×
Ad

ಕ್ರೈಸ್ತರ ಮೇಲೆ ದಾಳಿ ಮಾಡುವ ಹಿಂದುತ್ವ ಗುಂಪುಗಳೊಂದಿಗೆ ಪೊಲೀಸರ ಶಾಮೀಲಾತಿ: ಪಿಯುಸಿಎಲ್ ಅಧ್ಯಯನ ವರದಿ

Update: 2021-12-14 21:34 IST
ಸಾಂದರ್ಭಿಕ ಚಿತ್ರ

ಕರ್ನಾಟಕದಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದ ಕ್ರೈಸ್ತರ ಮೇಲೆ ದಾಳಿ ಮಾಡಿದ ಹಿಂದುತ್ವ ಗುಂಪುಗಳೊಂದಿಗೆ ಪೊಲೀಸರು ಶಾಮೀಲಾಗಿದ್ದಾರೆ ಎಂಬುದಾಗಿ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಮಂಗಳವಾರ ಬಿಡುಗಡೆ ಮಾಡಿದ ವರದಿಯೊಂದು ಆರೋಪಿಸಿದೆ.

ಈ ವರ್ಷದ ಜನವರಿಯಿಂದ ನವೆಂಬರ್ ವರೆಗೆ ಕ್ರೈಸ್ತರ ವಿರುದ್ಧ ನಡೆದ 39 ಹಿಂಸಾಚಾರ ಪ್ರಕರಣಗಳನ್ನು ಪಿಯುಸಿಎಲ್ ಕರ್ನಾಟಕ ಘಟಕವು ತನ್ನ ವರದಿಯಲ್ಲಿ ದಾಖಲಿಸಿದೆ. ಹಿಂದುತ್ವ ಗುಂಪುಗಳು ದಾಳಿ ನಡೆಸಿರುವ ಪ್ರಾರ್ಥನಾ ಕೂಟಗಳಲ್ಲಿ ಭಾಗವಹಿಸಿದ ಪಾಸ್ಟರ್ಗಳ ಹೇಳಿಕೆಗಳೂ ಈ ವರದಿಯಲ್ಲಿವೆ. ಕ್ರೈಸ್ತರ ವಿರುದ್ಧದ ಹಲವು ಹಿಂಸಾಚಾರ ಪ್ರಕರಣಗಳು ವರದಿಯೇ ಆಗಿಲ್ಲ ಎಂದೂ ಅದು ತಿಳಿಸಿದೆ.

ಕರ್ನಾಟಕದಲ್ಲಿ ಪ್ರಾರ್ಥನೆಗಳನ್ನು ನಡೆಸುವ ಕ್ರೈಸ್ತರ ಮೇಲೆ ಹಿಂದುತ್ವ ಗುಂಪುಗಳ ನೇತೃತ್ವದಲ್ಲಿ ನಡೆಯುವ ಹಿಂಸಾತ್ಮಕ ದಾಳಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದಿದೆ.
"ಈ ದಾಳಿಗಳು ಮೇಲ್ನೋಟಕ್ಕೆ ಭೌಗೋಳಿಕವಾಗಿ ಚದುರಿ ಹೋದ ಘಟನೆಗಳು ಎಂಬಂತೆ ಕಂಡುಬಂದರೂ, ವಾಸ್ತವದಲ್ಲಿ ಅವುಗಳು ಕ್ರೈಸ್ತರನ್ನು ಎರಡನೇ ದರ್ಜೆಯ ನಾಗರಿಕರ ಮಟ್ಟಕ್ಕೆ ಇಳಿಸುವ ಸಂಘಟಿತ ದುಷ್ಟ ರಾಜಕೀಯ ಯೋಜನೆಯೊಂದರ ಭಾಗವಾಗಿದೆ. ಸಂವಿಧಾನವು ನೀಡಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಲು ಅವರಿಗೆ ಅವಕಾಶ ನೀಡಬಾರದುಎನ್ನುವುದು ಈ ಯೋಜನೆಯಉದ್ದೇಶವಾಗಿದೆ’’ ಎಂದು ವರದಿ ತಿಳಿಸಿದೆ.

