×
Ad

ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ ಸಿರಿಯಾ ಯೋಧ ಮೃತ್ಯು

Update: 2021-12-17 00:01 IST

ದಮಾಸ್ಕಸ್, ಡಿ.16: ದಕ್ಷಿಣ ಸಿರಿಯಾ ಪ್ರದೇಶದಲ್ಲಿ ಇಸ್ರೇಲ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಸಿರಿಯಾದ ಓರ್ವ ಯೋಧ ಮೃತಪಟ್ಟಿರುವುದಾಗಿ ಸಿರಿಯಾ ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಸನಾ ವರದಿ ಮಾಡಿದೆ.

ಬುಧವಾರ ತಡರಾತ್ರಿ ಆಕ್ರಮಿತ ಗೋಲಾನ್ ಪ್ರದೇಶ ಹಾಗೂ ಸಿರಿಯಾದ ದಕ್ಷಿಣ ಪ್ರದೇಶವನ್ನು ಗುರಿಯಾಗಿಸಿಕೊಂಡು ಇಸ್ರೇಲ್ ಸೇನೆ ವಾಯುದಾಳಿ ನಡೆಸಿದೆ. ಈ ದಾಳಿಯ ಸಂದರ್ಭ ಬಹುತೇಕ ಕ್ಷಿಪಣಿಗಳನ್ನು ಸಿರಿಯಾದ ವಾಯುರಕ್ಷಣೆ ವ್ಯವಸ್ಥೆ ಧ್ವಂಸಗೊಳಿಸಿದೆ. ಆದರೆ ಒಂದು ಕ್ಷಿಪಣಿ ಬಡಿದು ಸಿರಿಯಾದ ಯೋಧ ಮೃತಪಟ್ಟಿದ್ದು ವ್ಯಾಪಕ ಹಾನಿಯಾಗಿದೆ ಎಂದು ಸಿರಿಯಾದ ರಕ್ಷಣಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.

2011ರಲ್ಲಿ ಸಿರಿಯಾದಲ್ಲಿ ಯುದ್ಧ ಸ್ಫೋಟಗೊಂಡಂದಿನಿಂದ ಇಸ್ರೇಲ್ ಸಿರಿಯಾವನ್ನು ಗುರಿಯಾಗಿಸಿಕೊಂಡು ಹಲವು ಕ್ಷಿಪಣಿ ದಾಳಿ ನಡೆಸಿದೆ. ಈ ತಿಂಗಳ ಆರಂಭದಲ್ಲಿ ಇಸ್ರೇಲ್‌ನ ಯುದ್ಧವಿಮಾನ ಪ್ರಯೋಗಿಸಿದ ಕ್ಷಿಪಣಿ ಲಟಾಕಿಯಾ ಬಂದರಿಗೆ ಅಪ್ಪಳಿಸಿ ಹಲವು ಕಂಟೈನರ್‌ಗಳಿಗೆ ಹಾನಿಯಾಗಿತ್ತು. ಆದರೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಸಿರಿಯಾದ ಸೇನೆ ಹೇಳಿದೆ. 

ನವೆಂಬರ್‌ನಲ್ಲಿ ಹೊಮೋಸ್ ಪ್ರಾಂತದ ಪಶ್ಚಿಮ ಪ್ರದೇಶದ ಮೇಲೆ ಇಸ್ರೇಲ್ ವಾಯುಸೇನೆ ನಡೆಸಿದ್ದ ಕ್ಷಿಪಣಿ ದಾಳಿಯಲ್ಲಿ 5 ನಾಗರಿಕರು ಮೃತಪಟ್ಟಿದ್ದರು. ಅಕ್ಟೋಬರ್‌ನಲ್ಲಿ ನಡೆದ 2 ಪ್ರತ್ಯೇಕ ಪ್ರಕರಣಗಳಲ್ಲಿ ಇರಾನ್ ಪರ ಹೋರಾಟಗಾರರ ಪಡೆಯ 5 ಮಂದಿ ಮೃತಪಟ್ಟಿದ್ದರು. ಮತ್ತೊಂದು ಪ್ರಕರಣದಲ್ಲಿ ಸರಕಾರಿ ಪರವಾಗಿರುವ 9 ಯೋಧರು ಮೃತಪಟ್ಟಿದ್ದಾೆ ಎಂದು ಸಿರಿಯಾದ ಸೇನೆ ಹೇಳಿದೆ.

ಇರಾನ್ ಬೆಂಬಲಿತ ಸಶಸ್ತ್ರ ಹೋರಾಟಗಾರರನ್ನು ಗುರಿಯಾಗಿಸಿ ವಾಯುದಾಳಿ ನಡೆಸುತ್ತಿದ್ದು ಈ ದಾಳಿ ಮುಂದುರಿಯಲಿದೆ ಎಂದು ಇಸ್ರೇಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News