ʼಆಗ್ರಾದಿಂದ ಪ್ರಯಾಗರಾಜ್‌ ವರೆಗೆʼ: ಕೋವಿಡ್ ಕಾಲದ ಉದ್ಯಮ ಸಂಕಷ್ಟಗಳನ್ನು ತೆರೆದಿಡುತ್ತಿರುವ ಆತ್ಮಹತ್ಯಾ ಹೆಚ್ಚಳ

Update: 2021-12-15 13:40 GMT

ಲಕ್ನೋ,ಡಿ.14: ಕೋವಿಡ್ ಲಾಕ್‌ಡೌನ್‌ಗಳಿಂದಾಗಿ ಆತ್ಮಹತ್ಯೆ ಘಟನೆಗಳು ಹೆಚ್ಚುತ್ತಿವೆ. ಉತ್ತರ ಪ್ರದೇಶದ ಸಣ್ಣ ಪಟ್ಟಣಗಳು ಪ್ರತಿ ದಿನ ಆತಂಕದೊಂದಿಗೇ ಎದ್ದೇಳುತ್ತಿವೆ ಎಂದು Theprint.in ವರದಿ ಮಾಡಿದೆ.

ಡಿ.3ರಂದು ಆಗ್ರಾದ ಉದ್ಯಮಿ ಯೋಗೇಶ ಮಿಶ್ರಾ (46) ಅವರು ಪತ್ನಿ ಪ್ರತೀಚಿ (43) ಮತ್ತು ಪುತ್ರಿ ಕಾವ್ಯಾ (5) ಜೊತೆ ತನ್ನ ಕಚೇರಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದರು. ಈ ಘೋರ ಸಾಮೂಹಿಕ ಆತ್ಮಹತ್ಯೆ ಇಡೀ ಆಗ್ರಾ ನಗರವನ್ನೇ ನಡುಗಿಸಿತ್ತು. ಅಂದು ಅಜ್ಜಿಯೊಂದಿಗೆ ಮಲಗಿದ್ದ 11ರ ಹರೆಯದ ಪುತ್ರಿ ಮಾತ್ರ ಬದುಕುಳಿದಿದ್ದಾಳೆ. "ಸಾಮೂಹಿಕ ಆತ್ಮಹತ್ಯೆಗೆ ನಾವೇ ಹೊಣೆಗಾರರು" ಎಂದು ಮಿಶ್ರಾ ಬರೆದಿಟ್ಟಿದ್ದ ಪತ್ರವು ಸ್ಥಳದಲ್ಲಿ ಪತ್ತೆಯಾಗಿತ್ತು.

ಕಳೆದ ಎರಡೂವರೆ ದಶಕಗಳಿಂದ ಆಗ್ರಾದಲ್ಲಿ ವಾಸವಿದ್ದ ಮೂಲತಃ ಇಟಾವಾ ಜಿಲ್ಲೆಯವರಾಗಿದ್ದ ಮಿಶ್ರಾ ಮಧ್ಯಮ ಪ್ರಮಾಣದ ಉದ್ಯಮವನ್ನು ನಡೆಸುತ್ತಿದ್ದರು.
ಹಣಕಾಸು ಮುಗ್ಗಟ್ಟಿತ್ತು ನಿಜ,ಆದರೆ ಅವರೆಂದೂ ನಮ್ಮಿಂದಿಗೆ ಆ ಬಗ್ಗೆ ಚರ್ಚಿಸಿರಲಿಲ್ಲ ಎಂದು ಮಿಶ್ರಾರ ಹಿರಿಯ ಸೋದರ ವಿಶಾಲ ಮಿಶ್ರಾ ತಿಳಿಸಿದರು.
 
ನಾವಿನ್ನೂ ತನಿಖೆಯನ್ನು ನಡೆಸುತ್ತಿದ್ದೇವೆ,ಆದರೆ ಹಣಕಾಸು ತೊಂದರೆ ಸಾಮೂಹಿಕ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ.
 
ಕೋವಿಡ್ ಸಾಂಕ್ರಾಮಿಕವು ಪ್ರತಿಯೊಬ್ಬರನ್ನೂ ಸಂಕಷ್ಟಕ್ಕೆ ತಳ್ಳಿದೆ. ಸಣ್ಣ ಅಥವಾ ದೊಡ್ಡ ಉದ್ಯಮವಾಗಲಿ,ನಷ್ಟದಿಂದ ಯಾರೂ ಪಾರಾಗಿಲ್ಲ. ಸರಕಾರವೂ ನೆರವಾಗುತ್ತಿಲ್ಲ ಎಂದು ಆಗ್ರಾ ಟೂರಿಸಂ ವೆಲ್ಫೇರ್ ಚೇಂಬರ್‌ನ ಅಧ್ಯಕ್ಷ ಪಿ.ಕೆ.ಅಗರವಾಲ್ ಹೇಳಿದರು. 2020ರಲ್ಲಿ ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕವು ಬಿಡುಗಡೆಗೊಳಿಸಿದ್ದ ಅಂಕಿಅಂಶಗಳಂತೆ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತದಲ್ಲಿ 11,716 ಉದ್ಯಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು.

