×
Ad

ಕುಸಿಯುತ್ತಿರುವ ಜನನ ದರ ಮತ್ತು ಭಾರತದ ಜನಸಂಖ್ಯೆ

Update: 2021-12-13 10:46 IST
ಸಾಂದರ್ಭಿಕ ಚಿತ್ರ 

ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯೆ ಡಾಟಾ ಶೀಟ್, 2021ರ ಪ್ರಕಾರ, 2024-28ರ ಅವಧಿಯಲ್ಲಿ ಭಾರತದ ಜನಸಂಖ್ಯೆಯು ಚೀನಾದ ಜನಸಂಖ್ಯೆಯನ್ನು ಹಿಂದಿಕ್ಕುತ್ತದೆ ಹಾಗೂ ಆ ವೇಳೆಗೆ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶವಾಗಿರುತ್ತದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 (2019-21) ಸಂಗ್ರಹಿಸಿರುವ ಎರಡನೇ ಹಂತದ ಅಂಕಿ-ಅಂಶಗಳು ನವೆಂಬರ್ 24ರಂದು ಬಿಡುಗಡೆಗೊಂಡಿವೆ. ಕೋವಿಡ್-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗಿತ್ತು. 2020 ಮಾರ್ಚ್‌ನಲ್ಲಿ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ನ್ನು ನಡೆಸಲಾಗುತ್ತಿತ್ತು. ಆದರೆ, ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಅದನ್ನು ದಿಢೀರನೆ ನಿಲ್ಲಿಸಲಾಯಿತು. ಹಾಗಾಗಿ, ಮೊದಲ ಹಂತದಲ್ಲಿ ಕೋವಿಡ್-19 ಸಾಂಕ್ರಾಮಿಕ ದಾಳಿಯಿಡುವ ಮೊದಲು ಸಂಗ್ರಹಿಸಲಾದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅಂಕಿ-ಅಂಶಗಳನ್ನು 2020 ಡಿಸೆಂಬರ್‌ನಲ್ಲಿ ಬಿಡುಗಡೆಗೊಳಿಸಲಾಯಿತು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ಪ್ರಕಾರ, ಭಾರತದಲ್ಲಿ ಮೊದಲ ಬಾರಿಗೆ ಜನನ ದರವು ಮರುಪೂರಣ (ರಿಪ್ಲೇಸ್‌ಮೆಂಟ್) ಅನುಪಾತ 2.1ರಿಂದಲೂ ಕೆಳಗೆ ಅಂದರೆ 2.0ಗೆ ಕುಸಿದಿದೆ. ಇದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 (2015-16)ರಲ್ಲಿದ್ದ 2.2 ಮತ್ತು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-3 (2005-2006)ರಲ್ಲಿದ್ದ 2.7ಕ್ಕಿಂತ ಕಡಿಮೆಯಾಗಿದೆ. ಜನನ ದರವು ನಗರ ಪ್ರದೇಶಗಳಲ್ಲಿ 1.6 ಆಗಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 2.1 ಆಗಿದೆ. ಇದು ಈಗಲೂ ಮರು ಪೂರಣ ಅನುಪಾತಕ್ಕೆ ಸಮವಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರ ಪ್ರಕಾರ, ಕೇವಲ ಐದು ರಾಜ್ಯಗಳು ಅಧಿಕ ಜನನ ದರಗಳನ್ನು ದಾಖಲಿಸಿವೆ. ಈ ಜನನ ದರವು ಮರುಪೂರಣ ದರಕ್ಕಿಂತಲೂ ಅಧಿಕವಾಗಿವೆ. ಆ ರಾಜ್ಯಗಳೆಂದರೆ ಬಿಹಾರ (3.0), ಮೇಘಾಲಯ (2.9), ಉತ್ತರಪ್ರದೇಶ (2.7), ಜಾರ್ಖಂಡ್ (2.4) ಮತ್ತು ಮಣಿಪುರ (2.2).