ಮಂಡ್ಯದಲ್ಲಿ ಜನವರಿಯಲ್ಲಿ ನಡೆದ ಘಟನೆಯೊಂದನ್ನು ಅದು ಉದಾಹರಿಸಿದೆ. ಕ್ರೈಸ್ತರ ಗುಂಪೊಂದರ ಮೇಲೆ ಅವರ ಮನೆಯ ಸಮೀಪ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರೆನ್ನಲಾದ ಜನರು ದಾಳಿ ಮಾಡಿದ್ದರು. ದಾಳಿಕೋರರನ್ನು ಬಂಧಿಸುವ ಬದಲು ಪೊಲೀಸರು ದಾಳಿಗೊಳಗಾದ ಕೆಲವು ಕ್ರೈಸ್ತರನ್ನು ಬಂಧಿಸಿದರು ಎಂದು ಪಾಸ್ಟರ್ ಹರೀಶ್ ತನ್ನ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

"ದಾಳಿಯ ಬಳಿಕ ನಾನು ಇತರ ಹಲವರೊಂದಿಗೆ ಪೊಲೀಸ್ ಠಾಣೆಗೆ ಹೋದೆ. ದಾಳಿ ನಡೆಸಿದವರೂ ಅಲ್ಲಿದ್ದರು. ಅವರು ತಮ್ಮ ಮೇಲಿನ ದೌರ್ಜನ್ಯವನ್ನು ಪ್ರಶ್ನಿಸಿದ ಕೆಲವು ಮಹಿಳೆಯರನ್ನು ನಿಂದಿಸಿದರು ಹಾಗೂ ಬೆದರಿಸಿದರು’’ ಎಂದು ಪಾಸ್ಟರ್ ಹೇಳಿದರು.
ನಾನು ದಾಳಿಕೋರರ ವಿರುದ್ಧ ದೂರು ದಾಖಲಿಸಲು ಪ್ರಯತ್ನಿಸಿದೆ. ಆದರೆ ನನಗೆ ಅದಕ್ಕೆ ಅವಕಾಶ ಸಿಗಲಿಲ್ಲ. ಬದಲಿಗೆ ಓರ್ವ ಕ್ರೈಸ್ತ ಮಹಿಳೆಗೆ ಸೇರಿದ ಲ್ಯಾಪ್ ಟಾಪೊಂದನ್ನು ಪೊಲೀಸರು ವಶಪಡಿಸಿಕೊಂಡರು ಹಾಗೂ ಅದರಲ್ಲಿ ನಮ್ಮ ವಿರುದ್ಧವೇ ಪುರಾವೆಗಳನ್ನು ತುರುಕಿಸುವುದಾಗಿ ಬೆದರಿಸಿದರು ಎಂದು ಪಾಸ್ಟರ್ ಹರೀಶ್ ಆರೋಪಿಸಿದರು.

"ನಿಮ್ಮ ವಿರುದ್ಧ ಪುರಾವೆಯಿಲ್ಲದಿದ್ದರೂ ನಿಮ್ಮ ವಿರುದ್ಧದ ಪ್ರಕರಣವನ್ನು ಹೇಗೆ ಬಲಪಡಿಸಬೇಕೆನ್ನುವುದು ನಮಗೆ ಗೊತ್ತಿದೆ. ಕ್ರೈಸ್ತರು ಜೈಲಿನಿಂದ ಹೊರಗೆ ಬರದಂತೆ ನಾವು ಮಾಡುತ್ತೇವೆ ಎಂದು ಪೊಲೀಸ್ ಇನ್ಸ್ಪೆಕ್ಟರ್ಬ್ಬೊರು ಹೇಳಿದರು’’ ಎಂದು ಪಾಸ್ಟರ್ ತಿಳಿಸಿದರು.

