ಎಲ್ಲದಕ್ಕೂ ಮೂಗು ತೂರಿಸಿ ಸಣ್ಣವರಾಗಬೇಡಿ

Update: 2021-12-17 11:41 GMT

ಶಾಲಾ ಮಕ್ಕಳಿಗೆ ಪೌಷ್ಟಿಕಾಂಶದ ಅಂಶವನ್ನು ಹೆಚ್ಚಿಸುವ ಸಲುವಾಗಿ ಮೊಟ್ಟೆ ವಿತರಣೆ ಮಾಡುವ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿರುತ್ತಾರೆ. ಮೊಟ್ಟೆ ವಿತರಣೆ ವಿಚಾರದಲ್ಲಿ ಅನೇಕ ಮಠಾಧಿಪತಿಗಳು ಮತ್ತು ಇವರ ಧ್ವನಿಯ ಪ್ರತಿರೂಪಗಳಾಗಿರುವ ರಾಜಕಾರಣಿಗಳು ಅನಾವಶ್ಯಕವಾಗಿ ಈ ವಿಚಾರದಲ್ಲಿ ಮೂಗು ತೂರಿಸಿ ಸಣ್ಣವರಾಗುತ್ತಿದ್ದಾರೆ. ಮಕ್ಕಳಿಗೆ ಮೊಟ್ಟೆ ವಿತರಣೆ ಮಾಡುವುದರಿಂದ ಯಾವ ಅನಾಹುತವೂ ಆಗುವುದಿಲ್ಲ, ಯಾವುದೇ ತಾರತಮ್ಯವೂ ಆಗುವುದಿಲ್ಲ. ಪೌಷ್ಟಿಕಾಂಶದ ಕೊರತೆಯಿಂದ ಮಕ್ಕಳು ಬಳಲುತ್ತಿದ್ದಾರೆ. ಅವರ ಕುಟುಂಬದ ಆರ್ಥಿಕ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳ ಬೆಳವಣಿಗೆಗೆ ಬೇಕಾದ ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ನೀಡಲು ಅಶಕ್ತರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಮೊಟ್ಟೆ ಕೊಟ್ಟರೆ ತಪ್ಪೇನಿಲ್ಲ. ಈ ವಿಚಾರದಲ್ಲಿ ಮಕ್ಕಳ ಹಕ್ಕುಗಳನ್ನು ಯಾರೂ ಕಸಿದುಕೊಳ್ಳಬೇಡಿ. ಅಸಮಾನತೆಯ ಬಗ್ಗೆ ಮಾತನಾಡುವ ಅನೇಕ ಮಠಾಧಿಪತಿಗಳು ಎಷ್ಟು ಜನ ಬಡವರ ಮನೆಯ ಮಕ್ಕಳಿಗೆ ನಿಮ್ಮ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ನೀಡಿದ್ದೀರಿ ಎಂಬುದನ್ನು ಮೊದಲು ಯೋಚಿಸಿ.