ಈ ಐದು ರಾಜ್ಯಗಳಲ್ಲಿ ಜನನ ದರವು ಮರುಪೂರಣ ದರಕ್ಕಿಂತ ಹೆಚ್ಚಾಗಿದ್ದರೂ, ಧನಾತ್ಮಕ ಅಂಶವೆಂದರೆ ಅದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4ರ ಜನನ ದರಕ್ಕಿಂತ ಕಡಿಮೆಯಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5ರಂತೆ, ಅತ್ಯಂತ ಕಡಿಮೆ ಜನನ ದರವು ಸಿಕ್ಕಿಮ್‌ನಲ್ಲಿ ದಾಖಲಾಗಿದೆ. ಅದು 1.1 ಆಗಿದೆ. ಜನನ ದರಗಳು ಜನಸಂಖ್ಯೆ ನಿಯಂತ್ರಣ ಕ್ರಮಗಳ ಪರಿಣಾಮಗಳನ್ನು ಸೂಚಿಸುತ್ತಿವೆ.

 ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ)ಯ ಪ್ರಕಾರ, ಒಟ್ಟು ಜನನ ದರವು ಮಹಿಳೆಯೊಬ್ಬರ ಪ್ರಜನನ ಅವಧಿಯ ಕೊನೆಯ ವೇಳೆಗೆ ಅವರಿಗೆ ಹುಟ್ಟಿದ ಮಕ್ಕಳ ಸರಾಸರಿ ಸಂಖ್ಯೆ. ಮರುಪೂರಣ ಜನನ ಮಟ್ಟವೆಂದರೆ, ಒಂದು ಸಮುದಾಯವು ಒಂದು ತಲೆಮಾರಿನಿಂದ ಇನ್ನೊಂದು ತಲೆಮಾರಿಗೆ ನಿಖರವಾಗಿ ತನ್ನಷ್ಟೇ ಜನಸಂಖ್ಯೆಯನ್ನು ಬಿಟ್ಟು ಹೋಗುವುದು.

ಜನಸಂಖ್ಯೆಯಲ್ಲಿ ಒಂದು ದಂಪತಿಯು ಎರಡು ಮಕ್ಕಳಿಗೆ ಸಮ. ಒಂದು ವೇಳೆ ದಂಪತಿಯೊಂದು ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದರೆ ಅದು ಕ್ಷಿಪ್ರಜನಸಂಖ್ಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಎರಡಕ್ಕಿಂತ ಕಡಿಮೆ ಮಕ್ಕಳನ್ನು ಹೊಂದಿದರೂ ಜನಸಂಖ್ಯೆಯು ಖಂಡಿತವಾಗಿಯೂ ಹೆಚ್ಚುತ್ತದೆ, ಆದರೆ ಅದರ ದರ ಇಳಿಮುಖವಾಗಿರುತ್ತದೆ.

ಸಿಕ್ಕಿಮ್, ಲಡಾಖ್, ಗೋವಾ, ಅಂಡಮಾನ್ ಮತ್ತು ನಿಕೋಬಾರ್, ಲಕ್ಷದ್ವೀಪ, ಜಮ್ಮು ಮತ್ತು ಕಾಶ್ಮೀರ ಹಾಗೂ ಚಂಡಿಗಡಗಳಲ್ಲಿ ಜನನ ದರವು 1.5ಕ್ಕಿಂತಲೂ ಕಡಿಮೆಯಾಗಿದೆ. ಮಹಾರಾಷ್ಟ್ರ ಮತ್ತು ರಾಜಸ್ಥಾನಗಳ ಜನನ ದರವು 2 ಆಗಿದೆ. ಇದು ರಾಷ್ಟ್ರೀಯ ಸರಾಸರಿಗೆ ಸಮಾನವಾಗಿದೆ. ಉಳಿದ 22 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜನನ ದರಗಳು 1.6 ಮತ್ತು 1.9ರ ನಡುವೆ ಇದೆ.