ಇನ್ನೊಂದು ಘಟನೆ ಸೆಪ್ಟಂಬರ್ನಲ್ಲಿ ಉಡುಪಿಯಲ್ಲಿ ನಡೆಯಿತು. ಪ್ರಾರ್ಥನಾ ಕೂಟವೊಂದರ ಮೇಲೆ ದಾಳಿ ನಡೆಸಿದ ಗುಂಪೊಂದರ ವಿರುದ್ಧ ಮೊಕದ್ದಮೆ ದಾಖಲಿಸಿರುವುದಕ್ಕೆ ಸಂಬಂಧಿಸಿದ ಸ್ವೀಕೃತಿಯನ್ನು ದೂರುದಾರರಿಗೆ ನೀಡಲು ಪೊಲೀಸರು ನಿರಾಕರಿಸಿದರು.

ಪ್ರಾರ್ಥನಾ ಕೂಟ ಆರಂಭವಾಗಿ 15 ನಿಮಿಷಗಳು ಆದಾಗ ಸುಮಾರು 30 ಜನರಿದ್ದ ಗುಂಪು ಅಲ್ಲಿಗೆ ನುಗ್ಗಿ ಪ್ರಾರ್ಥನೆ ನಡೆಸುತ್ತಿದ್ದವರನ್ನು ಬಡಿಯಲು ಆರಂಭಿಸಿತು ಎಂದು ಅಂದು ಪ್ರಾರ್ಥನಾಕೂಟ ನೆರವೇರಿಸಿದ ಪಾಸ್ಟರ್ ವಿನಯ್ ಹೇಳಿದರು.

"ಹಿಂಸಾಚಾರದಿಂದ ನಮ್ಮ ಹೆಚ್ಚಿನ ಭಕ್ತರಿಗೆ ಗಾಯವಾಗಿದೆ. ಓರ್ವ ಮಹಿಳೆಯರ ರವಿಕೆ ಸೇರಿದಂತೆ ಇಬ್ಬರ ಬಟ್ಟೆಗಳು ಹರಿದಿವೆ’’ ಎಂದು ಪಾಸ್ಟರ್ ಹೇಳಿದರು. ಘಟನೆ ನಡೆದ ಸ್ವಲ್ಪ ಹೊತ್ತಿನ ಬಳಿಕ ಪ್ರಾರ್ಥನಾ ಮಂದಿರವನ್ನು ಪ್ರವೇಶಿಸಿದ ಪೊಲೀಸರು, ಗಣೇಶ ಚತುರ್ಥಿಯ ದಿನದಂದು ನೀವು ಯಾಕೆ ಪ್ರಾರ್ಥನೆ ಮಾಡುತ್ತಿದ್ದೀರಿ ಎಂದು ಅಲ್ಲಿ ಪ್ರಾರ್ಥನೆಗಾಗಿ ನೆರೆದವರನ್ನು ಪ್ರಶ್ನಿಸಿದರು. "ನಾನು ಅವರಿಗೆ ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸಿದೆ. ನಾವು 10 ವರ್ಷಗಳಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದ ಮಂದಿರವು ದಿಢೀರನೆ ನಮಗೆ ಅಲಭ್ಯವಾಗಿದೆ. ಅದೂ ಅಲ್ಲದೆ ವಾರಾಂತ್ಯದ ಕರ್ಫ್ಯೂ ಇರುವುದರಿಂದ ನಮಗೆ ರವಿವಾರ ಪ್ರಾರ್ಥನೆ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ನಾನು ವಿವರಿಸಿದೆ’’ ಎಂದು ಪಾಸ್ಟರ್ ಹೇಳಿರುವುದಾಗಿ ವರದಿ ತಿಳಿಸಿದೆ.

