ಬಾಗ್ದಾದ್: ಗ್ರೀನ್ರೆನ್ ಮೇಲೆ ಅವಳಿ ರಾಕೆಟ್ ದಾಳಿ

Update: 2021-12-19 18:48 GMT

ಬಾಗ್ದಾದ್,ಡಿ.19: ಅಮೆರಿಕದ ರಾಯಭಾರಿ ಕಚೇಯಿರಿರುವ ಬಾಗ್ದಾದ್‌ನ ಬಿಗಿಭದ್ರತೆಯ ಗ್ರೀನ್ರೆನ್ ಪ್ರದೇಶದ ಮೇಲೆ ಎರಡು ರಾಕೆಟ್‌ಗಳು ಅಪ್ಪಳಿಸಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲವೆಂದು ಇರಾಕ್ ಸೇನೆ ತಿಳಿಸಿದೆ.

ಮೊದಲ ರಾಕೆಟನ್ನು ಅಮೆರಿಕ ರಾಯಬಾರಿ ಕಚೇರಿಯ ಸಿ-ರ್ಯಾಮ್ ರಕ್ಷಣಾ ವ್ಯವಸ್ಥೆ ನಾಶಪಡಿಸಿತು. ಇನ್ನೊಂದು ರಾಕೆಟ್ ಸಮೀಪದಲ್ಲಿರುವ ರಾಷ್ಟ್ರೀಯ ಸ್ಮಾರಕದ ಬಳಿ ಪತನಗೊಂಡಿದ್ದು, ಎರಡು ನಾಗರಿಕ ವಾಹನಗಳಿಗೆ ಹಾನಿಯುಂಟು ಮಾಡಿದೆ. ಅವಳಿ ರಾಕೆಟ್ ದಾಳಿಯ ಬಗ್ಗೆ ಇರಾಕಿ ಭದ್ರತಾ ಪಡೆಗಳು ತನಿಖೆಯನ್ನು ಆರಂಭಿಸಿರುವುದಾಗಿ ಅವು ಹೇಳಿವೆ.

ಬಾಗ್ದಾದ್ ನ ಗ್ರೀನ್ರೆನ್ ಪ್ರದೇಶದಲ್ಲಿ ಅಮೆರಿಕದ ರಾಯಭಾರಿ ಕಚೇರಿಯಲ್ಲದೆ ಇತರ ಹಲವಾರು ವಿದೇಶಿ ರಾಯಭಾರಿ ಕಚೇರಿಗಳು ಹಾಗೂ ಇರಾಕಿ ಸರಕಾರದ ಕಟ್ಟಡಗಳಿವೆ. ಇರಾನ್ ಬೆಂಬಲಿತ ಇರಾಕಿ ಉಗ್ರ ಗುಂಪುಗಳು ಈ ದಾಳಿಗಳ ಹಿಂದಿರುವುದಾಗಿ ಅಮೆರಿಕದ ರಾಜತಾಂತ್ರಿಕರು ಹಲವಾರು ಬಾರಿ ಆಪಾದಿಸುತತ್ತಿದ್ದಾರೆ.

2020ರಲ್ಲಿ ಇರಾಕ್‌ನಲ್ಲಿ ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನಿನ ಸೇನಾ ಜನರಲ್ ಖ್ವಾಸಿಮ್ ಸುಲೈಮಾನಿ ಹಾಗೂ ಇರಾಕಿ ತೀವ್ರವಾದಿ ಸಂಘಟನೆಯ ಕಮಾಂಡರ್ ಅಬು ಮಹದಿ ಅಲ್ ಮುಹಂದಿಸ್ ಅವರು ಸಾವನ್ನಪ್ಪಿದ ಘಟನೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾಕ್‌ನಲ್ಲಿ ಕಾರ್ಯಾಚರಿಸುತ್ತಿರುವ ಇರಾನ್ ಬೆಂಬಲಿತ ತೀವ್ರವಾದಿ ಗುಂಪುಗಳು ಘೋಷಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News