1947ರಲ್ಲಿ ದೇಶಕ್ಕೆ ಸ್ವಾತಂತ್ರ ಸಿಕ್ಕಿದ ಬಳಿಕ ಜನಸಂಖ್ಯಾ ಬೆಳವಣಿಗೆಯು ಸರಕಾರಗಳಿಗೆ ನಿರಂತರವಾಗಿ ತಲೆನೋವಿನ ಸಂಗತಿಯಾಗಿದೆ. 1952ರಲ್ಲಿ ಮೊದಲ ಕುಟುಂಬ ಯೋಜನೆ ಕಾರ್ಯಕ್ರಮವನ್ನು ರೂಪಿಸಲಾಯಿತು. ಆದರೆ ಆ ಕಾಲದ ಸರಕಾರಗಳು ಇದನ್ನು ಕಾರ್ಯಗತಗೊಳಿಸಲು ಹಿಂದೇಟು ಹಾಕಿದವು. ಯಾಕೆಂದರೆ ತಮ್ಮ ವೋಟ್‌ಬ್ಯಾಂಕನ್ನು ಕಳೆದುಕೊಳ್ಳುವ ಭಯ ಅವುಗಳಿಗಿತ್ತು. ಬಳಿಕ ಪ್ರಧಾನಿ ಇಂದಿರಾಗಾಂಧಿ 1972ರಲ್ಲಿ ವಿವಾದಾಸ್ಪದ ಸಾರ್ವಜನಿಕ ಸಂತಾನಹರಣ ಅಭಿಯಾನವೊಂದನ್ನು ಆರಂಭಿಸಿದರು. ಆದರೆ ಅದರಿಂದ ಜನಸಂಖ್ಯಾ ನಿಯಂತ್ರಣ ಸಾಧ್ಯವಾಗಲಿಲ್ಲ. ಬದಲಿಗೆ ಅದು ಭಾರೀ ಪ್ರಮಾಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಹಾನಿಯನ್ನುಂಟು ಮಾಡಿತು.

1950ರಲ್ಲಿ ಜನನ ದರವು 5.90 ಆಗಿತ್ತು. ಅಂದರೆ ಆಗ ಒಂದು ದಂಪತಿಗೆ ಸರಾಸರಿ 6 ಮಕ್ಕಳಿದ್ದರು. ಅಂದಿನಿಂದ ಪ್ರತಿ ದಶಕದಲ್ಲೂ ಸರಾಸರಿ ಜನನ ದರವು ಕಡಿಮೆಯಾಗುತ್ತಾ ಬಂದಿದೆ. ಆದರೆ ಅದು ತುಂಬಾ ನಿಧಾನಗತಿಯಲ್ಲಿ ನಡೆದಿದೆ. 1950ರಿಂದ 2021ರವರೆಗೆ ಜನನ ದರವು 5.90ರಿಂದ 2.0ಗೆ ಇಳಿದಿದೆ. ಇದು ದೇಶಕ್ಕೆ ನೆಮ್ಮದಿಯ ವಿಚಾರವಾಗಿದೆ. ಆದರೆ, ಇನ್ನು ದೇಶದ ಜನಸಂಖ್ಯೆ ಕ್ಷಿಪ್ರವಾಗಿ ಕಡಿಮೆಯಾಗಲು ಪ್ರಾರಂಭವಾಗುತ್ತದೆ ಎನ್ನುವುದು ಇದರ ಅರ್ಥವಲ್ಲ. ದೀರ್ಘಾವಧಿಯಲ್ಲಿ ನಾವು ಶೂನ್ಯ ಜನಸಂಖ್ಯಾ ಬೆಳವಣಿಗೆ ದರವನ್ನು ಹೊಂದಲಿದ್ದೇವೆ. ಆದರೆ ಅದು ತಕ್ಷಣ ದಲ್ಲಿ ಸಂಭವಿಸುವುದಿಲ್ಲ. ಈವರೆಗೆ ದೇಶವು ಸ್ಥಿರತೆಯ ಗುರಿಯನ್ನು ಸಾಧಿಸಿದೆ.

