×
Ad

ನೋಯ್ಡಾ ಭೂಮಿ ಹಂಚಿಕೆಯಲ್ಲಿ ಭಾರಿ ಅವ್ಯವಹಾರ : ಸಿಎಜಿ

Update: 2021-12-18 07:07 IST
Photo : timesofindia

ಹೊಸದಿಲ್ಲಿ: ನ್ಯೂ ಓಕ್ಲಾ ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಅಥಾರಿಟಿ (ನೋಯ್ಡಾ) ಕೈಗಾರಿಕಾ ಪ್ರದೇಶದ ಭೂಮಿ ಹಂಚಿಕೆಯಲ್ಲಿ ಅಧಿಕಾರಿಗಳು ಮತ್ತು ಬಿಲ್ಡರ್‌ಗಳ ನಡುವಿನ ಒಳ ಒಪ್ಪಂದದಿಂದಾಗಿ ಭೂಸ್ವಾಧೀನ, ಹಂಚಿಕೆ ಮತ್ತು ಅನುಮೋದನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಕಂಟ್ರೋಲರ್ ಮತ್ತು ಆಡಿಟಿಂಗ್ ಜನರಲ್ (ಸಿಎಜಿ) ವರದಿ ಬಹಿರಂಗಪಡಿಸಿದೆ.

ಇದು ಮನೆ ಖರೀದಿದಾರರ ಯಾತನೆಗೆ ಕಾರಣವಾಗಿದ್ದು, ಪ್ರಾಧಿಕಾರಕ್ಕೆ ಭಾರಿ ನಷ್ಟ ಸಂಭವಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಅಧಿಕಾರಿಗಳ ಸಂಶಯಾಸ್ಪದ ಕ್ರಮಗಳಿಂದಾಗಿ ಸರ್ಕಾರಿ ಬೊಕ್ಕಸಕ್ಕೆ 52 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ ಹಾಗೂ ದೆಹಲಿಯ ಉಪ ನಗರದಲ್ಲಿ ಕೇವಲ ಶೇಕಡ 18ರಷ್ಟು ಭೂಮಿಯನ್ನು ಮಾತ್ರ ಕೈಗಾರಿಕಾ ಅಭಿವೃದ್ಧಿಗೆ ಬಳಸಲಾಗಿದ್ದು, ಇಡೀ ಪ್ರದೇಶ ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಸ್ವರ್ಗವಾಗಿದೆ ಎಂದು ವರದಿ ವಿವರಿಸಿದೆ.

ಬಿಲ್ಡರ್‌ಗಳು ಆರ್ಥಿಕ ಒತ್ತಡದಲ್ಲಿರುವ ಕಾರಣದಿಂದ ಆತಂಕದಿಂದ ಇರುವ ಮನೆ ಖರೀದಿದಾರರು ಸ್ವಾಧೀನಕ್ಕಾಗಿ ಕಾಯುತ್ತಿದ್ದಾರೆ. 1.3 ಲಕ್ಷ ಸಮೂಹ ಮನೆ ನಿರ್ಮಾಣ ಯೋಜನೆಗಳ ಪೈಕಿ ಶೇಕಡ 44 ಅಂದರೆ 57 ಸಾವಿರ ಮನೆಗಳಿಗೆ ಇನ್ನೂ ವಾಸ ದೃಢೀಕರಣ ಪತ್ರ ಇಲ್ಲ ಎಂದು ಹೇಳಿದೆ.

ಯೋಜನೆ ರೂಪಿಸುವುದು, ಭೂಸ್ವಾಧೀನ, ಆಸ್ತಿ ಬೆಲೆ ನಿಗದಿಪಡಿಸಿರುವುದು ಮತ್ತು ವಿವಿಧ ವರ್ಗಗಳ ಬಳಕೆಗೆ ಭೂಮಿ ಹಂಚಿಕೆಯಲ್ಲಿ ಭಾರಿ ಲೋಪಗಳು ಆಗಿವೆ ಎಂದು ಆಕ್ಷೇಪಿಸಿದೆ.

2005-06ರಿಂದ 2017-18ರವರೆಗಿನ ಸಾಧನೆಯ ಮೌಲ್ಯಮಾಪನ ನಡೆಸಿದ ಮೊದಲ ಸಿಎಜಿ ವರದಿ ಇದಾಗಿದ್ದು, ಗ್ರೇಟರ್ ನೋಯ್ಡಾಗೆ ಸಂಬಂಧಿಸಿದ ಇಂಥದ್ದೇ ವರದಿಯನ್ನು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಶೀಘ್ರವೇ ಮಂಡಿಸುವ ನಿರೀಕ್ಷೆ ಇದೆ.

ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬರುವ ಮೊದಲಿನ ಅವಧಿಯ ಈ ವರದಿ ಮುಂಬರುವ ವಿಧಾನಸಭಾ ಚುನಾವಣೆ ವೇಳೆ ರಾಜಕೀಯ ಅಸ್ತ್ರವಾಗುವ ನಿರೀಕ್ಷೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News