ಸಂದರ್ಶನದಲ್ಲಿ "ನಾನು ಮನಸ್ಸಾದಾಗ ರಾಜ್ಯಸಭೆಗೆ ಹೋಗುತ್ತೇನೆ" ಎಂದಿದ್ದ ರಂಜನ್ ಗೊಗೊಯಿ ವಿರುದ್ಧ ಹಕ್ಕುಚ್ಯುತಿ ನೋಟಿಸ್

Update: 2021-12-13 12:27 GMT

ಹೊಸದಿಲ್ಲಿ: ತಮ್ಮ ಆತ್ಮಕಥನ 'ಜಸ್ಟಿಸ್ ಫಾರ್ ದಿ ಜಡ್ಜ್'ಗೆ ಸಂಬಂಧಿಸಿಂತೆ ಸುದ್ದಿ ವಾಹಿನಿ ಎನ್‍ಡಿಟಿವಿ ಜತೆಗೆ ಮಾತನಾಡುವ ವೇಳೆ ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಅವರು ನೀಡಿದ ಹೇಳಿಕೆಯೊಂದು ಅವರ ವಿರುದ್ಧ ಸಂಸತ್ತಿನಲ್ಲಿ ಹಕ್ಕುಚ್ಯುತಿ ನೋಟಿಸ್‍ಗೆ ಕಾರಣವಾಗಿದೆ.

"ನನಗೆ ಮನಸ್ಸಾದಾಗ ನಾನು ರಾಜ್ಯಸಭೆಗೆ ಹೋಗುತ್ತೇನೆ" ಎಂದು ಜಸ್ಟಿಸ್ ಗೊಗೊಯಿ ಹೇಳಿದ್ದರು.

ಇದನ್ನು ಉಲ್ಲೇಖಿಸಿ ಇಂದು ತೃಣಮೂಲ ಕಾಂಗ್ರೆಸ್ ಹಕ್ಕುಚ್ಯತಿ ನೋಟಿಸ್ ಸಲ್ಲಿಸಿದೆ. "ಜಸ್ಟಿಸ್ ಗೊಗೊಯಿ ಅವರ ಹೇಳಿಕೆಗಳು ರಾಜ್ಯಸಭೆಯ ನಿಂದನೆಯಾಗಿದೆ ಹಾಗೂ  ಸದನದ ಗೌರವಕ್ಕೆ ಧಕ್ಕೆ ತಂದಿದೆ ಹಾಗೂ ಸವಲತ್ತುಗಳ ಉಲ್ಲಂಘನೆಯಾಗಿದೆ" ಎಂದು ತಾನು ಸಲ್ಲಿಸಿದ ಹಕ್ಕುಚ್ಯುತಿ ನೋಟಿಸ್‍ನಲ್ಲಿ ತೃಣಮೂಲ ಕಾಂಗ್ರೆಸ್ ಹೇಳಿದೆ.

ರಾಜ್ಯಸಭೆಯಲ್ಲಿ ಗೊಗೊಯಿ ಅವರ ಹಾಜರಾತಿ ಕಡಿಮೆಯಾಗಿದೆ ಎಂಬ ಕುರಿತಾದ ಪ್ರಶ್ನೆಗೆ ಅವರು ನೀಡಿದ್ದ ಉತ್ತರವನ್ನೂ ಟಿಎಂಸಿಯ ಹಕ್ಕುಚ್ಯುತಿ ನೋಟಿಸ್‍ನಲ್ಲಿ ಉಲ್ಲೇಖಿಸಲಾಗಿದೆ.

"ಒಂದೆರಡು ಅಧಿವೇಶನಗಳಿಗಾಗಿ ನಾನು ಸದನಕ್ಕೆ ಪತ್ರ ಬರೆದಿರುವುದನ್ನು ನೀವು ಗಣನೆಗೆ ತೆಗೆದುಕೊಂಡಿಲ್ಲ. ಕೋವಿಡ್ (ವೈದ್ಯಕೀಯ ಸಲಹೆಯಂತೆ) ಕಾರಣ ನಾನು ಅಧಿವೇಶನದಲ್ಲಿ ಭಾಗವಹಿಸುವುದಿಲ್ಲವೆಂದು ಪತ್ರ ಬರೆದಿದ್ದೆ. ಕಳೆದ ಚಳಿಗಾಲದ ಅಧಿವೇಶನಕ್ಕಿಂತ ಸ್ವಲ್ಪ ಮೊದಲು ಆರ್‍ಟಿ-ಪಿಸಿಆರ್ ಪರೀಕ್ಷೆ ನಡೆಸಿದರೆ ಮಾತ್ರ ರಾಜ್ಯಸಭೆಗೆ ಪ್ರವೇಶಿಸಬಹುದಾಗಿತ್ತು. ಆದರೆ ಅಲ್ಲಿಗೆ ನನಗೆ ಹೋಗುವುದು ಅಷ್ಟೊಂದು ಸಮಾಧಾನ ತಂದಿಲ್ಲ, ಸಾಮಾಜಿಕ ಅಂತರ ನಿಯಮವಿದ್ದರೂ ಪಾಲನೆಯಾಗುತ್ತಿರಲಿಲ್ಲ. ಆಸನ ಏರ್ಪಾಟು ಕೂಡ ಸಮಾಧಾನ ತಂದಿಲ್ಲ. ನಾನು ನನಗೆ ಬೇಕಿದ್ದಾಗ ರಾಜ್ಯಸಭೆಗೆ ಹೋಗುತ್ತೇನೆ. ನಾನು ಮಾತನಾಡಬೇಕಾದಂತಹ ಪ್ರಮುಖ ವಿಚಾರಗಳಿವೆ ಎನ್ನುವಾಗ. ನಾನು ನಾಮನಿರ್ದೇಶಿತ ಸದಸ್ಯ, ಯಾವುದೇ ಪಕ್ಷದ ವಿಪ್ ನನಗೆ ಅನ್ವಯಿಸುವುದಿಲ್ಲ. ಆದುದರಿಂದ ಸದಸ್ಯರಿಗೆ ಒಳಬರಲು ಗಂಟೆ ಬಾರಿಸಿದಾಗ ಅದು ನನಗೆ ಅನ್ವಯವಾಗುವುದಿಲ್ಲ ನನಗಿಷ್ಟ ಬಂದಾಗ ಹೋಗುತ್ತೇನೆ ಹಾಗೂ ಹೊರಬರುತ್ತೇನೆ. ನಾನು ಸದನದ ಸ್ವತಂತ್ರ ಸದಸ್ಯ" ಎಂದು ಗೊಗೊಯಿ ಸಂದರ್ಶನದಲ್ಲಿ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News