 ‘ಲ್ಯಾನ್ಸೆಟ್’ ಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಅಧ್ಯಯನವೊಂದರ ಪ್ರಕಾರ, ಭಾರತದ ಜನನ ದರವು ಪ್ರಸಕ್ತ ದರದಲ್ಲಿ ಕುಸಿಯುತ್ತಾ ಸಾಗಿದರೂ ಇಂದಿನಿಂದ 80 ವರ್ಷಗಳ ಬಳಿಕ (ಅಂದರೆ ಶತಮಾನದ ಕೊನೆಯ ಹೊತ್ತಿಗೆ) ದೇಶದ ಜನಸಂಖ್ಯೆಯು 100 ಕೋಟಿಗೆ ಇಳಿಯಬಹುದಾಗಿದೆ. ಇದು ಹಲವು ದೇಶಗಳ ಒಟ್ಟು ಜನಸಂಖ್ಯೆಗೆ ಸಮವಾಗಿದೆ. ಆ ವೇಳೆಗೆ, ಜನನ ದರವು ಈಗಿನ 2.0ಯಿಂದ 1.27ಕ್ಕೆ ಇಳಿಯಬಹುದು ಎನ್ನುವುದನ್ನೂ ಅಧ್ಯಯನ ಕಂಡುಕೊಂಡಿದೆ.

ವಿಶ್ವಸಂಸ್ಥೆಯ ವಿಶ್ವ ಜನಸಂಖ್ಯೆ ಡಾಟಾ ಶೀಟ್, 2021ರ ಪ್ರಕಾರ, 2024-28ರ ಅವಧಿಯಲ್ಲಿ ಭಾರತದ ಜನಸಂಖ್ಯೆಯು ಚೀನಾದ ಜನಸಂಖ್ಯೆಯನ್ನು ಹಿಂದಿಕ್ಕುತ್ತದೆ ಹಾಗೂ ಆ ವೇಳೆಗೆ ಭಾರತವು ಜಗತ್ತಿನ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿದ ದೇಶವಾಗಿರುತ್ತದೆ. ಭಾರತದ ಜನನದರವು ಇಳಿಯುತ್ತಿರುವುದರಿಂದ, ಅದು ಜಗತ್ತಿನ ಅತ್ಯಂತ ಜನಭರಿತ ದೇಶವಾಗಲು ಇನ್ನೂ ಹಲವು ವರ್ಷಗಳು ಬೇಕಾಗಬಹುದು. ಇದನ್ನು ಹೋಗಲಾಡಿಸಲು ತುಂಬಾ ಹೆಚ್ಚಿನ ಕೆಲಸಗಳನ್ನು ಮಾಡಬೇಕಾಗಿದೆ.

ಈ ಸಮೀಕ್ಷೆಯ ಪ್ರಕಾರ, ಜನನ ದರ ಕುಸಿತಕ್ಕೆ ಕಾರಣ ವಿವಿಧ ಗರ್ಭನಿರೋಧಕಗಳ ಬಳಕೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4ಕ್ಕೆ ಹೋಲಿಸಿದರೆ ಗರ್ಭನಿರೋಧಕಗಳನ್ನು ಬಳಸುತ್ತಿರುವ ಜನರ ಸಂಖ್ಯೆಯಲ್ಲಿ ಶೇ.13 ಹೆಚ್ಚಳವಾಗಿದೆ. ಪ್ರಸಕ್ತ, ದೇಶದಲ್ಲಿ ಸರಾಸರಿ ಶೇ.67 ಜನರು ಗರ್ಭನಿರೋಧಕಗಳನ್ನು ಬಳಸುತ್ತಿದ್ದಾರೆ ಹಾಗೂ ಆಸ್ಪತ್ರೆಗಳಲ್ಲಿ ಸಂಭವಿಸುವ ಹೆರಿಗೆಗಳ ಸಂಖ್ಯೆ ಶೇ.79ರಿಂದ ಶೇ.89ಕ್ಕೆ ಏರಿದೆ. ಅದೇ ವೇಳೆ, ಶೇ. 76ರಷ್ಟು ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಇದರಿಂದಾಗಿ ಶಿಶು ಮರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿದೆ.