ಹಂತ ಹಂತದಲ್ಲೂ ತಾರತಮ್ಯದಿಂದ ಕೂಡಿರುವ ಸಮಾಜದಲ್ಲಿ ಅಸಮಾನತೆಯ ಮಾತುಗಳನ್ನಾಡುವುದು ನಗೆಪಾಟಲಾಗುತ್ತದೆ. ಬಡವರ ಮನೆಯ ಮಕ್ಕಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಉಚಿತ ಶಿಕ್ಷಣದ ಯೋಜನೆಯಡಿಯಲ್ಲಿ ಪ್ರವೇಶ ಪಡೆದು ಓದುತ್ತಿದ್ದ ಸಂದರ್ಭದಲ್ಲಿ ರಾಕ್ಷಸಿ ಮನಸ್ಸಿನ ಶಿಕ್ಷಣ ಸಂಸ್ಥೆಯ ಮಾಲಕನೊಬ್ಬ ಬಡವರ ಮನೆಯ ಮಕ್ಕಳು ಕೊಳಕು, ಅನಾರೋಗ್ಯ ಪೀಡಿತರಾಗಿರುತ್ತಾರೆ, ಇಂತಹ ಮಕ್ಕಳನ್ನೂ ಸೇರಿಸಿಕೊಳ್ಳುವುದರಿಂದ ಶ್ರೀಮಂತ ಮನೆಯ ಮಕ್ಕಳಿಗೆ ತೊಂದರೆಯಾಗುತ್ತದೆ ಎಂದು ಮಾತನಾಡಿದಾಗ ಅಂತಹ ವಿಕೃತ ಮನಸ್ಸಿನ ವ್ಯಕ್ತಿಯ ವಿರುದ್ಧ ಯಾರೂ ಮಾತನಾಡಲಿಲ್ಲ. ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಬಲಾಢ್ಯರು ಉಚಿತ ಶಿಕ್ಷಣ ಕಾನೂನನ್ನು ತಮ್ಮ ಕುತಂತ್ರಗಳ ಮೂಲಕ ಮೂಲೆ ಗುಂಪು ಮಾಡಿದಾಗ ಯಾರೂ ಮಾತನಾಡಲಿಲ್ಲ. ನೀರಿಲ್ಲದ, ಆಟದ ಮೈದಾನಗಳಿಲ್ಲದ, ಶೌಚಾಲಯವಿಲ್ಲದ, ಸೂಕ್ತವಾದಂತಹ ವ್ಯವಸ್ಥೆ ಇಲ್ಲದ ಸರಕಾರಿ ಶಾಲೆಗಳಲ್ಲಿ ಬಡವರ ಮನೆಯ ಮಕ್ಕಳು ಒಂದು ಕಡೆಯಲ್ಲಿ ವಿದ್ಯೆಯನ್ನು ಕಲಿಯಬೇಕು, ಮತ್ತೊಂದು ಕಡೆಯಲ್ಲಿ ಎಲ್ಲ ರೀತಿಯ ಸೌಲಭ್ಯ, ಸೌಕರ್ಯವಿರುವ ವ್ಯವಸ್ಥೆಯ ನಡುವೆ ಉಳ್ಳವರ ಮನೆಯ ಮಕ್ಕಳು ವಿದ್ಯೆ ಕಲಿಯಬೇಕು.

ಮಠಾಧಿಪತಿಗಳು ಕಲಿಕೆಯ ವಿಚಾರದಲ್ಲಿರುವ ಅಥವಾ ವ್ಯವಸ್ಥೆಯ ವಿಚಾರದಲ್ಲಿರುವ ಅಸಮಾನತೆಯ ಬಗ್ಗೆ ಮೊದಲು ಮಾತನಾಡಿ ನಂತರ ಮೊಟ್ಟೆ ವಿಚಾರದ ಬಗ್ಗೆ ಮಾತನಾಡಲಿ. ಮೊಟ್ಟೆ ಬೇಕೆನ್ನುವ ಮಕ್ಕಳು ಮೊಟ್ಟೆ ತಿನ್ನಲಿ, ಹಣ್ಣು ಬೇಕೆಂದವರು ಹಣ್ಣು ತಿನ್ನಲಿ. ಪುಟ್ಟ ಮನಸ್ಸಿನ ಮೇಲೆ ನಮ್ಮ ಸ್ವಾರ್ಥದ ಕೆಲಸಕ್ಕೆ ಬಾರದ ನಿಲುವುಗಳನ್ನು, ಸಿದ್ಧಾಂತಗಳನ್ನು ತುಂಬುವಂತಹ ಕೆಲಸವನ್ನು ಮಾಡುವುದು ಬೇಡ. ಮಕ್ಕಳ ಹಕ್ಕು ಕಸಿದುಕೊಳ್ಳದೆ ಆಯ್ಕೆಯನ್ನು ಅವರಿಗೆ ಬಿಡುವುದು ಅತ್ಯಂತ ಸೂಕ್ತವಾದದ್ದು. ಅನವಶ್ಯಕವಾಗಿ ಎಲ್ಲಾ ವಿಚಾರದಲ್ಲೂ ಸರಕಾರಕ್ಕೆ ಸಲಹೆಗಳನ್ನು ಕೊಡುವಂತಹ ತುರ್ತು ಮಠಾಧಿಪತಿಗಳಿಗೆ ಬೇಕೇ?

Similar News