"ದಾಳಿಕೋರರ ವಿರುದ್ಧ ದೂರು ಸಲ್ಲಿಸಲು ನಾನು ಪೊಲೀಸ್‌ ಠಾಣೆಗೆ ಹೋದಾಗ, ನನ್ನ ವಿರುದ್ಧವೇ ಒಂದು ಎಫ್ಐಆರ್ ದಾಖಲಾಗಿರುವುದು ನನಗೆ ತಿಳಿಯಿತು’’ ಎಂದು ಪಾಸ್ಟರ್ ಹೇಳಿದರು. ನಾವು ನಿಮಗೆ ರಕ್ಷಣೆ ನೀಡಲು ಸಾಧ್ಯವಿಲ್ಲ ಎಂಬುದಾಗಿ ಪೊಲೀಸರು ಕ್ರೈಸ್ತರಿಗೆ ಹೇಳಿದರು. "ಇಲ್ಲಿ ಕಾನೂನು ಮತ್ತು ವ್ಯವಸ್ಥೆ ಸಮಸ್ಯೆಯುಂಟಾಗುತ್ತದೆ. ಹಾಗಾಗಿ, ನಾವು ಪ್ರಾರ್ಥನಾ ಕೂಟಗಳನ್ನು ನಡೆಸದಿದ್ದರೆಉತ್ತಮಎಂಬುದಾಗಿಓರ್ವ ಪೊಲೀಸ್ ಹೇಳಿದರು’’ ಎಂದರು. 

ಘಟನೆ ನಡೆದ ಎರಡು ವಾರಗಳ ಬಳಿಕ, ಪ್ರಾರ್ಥನಾ ಕೂಟಗಳನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು ಎಂಬ ಮಾಹಿತಿಯನ್ನೂ ಅವರು ನೀಡಿದರು. ಕರ್ನಾಟಕದಲ್ಲಿ ಕ್ರೈಸ್ತರ ವಿರುದ್ಧ ನಡೆದ ಹಿಂಸಾಚಾರದ ಘಟನೆಗಳನ್ನು ಅಧ್ಯಯನ ನಡೆಸಿದ ಬಳಿಕ ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ಪುಂಡ ಗುಂಪುಗಳು ಹೇಗೆ ಕೆಲಸ ಮಾಡುತ್ತವೆ‌ ಎನ್ನುವುದನ್ನು ವಿವರಿಸಿದೆ.

ಮೊದಲು, ಹಿಂದುತ್ವ ಗುಂಪುಗಳ ನಾಯಕರು ದಾಳಿ ನಡೆಸುವುದಕ್ಕಾಗಿ ಗುಂಪೊಂದನ್ನು ರಚಿಸುತ್ತಾರೆ ಹಾಗೂ ತಮ್ಮ ಪ್ರದೇಶಗಳಲ್ಲಿ ರವಿವಾರ ಪ್ರಾರ್ಥನೆ ನಡೆಯುವ ಸ್ಥಳಗಳನ್ನು ಗುರುತಿಸುತ್ತಾರೆ. ಬಳಿಕ ಈ ಗುಂಪು ತಾವು ನಡೆಸುವ ದಾಳಿಯ ಬಗ್ಗೆ ಸ್ಥಳೀಯ ಪೊಲೀಸ್‌ ಠಾಣೆಗೆ ಮಾಹಿತಿ ನೀಡುತ್ತದೆ.

ಬಳಿಕ, 25ರಿಂದ 30 ಜನರಿರುವ ಗುಂಪು ಪ್ರಾರ್ಥನಾ ಸ್ಥಳಕ್ಕೆ ನುಗ್ಗಿ, ಪಾಸ್ಟರ್ಗಳು ಹಿಂದೂಗಳನ್ನು ಕ್ರೈಸ್ತಧರ್ಮಕ್ಕೆ ಮತಾಂತರಗೊಳಿಸುತ್ತಿದ್ದಾರೆ ಎಂದು ಆರೋಪಿಸುತ್ತದೆ. ದುಷ್ಕರ್ಮಿಗಳು ಪ್ರಾರ್ಥನೆಯಲ್ಲಿ ತೊಡಗಿದ್ದವರ ಜಾತಿನಿಂದನೆಗೈಯುತ್ತಾರೆ ಹಾಗೂ ಅವರನ್ನು ರಾಡ್ ಮತ್ತು ಕೋಲುಗಳಿಂದ ಬಡಿಯುತ್ತಾರೆ. ಮಹಿಳೆಯರ ಮೇಲೆ "ದೈಹಿಕವಾಗಿ, ಮಾತುಗಳಿಂದ ಮತ್ತು ಲೈಂಗಿಕವಾಗಿ’’ ದಾಳಿ ನಡೆಸಲಾಗುತ್ತದೆ.

