ವ್ಯಕ್ತಿ ಅತಿಯಾದ ಭಾರವನ್ನು ಹೊತ್ತು ಸಾಗಿಸುವುದು ಅಮಾನವೀಯ: ಕೇರಳ ಹೈಕೋರ್ಟ್

Update: 2021-12-14 15:42 GMT

ಕೊಚ್ಚಿ,ಡಿ.14: ವ್ಯಕ್ತಿಯು ತನ್ನ ತಲೆಯ ಮೇಲೆ ಅಥವಾ ಶರೀರದ ಮೇಲೆ ಅತಿಯಾದ ಭಾರವನ್ನು ಹೊತ್ತುಕೊಂಡು ಸಾಗಿಸುವುದು ಅಮಾನವೀಯವಾಗಿದೆ ಮತ್ತು ಇದಕ್ಕೆ ಅವಕಾಶ ಕಲ್ಪಿಸಿರುವ ತಲೆಹೊರೆ ಕಾರ್ಮಿಕರ ಕಾಯ್ದೆಯು ಗತಕಾಲದ ಪಳೆಯುಳಿಕೆಯಾಗಿದೆ ಎಂದು ಮಂಗಳವಾರ ಹೇಳಿರುವ ಕೇರಳ ಉಚ್ಚ ನ್ಯಾಯಾಲಯವು,ಇಂತಹ ಕಾರ್ಮಿಕರ ಬವಣೆಯನ್ನು ನಿವಾರಿಸಲು ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡಿದೆ.

‘ತಲೆಹೊರೆಯನ್ನು ನಿರ್ಮೂಲಿಸಬೇಕು. ಅದು ಅಮಾನವೀಯ ಚಟುವಟಿಕೆಯಾಗಿದೆ. ನಮ್ಮ ಜನರನ್ನು ಇಂತಹ ಹಿಂಸೆಗೆ ನಾವು ಗುರಿಪಡಿಸುವುದು ಹೇಗೆ ಸಾಧ್ಯ ’ ಎಂದು ಪ್ರಶ್ನಿಸಿದ ನ್ಯಾ.ದೇವನ್ ರಾಮಚಂದ್ರನ್ ಅವರು,ಲೋಡಿಂಗ್ ಚಟುವಟಿಕೆಗಳನ್ನು ನಡೆಸಲು ತಲೆಹೊರೆ ಕಾರ್ಮಿಕರನ್ನು ಸಜ್ಜುಗೊಳಿಸಬೇಕು ಮತ್ತು ಯಂತ್ರಗಳ ಬಳಕೆಗೆ ಅವರನ್ನು ತರಬೇತುಗೊಳಿಸಬೇಕು ಎಂದರು. 

