ಮೂರು ಲಸಿಕಾ ಡೋಸ್ ಪಡೆದ ವ್ಯಕ್ತಿಗೂ ಒಮೈಕ್ರಾನ್ ಸೋಂಕು !

Update: 2021-12-18 02:48 GMT
ಫೈಲ್ ಫೋಟೊ

ಮುಂಬೈ: ನ್ಯೂಯಾರ್ಕ್‌ನಿಂದ ಆಗಮಿಸಿದ 29 ವರ್ಷದ ವ್ಯಕ್ತಿಯೊಬ್ಬರಿಗೆ ಒಮೈಕ್ರಾನ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಈ ವ್ಯಕ್ತಿ ಫೈಝರ್ ನ ಮೂರು ಲಸಿಕಾ ಡೋಸ್‌ಗಳನ್ನು ಪಡೆದಿದ್ದ ಎಂದು ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

ನವೆಂಬರ್ 9ರಂದು ವಿಮಾನ ನಿಲ್ದಾಣದಲ್ಲಿ ಈ ವ್ಯಕ್ತಿಯನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಫಲಿತಾಂಶ ಬಂದಿತ್ತು. ಆ ಬಳಿಕ ಮಾದರಿಯನ್ನು ಜೆನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿತ್ತು.

ಇವರ ಎರಡು ಅತ್ಯಧಿಕ ಅಪಾಯ ಸಾಧ್ಯತೆಯ ಸಂಪರ್ಕಗಳ ಪರೀಕ್ಷೆ ನಡೆಸಿದಾಗ ಕೊರೋನ ವೈರಸ್ ನೆಗೆಟಿವ್ ಫಲಿತಾಂಶ ಬಂದಿದೆ ಎಂದು ಬಿಎಂಸಿ ಸ್ಪಷ್ಟಪಡಿಸಿದೆ.

"ರೋಗಿಯನ್ನು ಮುಂಜಾಗ್ರತಾ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವ್ಯಕ್ತಿಯಲ್ಲಿ ಯಾವುದೇ ರೋಗಲಕ್ಷಣ ಕಂಡುಬಂದಿಲ್ಲ" ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಈ ಪ್ರಕರಣದೊಂದಿಗೆ ದೇಶದ ಆರ್ಥಿಕ ರಾಜಧಾನಿಯಲ್ಲಿ ಪತ್ತೆಯಾದ ಒಮೈಕ್ರಾನ್ ಪ್ರಕರಣಗಳ ಸಂಖ್ಯೆ 15ಕ್ಕೇರಿದ್ದು, ಈ ಪೈಕಿ 5 ಮಂದಿ ಮುಂಬೈನಿಂದ ಹೊರಗಿನವರು. 13 ಮಂದಿಯನ್ನು ಈಗಾಗಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 15 ಮಂದಿಯ ಪೈಕಿ ಯಾರಿಗೂ ತೀವ್ರ ರೋಗಲಕ್ಷಣಗಳು ಕಂಡುಬಂದಿಲ್ಲ. ಮಹಾರಾಷ್ಟ್ರದಲ್ಲಿ ಒಮೈಕ್ರಾನ್ ಸೋಂಕಿತರ ಸಂಖ್ಯೆ 40ಕ್ಕೇರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News