ಸ್ವಲ್ಪವೇ ಹೊತ್ತಿನ ಬಳಿಕ, ದಾಳಿ ನಡೆದ ಸ್ಥಳಕ್ಕೆ ಪೊಲೀಸರು ಪ್ರವೇಶ ಮಾಡುತ್ತಾರೆ. ಅವರು ಅಲ್ಲಿ ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ನಿಂದಿಸುತ್ತಾರೆ ಹಾಗೂ ತಮ್ಮ ಗುರುತು ಚೀಟಿಗಳನ್ನು ನೀಡುವಂತೆ ಅವರು ಪ್ರಾರ್ಥನಾರ್ಥಿಗಳನ್ನು ಹಿಂಸಾತ್ಮಕ ಬಲವಂತಕ್ಕೆ ಗುರಿಪಡಿಸುತ್ತಾರೆ.

ಹೆಚ್ಚಿನ ಪ್ರಕರಣಗಳಲ್ಲಿ, ಪೊಲೀಸರು ಪುಂಡರು ಪ್ರವೇಶಿಸಿದ ಕೆಲವೇ ನಿಮಿಷಗಳ ಬಳಿಕ ಪ್ರಾರ್ಥನಾ ಹಾಲ್ಗಳನ್ನು ಪ್ರವೇಶಿಸುತ್ತಾರೆ ಎಂದು ದಾಳಿಗೊಳಗಾದವರು ಹೇಳುತ್ತಾರೆ. "ಹಾಗಾಗಿ, ದಾಳಿಗಳು ನಡೆಯುತ್ತವೆ ಎನ್ನುವುದು ಪೊಲೀಸರಿಗೆ ಮೊದಲೇ ಗೊತ್ತಿರುತ್ತದೆ ಹಾಗೂ ಪೊಲೀಸರು ಕ್ರೈಸ್ತರ ವಿರುದ್ಧ ಸಮರ ನಡೆಸುತ್ತಿರುವ ಗುಂಪುಗಳಿಗೆ ಬೆಂಬಲ ನೀಡುತ್ತಾರೆ ಎಂಬ ತೀರ್ಮಾನಕ್ಕೆ ಕ್ರೈಸ್ತರು ಬಂದಿದ್ದಾರೆ’’ ಎಂದು ಪಿಯುಸಿಎಲ್ ವರದಿ ಹೇಳುತ್ತದೆ.

ಪೊಲೀಸರು ದಾಳಿಕೋರರನ್ನು ಬಂಧಿಸುವ ಬದಲು ಪಾಸ್ಟರ್ಗಳು ಮತ್ತು ಪ್ರಾರ್ಥನೆ ಮಾಡುವವರನ್ನು ಬಂಧಿಸುತ್ತಾರೆ ಹಾಗೂ ಅವರ ವಿರುದ್ಧ ಭಾರತೀಯ ನೀತಿ ಸಂಹಿತೆಯ 295ಎ (ಒಂದು ಸಮುದಾಯದಜನರಧರ್ಮ ಮತ್ತುಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಆ ಸಮುದಾಯದಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಉದ್ದೇಶಪೂರ್ವಕ ಹಾಗೂ ದುರುದ್ದೇಶದ ಕೃತ್ಯಗಳನ್ನು ಮಾಡುವುದು).