ತಲೆಹೊರೆ ಕಾರ್ಮಿಕರ ಜೀವನೋಪಾಯವನ್ನು ಕಿತ್ತುಕೊಳ್ಳುವುದು ನ್ಯಾಯಾಲಯದ ಉದ್ದೇಶವಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ತಲೆಹೊರೆ ಕಾರ್ಮಿಕರು ಬಡವರು,ಅವರಿಗೆ ಬೇರೆ ಉದ್ಯೋಗಗಳ ಆಯ್ಕೆಗಳಿಲ್ಲ. ಅವರ ಹತಾಶ ಸ್ಥಿತಿಯನ್ನು ತಮ್ಮದೇ ಆದ ಕಾರಣಗಳಿಗಾಗಿ ಹಲವಾರು ರಾಜಕೀಯ ಪಕ್ಷಗಳು ಸೇರಿದಂತೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ನ್ಯಾಯಾಲಯವು ಬೆಟ್ಟುಮಾಡಿತು. ದಿನಕ್ಕೆ ಹಲವಾರು ಗಂಟೆಗಳಂತೆ ಹಲವಾರು ವರ್ಷಗಳ ಕಾಲ ತಲೆಯ ಮೇಲೆ ಅಥವಾ ಶರೀರದ ಮೇಲೆ ಅತಿಯಾದ ಭಾರವನ್ನು ಹೊರುವುದು ಸ್ನಾಯು-ಅಸ್ಥಿಪಂಜರ ಸಮಸ್ಯೆಗಳಿಗೆ ಕಾರಣವಾಗುತ್ತದೆ ಮತ್ತು ಬೆನ್ನುಮೂಳೆಗೆ ಹಾನಿಯನ್ನುಂಟು ಮಾಡುತ್ತದೆ. ವಿಶ್ವದ ಇತರ ಕಡೆಗಳಲ್ಲಿ ಎಲ್ಲೂ ಅಲ್ಲಿಯ ಪ್ರಜೆಗಳು ಇಂತಹ ಚಟುವಟಿಕೆಯಲ್ಲಿ ತೊಡಗಿಕೊಳ್ಳುವದಿಲ್ಲ ಎಂದು ಹೇಳಿದ ನ್ಯಾ.ರಾಮಚಂದ್ರನ್,ಅವರು ಯಂತ್ರಗಳನ್ನು ಬಳಸುತ್ತಾರೆ ಅಥವಾ ಲೋಡಿಂಗ್ ಕಾರ್ಯಗಳಿಗಾಗಿ ಹೊರಗಿನ ಜನರನ್ನು ಕರೆಸಿಕೊಳ್ಳುತ್ತಾರೆ. ಶಾಸನದಲ್ಲಿಯ ‘ಹೆಡ್ಲೋಡ್(ತಲೆಹೊರೆ)’ ಶಬ್ದವನ್ನು ತೆಗೆದು ‘ಲೋಡಿಂಗ್’ ಶಬ್ದವನ್ನು ಸೇರಿಸಬೇಕಿದೆ ಎಂದರು.
‘ಯಾವುದೇ ನಾಗರಿಕ ಸಮಾಜವು ಇದನ್ನು ಒಪ್ಪಿಕೊಳ್ಳುತ್ತದೆಯೇ? ಬಹುಶಃ ನಾವು ಅಂದುಕೊಂಡಷ್ಟು ನಾಗರಿಕತೆಯನ್ನು ನಾವು ಹೊಂದಿಲ್ಲ. ನಾವು ಈ ಅನಿಷ್ಟ ಚಟುವಟಿಕೆಯನ್ನು ಬಲಗೊಳಿಸುತ್ತಿದ್ದೇವೆ ಮತ್ತು ಶಾಶ್ವತಗೊಳಿಸುತ್ತಿದ್ದೇವೆ. ಕಾನೂನು ಕೂಡ ಈ ಚಟುವಟಿಕೆಯನ್ನು ಬಲಗೊಳಿಸುತ್ತಿದೆ ’ ಎಂದು ಹೇಳಿದ ನ್ಯಾಯಾಲಯವು,ಈ ಜನರಿಗೆ ಪುನರ್ವಸತಿಯನ್ನು ಕಲ್ಪಿಸಬೇಕು, ಅವರನ್ನು ಕೆಲಸದಿಂದ ಕಿತ್ತುಹಾಕಬಾರದು. ಕಾನೂನು 50 ವರ್ಷಗಳಷ್ಟು ಹಳೆಯದಾಗಿದೆ. ಪರಿಸ್ಥಿತಿ ಈಗ ಬದಲಾಗಿದೆ. ಈ ಕಾರ್ಮಿಕರ ಬವಣೆಯನ್ನು ನಿವಾರಿಸುವ ನಿಟ್ಟಿನಲ್ಲಿ ಸರಕಾರವು ಚಿಂತನೆ ನಡೆಸಲು ಇದು ಸಕಾಲವಾಗಿದೆ ಎಂದು ಹೇಳಿತು.
ತಲೆಹೊರೆ ಕಾರ್ಮಿಕರ ಕಾಯ್ದೆಗೆ ತಿದ್ದುಪಡಿಗಳನ್ನು ತರಲಾಗುತ್ತದೆ ಮತ್ತು ಕರಡು ತಿದ್ದುಪಡಿಯ ಸಾರಾಂಶವು ಸಿದ್ಧವಾಗಿದೆ ಎಂದು ರಾಜ್ಯ ಸರಕಾರವು ನ್ಯಾಯಾಲಯಕ್ಕೆ ತಿಳಿಸಿತು.
ತಿದ್ದುಪಡಿಯನ್ನು ಯಾವಾಗ ಮತ್ತು ಯಾವ ರೀತಿಯಲ್ಲಿ ಅನುಷ್ಠಾನಿಸಲಾಗುತ್ತದೆ ಎನ್ನುವದನ್ನು ಮುಂದಿನ ವಿಚಾರಣಾ ದಿನಾಂಕವಾದ ಡಿ.21ರೊಳಗೆ ತನಗೆ ತಿಳಿಸುವಂತೆ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಸೂಚಿಸಿತು.
‘ನೊಕ್ಕುಕೂಲಿ’ಗಾಗಿ ಆಗ್ರಹಿಸುತ್ತಿರುವ ಕೆಲವು ವ್ಯಕ್ತಿಗಳ ಮಧ್ಯಪ್ರವೇಶವಿಲ್ಲದೆ ತನ್ನ ಉದ್ಯಮವನ್ನು ನಡೆಸಲು ಪೊಲೀಸ್ ರಕ್ಷಣೆಯನ್ನು ಕೋರಿ ಹೋಟೆಲ್ ಮಾಲಿಕರೋರ್ವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಉಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿತ್ತು. ಕೇರಳದಲ್ಲಿ ಕೆಲವು ಕಾರ್ಮಿಕ ಸಂಘಟನೆಗಳು ಉದ್ಯಮಗಳಿಂದ ‘ಹಫ್ತಾ ವಸೂಲಿ’ಯಲ್ಲಿ ತೊಡಗಿದ್ದು,ಇದನ್ನು ನೊಕ್ಕುಕೂಲಿ ಎಂದು ಕರೆಯಲಾಗುತ್ತದೆ ಮತ್ತು ಇದು ಕೇರಳಕ್ಕೆ ಕೆಟ್ಟ ಹೆಸರನ್ನು ತಂದಿದೆ ಎಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News