ವಾರಣಾಸಿ ಮತ್ತು ಪ್ರಯಾಗರಾಜ್ ಧಾರ್ಮಿಕ ನಗರಗಳಾಗಿವೆ. ಕೋವಿಡ್‌ನಿಂದಾಗಿ ಪ್ರವಾಸೋದ್ಯಮವು ನೆಲ ಕಚ್ಚಿದ್ದು, ಹಲವಾರು ತಿಂಗಳುಗಳ ಕಾಲ ಹೆಚ್ಚಿನ ಹೋಟೆಲ್ ಗಳು ಮುಚ್ಚಿದ್ದವು ಎಂದು ಸಿವಿಲ್ ಉದ್ಯೋಗ ವ್ಯಾಪಾರ ಮಂಡಲ್ ನ ಅಧ್ಯಕ್ಷ ನೀರಜ ಜೈಸ್ವಾಲ್ ಹೇಳಿದರು.

ಅಂತರರಾಷ್ಟ್ರೀಯ ಪ್ರವಾಸೋದ್ಯಮದ ಮೇಲಿನ ನಿರ್ಬಂಧದಿಂದಾಗಿ ಆಗ್ರಾದಂತಹ ನಗರಗಳು ಸಂಕಷ್ಟಕ್ಕೀಡಾಗಿವೆ. ನಿರ್ದಿಷ್ಟ ವ್ಯವಹಾರವನ್ನು ನಡೆಸುತ್ತಿರುವರು ನಷ್ಟವನ್ನು ಅನುಭವಿಸುತ್ತಿದ್ದರೂ ರಾತ್ರಿ ಬೆಳಗಾಗುವುದರಲ್ಲಿ ಅದನ್ನು ಬದಲಿಸಲು ಸಾಧ್ಯವಿಲ್ಲ. ಸರಕಾರವು ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಅವಕಾಶ ನೀಡುವುದನ್ನು ನಾವು ಕಳೆದೆರಡು ವರ್ಷಗಳಿಂದಲೂ ಕಾಯುತ್ತಿದ್ದೇವೆ. ಆಗ್ರಾದಲ್ಲಿ ದೇಶಿಯ ಪ್ರವಾಸಿಗಳನ್ನು ನಂಬಿಕೊಂಡು ಯಾವುದೇ ವ್ಯವಹಾರ ನಡೆಸಲು ಸಾಧ್ಯವಿಲ್ಲ. ನಾವು ಜಿಎಸ್‌ಟಿ ಪಾವತಿಸುತ್ತಿದ್ದೇವೆ ಮತ್ತು ಪ್ರವಾಸೋದ್ಯಮವು ದೇಶದ ಜಿಡಿಪಿಗೆ ಪಾಲು ಸಲ್ಲಿಸುತ್ತಿದ್ದರೂ ಸರಕಾರವು ನಮಗೆ ಯಾವುದೇ ಪರಿಹಾರವನ್ನು ಒದಗಿಸಿಲ್ಲ ಎಂದು ಆಗ್ರಾ ಟೂರಿಸಂ ವೆಲ್ಫೇರ್ ಚೇಂಬರ್ ನ ಕಾರ್ಯದರ್ಶಿ ಅನೂಪ್ ಗೋಯಲ್ ತಿಳಿಸಿದರು.

ನರೇಂದ್ರ ಮೋದಿ ಸರಕಾರವು ಲಾಕ್‌ಡೌನ್‌ಗಳನ್ನು ಸಡಿಲಿಸಿದಾಗಿನಿಂದಲೂ ಪ್ರಯಾಗರಾಜ್‌ನಲ್ಲಿಯ ದೈನಿಕಗಳು ಪ್ರತಿದಿನವೂ ಆತ್ಮಹತ್ಯೆಗಳನ್ನು ವರದಿ ಮಾಡುತ್ತಿವೆ. ಈ ವರ್ಷ ಆತ್ಮಹತ್ಯೆಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಹಣಕಾಸು ಮುಗ್ಗಟ್ಟು,ಸಾಲಬಾಧೆ,ಕೌಟುಂಬಿಕ ಸಮಸ್ಯೆಗಳು ಇತ್ಯಾದಿಗಳು ಆತ್ಮಹತ್ಯೆಗಳಿಗೆ ಪ್ರಮುಖ ಕಾರಣಗಳಾಗಿವೆ. ಎರಡು ಸತತ ಲಾಕ್‌ಡೌನ್‌ಗಳ ಸಂದರ್ಭ ಪತಿ-ಪತ್ನಿಯರ ನಡುವಿನ ಭಿನಾಭಿಪ್ರಾಯಗಳು ತಾರಕಕ್ಕೇರಿದ್ದವು ಎನ್ನುತ್ತಾರೆ ಮನಃಶಾಸ್ತ್ರಜ್ಞ ಡಾ.ರಾಕೇಶ ಪಾಸ್ವಾನ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News