ಜಾತಿವಾದಿ ನಿಂದನೆಗಳು:

ಕ್ರೈಸ್ತರ ಪಾರ್ಥನಾಕೂಟಗಳ ಮೇಲೆ ನಡೆಯುವ ದಾಳಿ ಘಟನೆಗಳಲ್ಲಿ ಸಮಾನ ಅಂಶವೊಂದನ್ನು ಪಿಯುಸಿಎಲ್ ಕಂಡುಕೊಂಡಿದೆ. ಅದೆಂದರೆ ಜಾತೀವಾದಿ ನಿಂದನೆಗಳು.
"ಗ್ರಾಮೀಣ ಭಾರತದ ಕ್ರೈಸ್ತರಲ್ಲಿ ಹೆಚ್ಚಿನವರು ದಿನಗೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು ಮತ್ತು ದಲಿತ ಸಮುದಾಯಗಳ ಜನರು. ಹಾಗಾಗಿ, ಈ ಜಾತಿವಾದಿ ನಿಂದನೆಗಳನ್ನು ಈ ಹಿನ್ನೆಲೆಯಲ್ಲಿ ಗಣನೆಗೆ ತೆಗೆದುಕೊಳ್ಳಬೇಕಾಗಿದೆ’’ ಎಂದು ವರದಿ ಹೇಳುತ್ತದೆ.

ಪುಂಡ ಗುಂಪುಗಳು ಚರ್ಚ್ ಗಳ ಮೇಲೆ ದಾಳಿ ನಡೆಸಿದಾಗ ಅವರು ಮಾಡುವ ಮೊದಲ ಕೆಲಸವೆಂದರೆ, ’ನೀವು ಯಾವ ಜಾತಿಯಲ್ಲಿ ಹುಟ್ಟಿದವರು ಮತ್ತು ನಿಮ್ಮಕುಟುಂಬದ ಹೆಸರೇನು’ ಎಂಬ ಪ್ರಶ್ನೆಯನ್ನು ಅಲ್ಲಿ ಪ್ರಾರ್ಥನೆ ಮಾಡುತ್ತಿದ್ದವರನ್ನು ಕೇಳುವುದು ಎನ್ನುವುದರತ್ತ ವರದಿ ಬೆಟ್ಟು ಮಾಡಿದೆ.

"ಬಳಿಕ ಅವರು ಪಾಸ್ಟರ್ ಮತ್ತು ಭಕ್ತರನ್ನು ನಿಂದನಾತ್ಮಕ ಮಾತುಗಳ ಮೂಲಕ ಅವಮಾನಿಸುತ್ತಾರೆ. ನಿರ್ದಿಷ್ಟ ಜಾತಿಗಳನ್ನು ಅವಮಾನಿಸುವ ಪದಗಳನ್ನು ಧಾರಾಳವಾಗಿ ಹೇಳುತ್ತಾರೆ’’.

ಕರ್ನಾಟಕದ ಗ್ರಾಮೀಣ ಮತ್ತು ಅರೆ ಗ್ರಾಮೀಣ ಪ್ರದೇಶಗಳ ಕ್ರೈಸ್ತರು ಬಡ ಮತ್ತು ಕೆಳ ಜಾತಿಗಳ ಸಮುದಾಯಗಳಿಗೆ ಸೇರಿದವರು ಎಂದು ವರದಿ ಹೇಳುತ್ತದೆ. "ರವಿವಾರಗಳಂದು ಬೆಳಗ್ಗೆ ನಡೆಯುವ ಪ್ರಾರ್ಥನಾ ಕೂಟಗಳು ಅವರಿಗೆ ಅತ್ಯಂತ ಮಹತ್ವದ್ದಾಗಿವೆ. ಅದು ಅವರಲ್ಲಿ ಮಾನಸಿಕ ಧೈರ್ಯ ಮತ್ತು ಒಂದು ಗುಂಪಿಗೆ ಸೇರಿದ ಭಾವನೆಯನ್ನು ಹುಟ್ಟು ಹಾಕುತ್ತದೆ’’.