ಗರ್ಭನಿರೋಧಕ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುತ್ತಿರುವ ಮಹಿಳೆಯರ ಸಂಖ್ಯೆ ಪುರುಷರ ಸಂಖ್ಯೆಗಿಂತ ಅಧಿಕವಾಗಿದೆ. ಅದು 2015-16ರ ಅವಧಿಯಲ್ಲಿದ್ದ ಶೇ.36ರಿಂದ 2019-21ರ ಅವಧಿಯಲ್ಲಿ ಶೇ.38ಕ್ಕೇರಿದೆ. ಮಹಿಳೆಯರ ಸಂತಾನಹರಣ ಶಸ್ತ್ರಕ್ರಿಯೆಯಲ್ಲಿ ಹೆಚ್ಚಳವಾಗಿರುವುದು, ಕುಟುಂಬ ಯೋಜನೆಯ ಹೊಣೆ ಮಹಿಳೆಯರ ಮೇಲಿರುವುದನ್ನು ತೋರಿಸುತ್ತದೆ. ಇಳಿಯುತ್ತಿರುವ ಜನನ ದರವು ಜನ ಸಂಖ್ಯೆಯನ್ನು ನಿಯಂತ್ರಿಸುವ ಮಹತ್ವದ ಅಂಶ ಎನ್ನುವುದನ್ನು ಗಮನಿಸಬೇಕು. ಆದರೆ, ಹುಟ್ಟುವಾಗಲೇ ಅಥವಾ ನಂತರದ ದಿನಗಳಲ್ಲಿ ಸಂಭವಿಸುವ ಮಗುವಿನ ಸಾವು ಕೂಡ ಜನಸಂಖ್ಯೆಯ ಬೇಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಶಿಶು ಸಾವಿನ ದರವು, ಜನನ ಮತ್ತು ಫಲವಂತಿಕೆಯ ದರಗಳ ಮೇಲೂ ಪರಿಣಾಮ ಬೀರುತ್ತದೆ.

ಮಕ್ಕಳ ಆಹಾರದಲ್ಲಿ ಪೋಷಕಾಂಶಗಳ ಕೊರತೆಯಿಂದಾಗಿ ಮಕ್ಕಳ ಬೆಳವಣಿಗೆ ಪರಿಪೂರ್ಣವಾಗಿರುವುದಿಲ್ಲ. ಹಾಗಾಗಿ, ಭಾರತದಲ್ಲಿ ಶೇ.36 ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಬೆಳೆಯುವುದಿಲ್ಲ. ಈಗ ದೇಶದ ಶೇ.67.1 ಮಕ್ಕಳನ್ನು ಅನೀಮಿಯ (ರಕ್ತಹೀನತೆ) ಬಾಧಿಸುತ್ತಿದೆ. ಹೆಣ್ಣು ಮಕ್ಕಳಲ್ಲಿ ಈ ಪ್ರಮಾಣ ಶೇ.57 ಆದರೆ, ಗಂಡು ಮಕ್ಕಳಲ್ಲಿ ಶೇ.25. ಬೇಸರದ ಸಂಗತಿಯೆಂದರೆ, 2015-16ರ ಸಾಲಿಗೆ ಹೋಲಿಸಿದರೆ ಈ ಪ್ರಮಾಣವು ಮಕ್ಕಳಲ್ಲಿ ಶೇ. 8.5ರಷ್ಟು, ಮಹಿಳೆಯರಲ್ಲಿ ಶೇ.4ರಷ್ಟು ಮತ್ತು ಪುರುಷರಲ್ಲಿ ಶೇ.2ರಷ್ಟು ಹೆಚ್ಚಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ರಕ್ತಹೀನತೆಗೆ ಸಂಬಂಧಿಸಿದಂತೆ ಆತಂಕಕಾರಿ ಮಾಹಿತಿಯೊಂದನ್ನು ತೆರೆದಿಟ್ಟಿದೆ. ಪೌಷ್ಟಿಕ ಆಹಾರದ ಕೊರತೆಯ ಹಿನ್ನೆಲೆಯಲ್ಲಿ ಶೇ.67 ಮಕ್ಕಳು ಮತ್ತು ಶೇ.57 ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಇಂತಹ ತಾಯಂದಿರು ಮತ್ತು ಮಕ್ಕಳು ದೇಶಕ್ಕೆ ಭವ್ಯ ಭವಿಷ್ಯವನ್ನು ಹೇಗೆ ತರಬಲ್ಲರು?

