸಿರುವ ಇಂಗ್ಲೆಂಡ್ ಈ ಮೈದಾನದಲ್ಲಿ ಆಡಿರುವ 9 ಪಂದ್ಯಗಳ ಪೈಕಿ 7ರಲ್ಲಿ ಸೋಲನುಭವಿಸಿದೆ. ಇಂಗ್ಲೆಂಡ್‌ನ ಮಲಾನ್(82 ರನ್) ವಿಕೆಟನ್ನು ಉರುಳಿಸಿ ರೂಟ್(89 ರನ್ )ರೊಂದಿಗಿನ 162 ರನ್ ಜೊತೆಯಾಟವನ್ನು ಮುರಿದು ಆಸ್ಟ್ರೇಲಿಯ ಗೆಲುವಿಗೆ ಮುನ್ನುಡಿ ಬರೆದಿದ್ದ ಲಿಯೊನ್ ತಮ್ಮ ದೇಶದ ಶೇನ್ ವಾರ್ನ್(708) ಹಾಗೂ ಗ್ಲೆನ್ ಮೆಕ್‌ಗ್ರಾತ್(563) ಅವರನ್ನೊಳಗೊಂಡ 400 ವಿಕೆಟ್ ಕ್ಲಬ್‌ಗೆ ಸೇರ್ಪಡೆಯಾದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News