ಈ ಪ್ರಾರ್ಥನಾ ಕೂಟಗಳನ್ನು ನಿಲ್ಲಿಸುವ ಬೆದರಿಕೆಯನ್ನು ಹಿಂದುತ್ವ ಗುಂಪುಗಳು ಹಾಕಿರುವುದು, ಇಡೀ ಸಮುದಾಯವೊಂದರ ಘನತೆಯ ಹಕ್ಕು ಮತ್ತು ಬದುಕುವ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಸಮವಾಗಿದೆ ಎಂದು ಪಿಯುಸಿಎಲ್ ಆರೋಪಿಸಿದೆ.

ಸಾಮೂಹಿಕ ಮತಾಂತರ ಆರೋಪದಲ್ಲಿ ಹುರುಳಿಲ್ಲ

ಕ್ರೈಸ್ತರು ಬಲವಂತದ ಸಾಮೂಹಿಕ ಮತಾಂತರದಲ್ಲಿತೊಡಗಿದ್ದಾರೆ ಎಂಬ ಆರೋಪಗಳನ್ನು ತಳ್ಲಿ ಹಾಕಿರುವ ವರದಿಯು, ಭಾರತದ ಜನಸಂಖ್ಯೆಯಲ್ಲಿ ಕ್ರೈಸ್ತ ಸಮುದಾಯದ ಪ್ರಮಾಣವನ್ನು ಉಲ್ಲೇಖಿಸಿದೆ.
 
1971ರ ಜನಗಣತಿಯ ಪ್ರಕಾರ, ಭಾರತೀಯ ಜನಸಂಖ್ಯೆಯಲ್ಲಿ ಕ್ರೈಸ್ತರ ಪ್ರಮಾಣ 2.60% ಆಗಿತ್ತು ಎಂದು ವರದಿ ಹೇಳುತ್ತದೆ. "1981ರ ಜನಗಣತಿಯಲ್ಲಿ ಕ್ರೈಸ್ತರ ಪ್ರಮಾಣ 2.44% ಆಗಿತ್ತು, 1991ರ ಜನಗಣತಿಯಲ್ಲಿ ಈ ಪ್ರಮಾಣ 2.33%ಕ್ಕೆ ಇಳಿಯಿತು. 2001ರಲ್ಲಿ ಅದು 2.30% ಆಗಿದ್ದರೆ, 2011ರಲ್ಲಿ ಅದು 2.30% ಆಗಿದೆ. "ಹಾಗಾಗಿ, ಲಭ್ಯವಿರುವ ಅಂಕಿ ಸಂಖ್ಯೆಗಳು ಕ್ರೈಸ್ತರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದನ್ನು ಸೂಚಿಸುತ್ತಿಲ್ಲ’’ ಎಂದು ವರದಿ ಹೇಳುತ್ತದೆ.
 
"ಜನಸಂಖ್ಯೆ ಹೆಚ್ಚಿರುವುದನ್ನು ತೋರಿಸುವ ಯಾವುದೇ ಪುರಾವೆಯ ಅನುಪಸ್ಥಿತಿಯಲ್ಲಿ, ಬಲವಂತದ ಸಾಮೂಹಿಕ ಮತಾಂತರ ಆಗುತ್ತಿದೆ ಎನ್ನುವುದಕ್ಕೆ ಯಾವುದೇ ಆಧಾರವಿಲ್ಲ. ಬಲವಂತದ ಸಾಮೂಹಿಕ ಮತಾಂತರ ಎನ್ನುವುದು ಸುಳ್ಳು ಎನ್ನುವುದನ್ನು ಈ ಅಂಕಿಸಂಖ್ಯೆಗಳು ಸ್ಪಷ್ಟವಾಗಿ ತೋರಿಸುತ್ತವೆ. ಕ್ರೈಸ್ತರು ತಮ್ಮ ಧರ್ಮವನ್ನು ಅನುಸರಿಸುವುದನ್ನು ಅಪರಾಧ ಎಂಬಂತೆ ಬಿಂಬಿಸಲು ಈ ಆರೋಪವನ್ನು ಮಾಡಲಾಗುತ್ತಿದೆ’’ ಎಂದು ಪಿಯುಸಿಎಲ್ ನ ವರದಿ ಹೇಳುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News