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-5 ದೇಶದಲ್ಲಿ ಪುರುಷರಿಗಿಂತ ಹೆಚ್ಚಿನ ಮಹಿಳೆಯರನ್ನು ದಾಖಲಿಸಿದೆಯಾದರೂ, ಸಾಮಾನ್ಯವಾಗಿ, ಈ ಸಮೀಕ್ಷೆಯು ಜನಗಣತಿಯ ಅಂಕಿ-ಸಂಖ್ಯೆಗಳಿಗಿಂತ ಅಧಿಕ ಮೌಲ್ಯದ ಅಂಕಿ-ಅಂಶಗಳನ್ನು ದಾಖಲಿಸುತ್ತದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-1 (1992-93)ರಲ್ಲಿ ದಾಖಲಾದಂತೆ 1,000 ಪುರುಷರಿಗೆ 957 ಮಹಿಳೆಯರು ಇದ್ದರು. ಆದರೆ, 1991ರ ಜನಗಣತಿಯಲ್ಲಿ 1,000 ಪುರುಷರಿಗೆ 927 ಮಹಿಳೆಯರನ್ನು ದಾಖಲಿಸಲಾಗಿತ್ತು. ಅದೇ ರೀತಿ, ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-2 (1998-99)ರಲ್ಲಿ 1,000 ಪುರುಷರಿಗೆ 960 ಮಹಿಳೆಯರು ದಾಖಲಾದರೆ, 2001ರ ಜನಗಣತಿಯಲ್ಲಿ 1,000 ಪುರುಷರಿಗೆ 933 ಮಹಿಳೆಯರು ದಾಖಲಾಗಿದ್ದರು. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-4 (2015-16)ರಲ್ಲಿ 1,000 ಪುರುಷರಿಗೆ 991 ಮಹಿಳೆಯರು ದಾಖಲಾಗಿದ್ದರೆ, 2001ರ ಜನಗಣತಿಯಲ್ಲಿ ದಾಖಲಾಗಿರುವ ಮಹಿಳೆಯರ ಸಂಖ್ಯೆ 943 ಆಗಿತ್ತು. ಈ ಎಲ್ಲ ಅಂಕಿ-ಅಂಶಗಳಿಂದ, ಮಹಿಳೆಯರ ಸಂಖ್ಯೆಯು ನಿಧಾನವಾಗಿ ಹೆಚ್ಚುತ್ತಿರುವುದು ಕಂಡು ಬರುತ್ತದೆ. ಆದರೆ, ಮಹಿಳೆಯರ ಸಂಖ್ಯೆಯು ಪುರುಷರ ಸಂಖ್ಯೆಗೆ ಸಮವಾಗಬೇಕಾದರೆ ಇನ್ನಷ್ಟು ಸಮಯ ಬೇಕಾಗಬಹುದು.

ಕುಂಠಿತಗೊಳ್ಳುತ್ತಿರುವ ಜನನ ದರದೊಂದಿಗೆ, ಒಟ್ಟು ಜನಸಂಖ್ಯೆಯಲ್ಲಿ 15 ವರ್ಷಕ್ಕಿಂತ ಕೆಳಗಿನ ಪ್ರಾಯದ ಮಕ್ಕಳ ಪ್ರಮಾಣವೂ ಕ್ಷಿಪ್ರವಾಗಿ ಕುಸಿಯುತ್ತಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-1 (1992-93)ರ ಪ್ರಕಾರ, ಈ ವಯೋಮಿತಿಯ ಮಕ್ಕಳ ಸಂಖ್ಯೆ ಶೇ.38 ಆಗಿತ್ತು. ಅದು ಈಗ ಶೇ.26.5ಕ್ಕೆ ಕುಸಿದಿದೆ. ಸದ್ಯೋಭವಿಷ್ಯದಲ್ಲಿ ಭಾರತದ ಜನಸಂಖ್ಯೆಯು ನಿಧಾನಗತಿಯಲ್ಲಿ ಹೆಚ್ಚುತ್ತದೆ ಎನ್ನುವುದನ್ನು ಇದು ತೋರಿಸುತ್ತದೆ. ಇದು ದೇಶದ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಅಗಾಧ ಪರಿಣಾಮವನ್ನು ಉಂಟು ಮಾಡಲಿದೆ.

