ಮಹಿಳಾವಾದಿ ಲೇಖಕಿ ಬೆಲ್ ಹೂಕ್ಸ್ ನಿಧನ

Update: 2021-12-16 18:44 GMT
Twitter.com/@ghostpoet

ವಾಷಿಂಗ್ಟನ್, ಡಿ.16: ಖ್ಯಾತ ಮಹಿಳಾವಾದಿ ಲೇಖಕಿ ಹಾಗೂ ಕಾರ್ಯಕರ್ತೆ ಬೆಲ್ ಹೂಕ್ಸ್ ಅಮೆರಿಕದ ಕೆಂಟುಕಿಯಲ್ಲಿರುವ ತಮ್ಮ ಮನೆಯಲ್ಲಿ ಗುರುವಾರ ನಿಧನರಾದರು. 69 ವರ್ಷದ ಬೆಲ್ ಹೂಕ್ಸ್ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ಅವರ ಸಹೋದರಿಯನ್ನು ಉಲ್ಲೇಖಿಸಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. 

ಕೆಂಟುಕಿಯ ಹಾಪ್‌ಕಿನ್ಸ್‌ ವ್ಯಾಲೆ ನಗರದಲ್ಲಿ 1952ರಲ್ಲಿ ಜನಿಸಿದ ಹೂಕ್ಸ್ ಅವರ ಮೂಲಹೆಸರು ಗ್ಲೋರಿಯಾ ಜೀನ್ ವಾಟ್ಕಿನ್ ಎಂದಾಗಿತ್ತು. ಆದರೆ ತನ್ನ ತಾಯಿಯ ಮುತ್ತಜ್ಜಿಯ ಗೌರವಾರ್ಥ ಬೆಲ್ ಹೂಕ್ಸ್ ಎಂಬ ಕಾವ್ಯನಾಮವನ್ನು ಇರಿಸಿಕೊಂಡರು. 1970ರಿಂದ ಬರವಣಿಗೆ ಆರಂಭಿಸಿದ ಹೂಕ್ಸ್ ‘ಬ್ಲ್ಯಾಕ್ ವುಮೆನ್ ಆ್ಯಂಡ್ ಫೆಮಿನಿಸಮ್, ಫೆಮಿನಿಸ್ಟ್ ಥಿಯರಿ:ಫ್ರಂ ಮಾರ್ಜಿನ್ ಟು ಸೆಂಟರ್, ಆಲ್ ಎಬೌಟ್ ಲವ್: ನ್ಯೂ ವಿಷನ್ ಆ್ಯಂಡ್ ಐಯಾಮ್ ನಾಟ್ ಎ ವುಮನ್? ಮುಂತಾದ ಕೃತಿಗಳಿಂದ ಜನಪ್ರಿಯತೆ ಗಳಿಸಿದರು. 

ಕವಿತೆ ಮತ್ತು ಮಕ್ಕಳ ಕತೆಗಳನ್ನು ಬರೆದರಲ್ಲದೆ, ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿದರು. ಮಹಿಳಾವಾದ ಎಂದರೆ ಲಿಂಗ ಭೇದ ಭಾವ, ಲೈಂಗಿಕ ಶೋಷಣೆ ಮತ್ತು ದಬ್ಬಾಳಿಕೆಯನ್ನು ಕೊನೆಗೊಳಿಸುವ ಚಳವಳಿ ಎಂದು ಅವರು ಮಾಡಿದ್ದ ವ್ಯಾಖ್ಯಾನ ಪ್ರಸಿದ್ಧಿ ಪಡೆದಿತ್ತು. ಜನಾಂಗೀಯ ತಾರತಮ್ಯ, ಲಿಂಗಾಧಾರಿತ ತಾರತಮ್ಯದ ವಿರುದ್ಧ ಧ್ವನಿ ಎತ್ತುವ ಕೃತಿ, ಅರ್ಥವ್ಯವಸ್ಥೆ, ರಾಜಕೀಯದ ಬಗ್ಗೆ ಬರೆದ ಕೃತಿಗಳ ಮೂಲಕ ಹೆಸರಾಗಿದ್ದರು.
ಹೂಕ್ಸ್ ನಿಧನಕ್ಕೆ ಸಾಮಾಜಿಕ ಮಾಧ್ಯಮದ ಮೂಲಕ ಹಲವರು ಶೃದ್ಧಾಂಜಲಿ ಸಲ್ಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News