ಯುವಕನನ್ನು ಥಳಿಸಿ ಕೊಂದ ಸ್ನೇಹಿತರು: ಮತೀಯ ಕಾರಣಗಳ ಆರೋಪ ವ್ಯಕ್ತಪಡಿಸಿದ ಕುಟುಂಬ

Update: 2021-12-20 08:51 GMT
Photo: Hindustangazette

ಹೊಸದಿಲ್ಲಿ: ಹರ್ಯಾಣಾದ ಪಲ್ವಾಲ್ ಎಂಬಲ್ಲಿ  ಕಳೆದ ಮಂಗಳವಾರ 22 ವರ್ಷದ ಯುವಕನನ್ನು ಆತನ ಸ್ನೇಹಿತರೆಂದೇ ತಿಳಿಯಲಾದ ಮೂವರು ವ್ಯಕ್ತಿಗಳು ಥಳಿಸಿ ಹತ್ಯೆಗೈದ ಘಟನೆ ನಡೆದಿದೆ. 

ಸಂತ್ರಸ್ತ ರಾಹುಲ್ ಖಾನ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆಂದು ಮೊದಲು ಆರೋಪಿಗಳು ಹೇಳಿದ್ದರೂ ಘಟನೆಯ ನಂತರ ಆತನ ಕುಟುಂಬಕ್ಕೆ ದೊರೆತ ವೀಡಿಯೋವೊಂದರಲ್ಲಿ ಆತನನ್ನು ಥಳಿಸಿ ಸಾಯಿಸಲಾಗಿರುವುದು ಕಾಣಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಪ್ರಕರಣದ ಹಿಂದೆ ಮತೀಯ ಕಾರಣಗಳಿರಬಹುದೆಂದು ಆತನ ಕುಟುಂಬ ಹಾಗೂ ಪೊಲೀಸರು ಶಂಕಿಸಿದ್ದಾರೆ.

ವೀಡಿಯೋದ ಆಧಾರದಲ್ಲಿ ಪೊಲೀಸರು ಮೃತ ಯುವಕನ ಸ್ನೇಹಿತರಾದ ಆಕಾಶ್ (ಆಲಿಯಾಸ್ ದಿಲ್ಜಲೆ), ವಿಶಾಲ್ ಮತ್ತು ಕಲುವಾ ಎಂಬವರನ್ನು ಬಂಧಿಸಿದ್ದಾರೆ. ಎಲ್ಲರೂ ರಸೂಲಪುರ ಗ್ರಾಮದವರು.

ಮೃತ ಯುವಕನ ತಂದೆ ಚಿಡ್ಡಿ ಖಾನ್ ಪ್ರಕಾರ ಆರೋಪಿಗಳು ರಾಹುಲ್‍ನನ್ನು ಆತನ ಮನೆಯಿಂದ ಡಿಸೆಂಬರ್ 14ರಂದು ಬೆಳಿಗ್ಗೆ ಹೊಶಂಗಾಬಾದ್‍ನಲ್ಲಿ ನಡೆಯಲಿರುವ ಮದುವೆ ಹೋಗಲಿದೆ ಎಂದು ಹೇಳಿ ಕರೆದುಕೊಂಡು ಹೋಗಿದ್ದರು. ನಂತರ ಅವರು ಯುವಕನ ತಂದೆಗೆ ಕರೆ ಮಾಡಿ ಆತನಿಗೆ ರಸ್ತೆ ಅಪಘಾತವೊಂದರಲ್ಲಿ ಗಾಯಗಳುಂಟಾಗಿವೆ ಎಂದಿದ್ದರು.