ಸರಕಾರದ ಕುಟುಂಬ ಯೋಜನೆ ಕಾರ್ಯಕ್ರಮವಲ್ಲದೆ, ಸಣ್ಣ ಕುಟುಂಬಗಳಿಗಾಗಿ ಜನರು ಆಶಿಸುತ್ತಿರುವುದು ಕೂಡ ಇಳಿಯುತ್ತಿರುವ ಜನನ ದರಕ್ಕೆ ಕಾರಣವಾಗಿದೆ. ಚೀನಾದಂತೆ ‘ಒಂದು ಮಗು ನೀತಿ’ಯನ್ನು ಭಾರತದಲ್ಲಿ ಹೇರಿಲ್ಲವಾದರೂ, 29 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 1.1ರಿಂದ 1.9 ಮಾತ್ರ ಇದೆ. ಒಂದೇ ಮಗು ಸಾಕು ಎಂಬ ನಿರ್ಧಾರಕ್ಕೆ ಜನರು ಬಂದರೆ, ಜನಸಂಖ್ಯೆಯನ್ನು ನಿಯಂತ್ರಿಸುವ ಸರಕಾರದ ಕೆಲಸ ಸುಲಭವಾಗುತ್ತದೆ. ಬಿಹಾರ, ಉತ್ತರಪ್ರದೇಶ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ‘ಮಿಶನ್ ಪರಿವಾರ್ ವಿಕಾಸ್’ ಮುಂತಾದ ಕಾರ್ಯಕ್ರಮಗಳನ್ನು ಬೃಹತ್ ಪ್ರಮಾಣದಲ್ಲಿ ಜಾರಿಗೊಳಿಸುವ ತುರ್ತು ಅಗತ್ಯವಿದೆ. ಅದೂ ಅಲ್ಲದೆ, ಈ ರಾಜ್ಯಗಳ ಮಹಿಳೆಯರ ಸಾಕ್ಷರತೆ ಪ್ರಮಾಣವನ್ನು ಹೆಚ್ಚಿಸಿ ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸರಕಾರ ಗಂಭೀರ ಪ್ರಯತ್ನಗಳನ್ನು ನಡೆಸಬೇಕಾಗಿದೆ. ಈ ಮೂರು ರಾಜ್ಯಗಳ ಮಹಿಳೆಯರ ಪೈಕಿ ಶೇ.40ರಿಂದ ಶೇ.45 ಜನರು ಈಗಲೂ ಅನಕ್ಷರಸ್ಥರಾಗಿದ್ದಾರೆ. ಜನಸಂಖ್ಯಾ ಬೆಳವಣಿಗೆಯನ್ನು ತಡೆಗಟ್ಟುವುದಕ್ಕಾಗಿ, ಮಹಿಳೆಯರು ಮತ್ತು ಮಕ್ಕಳ ಆಹಾರದಲ್ಲಿ ಪೋಷಕಾಂಶಗಳನ್ನು ತುಂಬಲು ಸರಕಾರವು ವ್ಯಾಪಕ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಕಡಿಮೆಯಾಗುತ್ತಿರುವ ಜನನ ದರವು ಉತ್ತಮ ಸಂಕೇತವಾಗಿದೆ ಹಾಗೂ ಅದನ್ನು ಮತ್ತಷ್ಟು ಕೆಳಗೆ ತರಲು ಇನ್ನಷ್ಟು ಹೆಚ್ಚಿನ ಪ್ರಯತ್ನಗಳ ಅಗತ್ಯವಿದೆ.

(ಡಾ. ಗುರೀಂದರ್‌ಕೌರ್ ಪಟಿಯಾಲದ ಪಂಜಾಬಿ ವಿಶ್ವವಿದ್ಯಾನಿಲಯದ ಜಿಯಾಗ್ರಫಿ ವಿಭಾಗದಲ್ಲಿ ಪ್ರೊಫೆಸರ್ ಆಗಿದ್ದರು)

Writer - ಡಾ. ಗುರೀಂದರ್‌ಕೌರ್

contributor

Editor - ಡಾ. ಗುರೀಂದರ್‌ಕೌರ್

contributor

Similar News