ತಾಲಿಬಾನ್ ಆಡಳಿತಕ್ಕೇರಿದ ಬಳಿಕ ಅಫ್ಘಾನ್ ನಲ್ಲಿ 100ಕ್ಕೂ ಅಧಿಕ ಕಾನೂನುಬಾಹಿರ ಹತ್ಯೆ: ವಿಶ್ವಸಂಸ್ಥೆ

Update: 2021-12-14 15:55 GMT

ಜಿನೇವಾ,ಡಿ.2: ಈ ವರ್ಷದ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರ ಹಿಡಿದ ಬಳಿಕ ಅಫ್ಘಾನಿಸ್ತಾನದಲ್ಲಿ  100ಕ್ಕೂ ಅಧಿಕ ಕಾನೂನುಬಾಹಿರ ಹತ್ಯೆಗಳು ನಡೆದಿರುವ ಬಗ್ಗೆ ವಿಶ್ವಸನೀಯವಾದ ಮಾಹಿತಿ ತನಗೆ ಲಭ್ಯವಾಗಿರುವುದಾಗಿ ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ. ಇವುಗಳಲ್ಲಿ ಬಹುತೇಕ ಹತ್ಯೆಗಳನ್ನು ತಾಲಿಬಾನ್ ನಡೆಸಿದೆಯೆಂದು ವಿಶ್ವಸಂಸ್ಥೆ ಆರೋಪಿಸಿದೆ.

ಆಗಸ್ಟ್ 15ರ ಬಳಿಕ ತಾಲಿಬಾನ್ ಆಡಳಿತಗಾರರು ಅಫ್ಘಾನ್ ಸೈನಿಕರು ಹಾಗೂ ಹಿಂದಿನ ಆಡಳಿತದಲ್ಲಿ ಸೇವೆ ಸಲ್ಲಿಸಿದವರಿಗೆ ಸಾರ್ವತ್ರಿಕ ಕ್ಷಮಾದಾನವನ್ನು ಘೋಷಿಸಿರುವ ಹೊರತಾಗಿಯೂ ಇಂತಹ ಹತ್ಯೆಗಳು ನಡೆಯುತ್ತಿರುವ ಬಗ್ಗೆ ನಿರಂತರವಾಗಿ ಬರುತ್ತಿರುವ ವರದಿಗಳಿಂದ ತಾನು ಕಳವಳಗೊಂಡಿರುವುದಾಗಿ ವಿಶ್ವಸಂಸ್ಥೆಯ ಮಾನವಹಕ್ಕುಗಳ ಉಪವರಿಷ್ಠೆ ನದಾ ಅಲ್ ನಶಾಫ್ ತಿಳಿಸಿದ್ದಾರೆ.
 
"ಈ ವರ್ಷದ ಆಗಸ್ಟ್ ಹಾಗೂ ನವೆಂಬರ್ ನಡುವೆ, ಅಫ್ಘಾನಿಸ್ತಾನದ ಮಾಜಿ ರಾಷ್ಟ್ರೀಯ ಭದ್ರತಾ ಪಡೆಗಳ ಯೋಧರು ಸೇರಿದಂತೆ ಮಾಜಿ ಸರಕಾರದ ಜೊತೆ ನಂಟು ಹೊಂದಿರುವ 100ಕ್ಕೂ ಅಧಿಕ ಮಂದಿಯ ಹತ್ಯೆಗಳು ನಡೆದಿರುವ ಬಗ್ಗೆ ವಿಶ್ವಸನೀಯ ದೂರುಗಳನ್ನು ವಿಶ್ವಸಂಸ್ಥೆ ಸ್ವೀಕರಿಸಿದೆ" ಎಂದು ನದಾ ಅಲ್-ನಶೀಫ್ ಅವರು ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಗೆ ತಿಳಿಸಿದರು.

 ಈ ರೀತಿಯ ಹತ್ಯೆಗಳಲ್ಲಿ ಕನಿಷ್ಠ 72ನ್ನು ತಾಲಿಬಾನ್ ನಡೆಸಿದೆಯೆಂದು ನದಾ ಆರೋಪಿಸಿದ್ದಾರೆ. "ಹಲವಾರು ಪ್ರಕರಣಗಳಲ್ಲಿ ಶವಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಿಸಲಾಗಿದೆ. ಇದರಿಂದಾಗಿ ಗಣನೀಯ ಪ್ರಮಾಣದ ಜನರಲ್ಲಿ ಭೀತಿಯು ಉಲ್ಬಣಗೊಂಡಿದೆ" ಎಂದು ಆಕೆ ತಿಳಿಸಿದರು.
 
ಅಫ್ಘಾನಿಸ್ತಾನದಲ್ಲಿ ಇತ್ತೀಚೆಗೆ ನಡೆದಿದೆಯೆನ್ನಲಾದ 47 ಕಾನೂನುಬಾಹಿರ ಹತ್ಯೆಗಳನ್ನು ದಾಖಲಿಸಿರುವ ಮಾನವಹಕ್ಕುಗಳ ವರದಿ ಪ್ರಕಟವಾದ ಬಳಿಕ ಅಮೆರಿಕ ಹಾಗೂ ಇತರ ದೇಶಗಳು ತಾಲಿಬಾನ್ ವಿರುದ್ಧ ತೀವ್ರ ಟೀಕಾಪ್ರಹಾರ ನಡೆಸಿದ್ದವು.
   
ಆಗಸ್ಟ್ ಮಧ್ಯದಿಂದ ಹಿಡಿದು ಅಕ್ಟೋಬರ್ ತಿಂಗಳವರೆಗಿನ ಅವಧಿಯಲ್ಲಿ ತಾಲಿಬಾನ್ ಪಡೆಗಳಿಗೆ ಶರಣಾಗತರಾದ ಅಥವಾ ಬಂಧಿತರಾದ ಅಫ್ಘಾನಿಸ್ತಾನದ ರಾಷ್ಟ್ರೀಯ ಭದ್ರತಾ ಪಡೆಗಳ ಮಾಜಿ ಸದಸ್ಯರು, ಇತರ ಸೇನಾ ಸಿಬ್ಬಂದಿ, ಪೊಲೀಸರು ಹಾಗೂ ಗುಪ್ತಚರ ಏಜೆಂಟರು ಹತ್ಯೆಯಾದವರಾಗಿದ್ದಾರೆಂದು ವರದಿ ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News