ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಬಗ್ಗೆ ಹೆಮ್ಮೆಪಡಬೇಕು: ಪ್ರಶ್ನಿಸಿದ್ದ ಅರ್ಜಿದಾರನಿಗೆ ಹೇಳಿದ ಕೇರಳ ಹೈಕೋರ್ಟ್

Update: 2021-12-13 17:16 GMT

ಕೊಚ್ಚಿ,ಡಿ.13: ಲಸಿಕೆ ಪ್ರಮಾಣಪತ್ರದ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವಿದ್ದರೆ ನಿಮಗೇನು ತೊಂದರೆ ಎಂದು ಕೇರಳ ಉಚ್ಚ ನ್ಯಾಯಾಲಯವು ಈ ಬಗ್ಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದ ವ್ಯಕ್ತಿಗೆ ಪ್ರಶ್ನಿಸಿದೆ. ತನ್ನ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಭಾವಚಿತ್ರವಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು.

‘ಅವರು ನಮ್ಮ ಪ್ರಧಾನಿಯಾಗಿದ್ದಾರೆ,ಅಮೆರಿಕದ ಪ್ರಧಾನಿಯಲ್ಲ. ಜನಾದೇಶದ ಮೇರೆಗೆ ಮೋದಿ ಅಧಿಕಾರಕ್ಕೆ ಬಂದಿದ್ದಾರೆಯೇ ಹೊರತು ಒಳಮಾರ್ಗಗಳ ಮೂಲಕವಲ್ಲ ’ ಎಂದು ನ್ಯಾ.ಪಿ.ವಿ.ಕುಞಿಕೃಷ್ಣನ್ ಅವರು ಹೇಳಿದರು.

ಪ್ರಮಾಣಪತ್ರವು ಪ್ರಧಾನಿ ಚಿತ್ರವನ್ನು ಒಳಗೊಂಡಿರುವುದನ್ನು ಪ್ರಶ್ನಿಸಿ ಕೊಟ್ಟಾಯಂ ನಿವಾಸಿ ಪೀಟರ್ ಮಯಾಳಿಪರಂಬಿಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ಉಚ್ಚ ನ್ಯಾಯಾಲಯವು,‘ನೀವೇಕೆ ಮಾಜಿ ಪ್ರಧಾನಿ ಜವಾಹರಲಾಲ ನೆಹರು ಅವರ ಹೆಸರಿನಲ್ಲಿರುವ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೀರಿ? ಸಂಸ್ಥೆಯಿಂದ ನೆಹರು ಹೆಸರನ್ನು ತೆಗೆಯಬೇಕು ಎಂಬ ನಿಲುವನ್ನು ನೀವೇಕೆ ತಳೆಯುತ್ತಿಲ್ಲ? ಮೋದಿ ನಮ್ಮ ಪ್ರಧಾನಿಯಾಗಿದ್ದಾರೆ. ನಿಮಗೆ ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಚಿತ್ರದಿಂದ ನಿಮಗೇನು ತೊಂದರೆ ಎನ್ನುವುದು ನಮಗೆ ಅರ್ಥವಾಗುತ್ತಿಲ್ಲ ’ಎಂದು ಹೇಳಿತು.

ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಭಾವಚಿತ್ರ ಅಪ್ರಸ್ತುತವಾಗಿದೆ,ಇತರ ದೇಶಗಳು ವಿತರಿಸಿರುವ ಲಸಿಕೆ ಪ್ರಮಾಣ ಪತ್ರಗಳಲ್ಲಿ ಅಲ್ಲಿಯ ನಾಯಕರ ಭಾವಚಿತ್ರಗಳಿಲ್ಲ ಎಂದು ಹೇಳಿದ ಅರ್ಜಿದಾರರು,ಸರಕಾರದ ಸಂದೇಶಗಳು ಮತ್ತು ಅಭಿಯಾನಗಳು,ವಿಶೇಷವಾಗಿ ಅದಕ್ಕೆ ಸರಕಾರಿ ಹಣದ ಬಳಕೆಯಾದಾಗ,ರಾಜಕೀಯ ಪಕ್ಷದ ಯಾವುದೇ ನಾಯಕನನ್ನು ವ್ಯಕ್ತಿಗತಗೊಳಿಸಬಾರದು. ಅದು ತನ್ನ ಮತದಾನದ ಸ್ವತಂತ್ರ ಆಯ್ಕೆಯ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದೂ ವಾದಿಸಿದರಾದರೂ ನ್ಯಾಯಾಲಯವು ಅದನ್ನು ಪುರಸ್ಕರಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News