ಪೊಲೀಸರ ಪ್ರಕಾರ ಯುವಕರು ರಸೂಲಪುರ್‍ಗೆ ಮರಳಿದ ನಂತರ ಅವರ ನಡುವೆ ಮದ್ಯ ಸೇವಿಸುವ ವೇಳೆ ಜಗಳವಾಯಿತು ಹಾಗೂ ರಾಹುಲ್ ತನ್ನ ಫೋನ್ ಅಡಗಿಸಿಟ್ಟಿದ್ದಾನೆಂದು ಕಲುವಾ ಆರೋಪಿಸಿದ್ದ. ಫೋನ್ ರಾಹುಲ್ ಬಳಿ ಪತ್ತೆಯಾದಾಗ ಅವರು ಆತನಿಗೆ ರಾಡ್ ಮತ್ತಿತರ ವಸ್ತುಗಳಿಂದ ಥಳಿಸಿದ್ದರು. ಈ ಘಟನೆಯ ವೀಡಿಯೋವನ್ನು ಆಕಾಶ್ ಸೆರೆ ಹಿಡಿದಿದ್ದ.

ರಸ್ತೆ ಅಪಘಾತವಾಗಿದೆ ಎಂದು ಆರೋಪಿಗಳು ಹೇಳಿದ ನಂತರ ರಾಹುಲ್‍ನ ಭಾವ ಅಕ್ರಮ್ ಖಾನ್ ಎಂಬವರು ಕಲುವಾ ಮನೆಗೆ ಹೋಗಿದ್ದು ಅಲ್ಲಿ ತೀವ್ರ ಗಾಯಗಳಿಂದ  ರಾಹುಲ್ ಬಿದ್ದಿದ್ದ. ಆತನನ್ನು ಆಸಪ್ತ್ರೆಗೆ ದಾಖಲಿಸಲಾಯಿತಾದರೂ ಆತ ಬದಕುಳಿಯಲಿಲ್ಲ.

ತನಗೆ ಥಳಿಸಲಾಗಿದೆ ಎಂದು ಸಾಯುವ ಮುನ್ನ ರಾಹುಲ್ ತನ್ನ ಸೋದರಿ ರಝಿಯಾಗೆ ಹೇಳಿದ್ದಾನೆನ್ನಲಾಗಿದೆ. ತಮ್ಮ ತಂದೆ ರೈಲ್ವೆ ಸೇವೆಯಿಂದ ಈ ವರ್ಷದ ಎಪ್ರಿಲ್ ನಲ್ಲಿ ನಿವೃತ್ತಗೊಂಡ ನಂತರ ಆರೋಪಿಗಳು ರಾಹುಲ್‍ನಿಂದ ಹಣಕ್ಕೆ ಬೇಡಿಕೆಯಿಡುತ್ತಿದ್ದರು ಎಂದು ಆಕೆ ಆರೋಪಿಸಿದ್ದಾರೆ.

ಡಿಸೆಂಬರ್ 15ರಂದು ಕುಟುಂಬಕ್ಕೆ ದೊರೆತ ವೀಡಿಯೋದಲ್ಲಿ ಆರೋಪಿಗಳು "ತಾವು ಹಿಂದುಗಳು ಹಾಗೂ ಆತ ಮುಸ್ಲಿಂ" ಎಂದು ಹೇಳುತ್ತಿರುವುದು ಕೇಳಿಸಿದೆ ಎಂದು ಕುಟುಂಬ ಹೇಳಿದೆ.

ಪೊಲೀಸರು ಆರಂಭದಲ್ಲಿ ನಿರ್ಲಕ್ಷ್ಯದ ಚಾಲನೆಯಿಂದ ಉಂಟಾದ ಸಾವು ಎಂಬ ಪ್ರಕರಣ ದಾಖಲಿಸಿದರೂ ವೀಡಿಯೋ ಹಾಗೂ ಕುಟುಂಬದ ಹೇಳಿಕೆ ಮೇರೆಗೆ ಕೊಲೆ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾನು ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು ತೋರಿಸಲೆಂದೇ ಆಕಾಶ್ ಈ ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಹಾಗೂ ರಾಹುಲ್‍ಗೆ ಥಳಿಸದಂತೆ ಆತ ಹೇಳುತ್ತಿರುವುದೂ ವೀಡಿಯೋದಲ್ಲಿ ಕೇಳಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News