×
Ad

ನಾನು ಮತ್ತು ಮಾರ್ಕ್ಸ್‌ವಾದ

Update: 2021-12-21 00:05 IST

ರೇಮಂಡ್ ವಿಲಿಯಮ್ಸ್ ಒಮ್ಮೆ ಬರ್ಮಿಂಗ್‌ಹ್ಯಾಂನಲ್ಲಿ ಇನ್ನೊಂದು ಮಾತನ್ನು, ನಾವು ಆತ್ಮೀಯರೆಲ್ಲ ಸೇರಿದ್ದ ಒಂದು ಸಭೆಯಲ್ಲಿ, ಹೇಳಿದ್ದು ನೆನಪಾಗುತ್ತಿದೆ. ‘‘ಈಗ ರೋಮ್‌ನಲ್ಲಿ ಒಬ್ಬ ಪೋಪ್ ಎಂತಹ ನೀಚ ಕೆಲಸವನ್ನು ಮಾಡಿದರೂ ಅವನನ್ನು ಅವನು ಒಪ್ಪುವ ಬೈಬಲ್ ಉಪಯೋಗಿಸಿಯೇ ಟೀಕಿಸಬಹುದು. ಹಾಗೆಯೇ, ಕಮ್ಯುನಿಸ್ಟ್ ಪಕ್ಷ ಯಾವ ತಪ್ಪನ್ನು ಮಾಡಿದರೂ ಅವನು ನಂಬುವ ಪಠ್ಯವಾದ ಮಾರ್ಕ್ಸ್‌ನ ಬರವಣಿಗೆಯನ್ನು ಉಪಯೋಗಿಸಿಯೇ ಅವನನ್ನು ಟೀಕಿಸಬಹುದು. ಆದರೆ ಹಿಟ್ಲರ್ ಏನಾದರೂ ತಪ್ಪುಮಾಡಿದರೆ ಅವನ ಕ್ರಿಯೆಯೂ ಕ್ರೂರ, ಅವನು ನಂಬುವ ಪಠ್ಯವೂ ಕ್ರೂರ, ಈ ವ್ಯತ್ಯಾಸವನ್ನು ನಾವು ಮನಸ್ಸಿನಲ್ಲಿಟ್ಟುಕೊಂಡು ಸ್ಟಾಲಿನ್ ಇತ್ಯಾದಿಯವರು ಮಾಡಿದ ತಪ್ಪುಗಳನ್ನು ಮಾರ್ಕ್ಸ್‌ವಾದ ಬಳಸಿಯೇ ಟೀಕಿಸಬಹುದು ಎಂದು ತಿಳಿಯಬೇಕು.


ಮೊದಲನೆಯದು, ಕಮ್ಯುನಿಸ್ಟ್ ಪಕ್ಷದ ಬಗ್ಗೆ ನಮಗಿರುವ ಅಸಮಾಧಾನಕ್ಕೂ, ಮಾರ್ಕ್ಸಿಸಂಗೂ ನಡುವೆ ನಾವು ಭಿನ್ನತೆಯನ್ನು ಗಮನಿಸಬೇಕು. ಮಾರ್ಕ್ಸ್ ವಾದ, ನನ್ನ ಭಾವನೆಯಲ್ಲಿ ಮೊದಲು, ನಮ್ಮ ಎಲ್ಲ ಸಮಸ್ಯೆಗಳನ್ನು ಆರ್ಥಿಕ ನೆಲೆಗಟ್ಟಿನಲ್ಲಿ ಇಟ್ಟು ನೋಡುತ್ತದೆ ಎಂದು ಅದನ್ನು ನಾನು ಅನುಮಾನದಿಂದ ನೋಡುತ್ತಿದ್ದೆ. ಆದರೆ ಒಮ್ಮೆ ಕೇರಳದ ದೊಡ್ಡ ಲೇಖಕರಾದ ತಕಳಿ ಶಿವಶಂಕರ ಪಿಳ್ಳೆ ಕೊಟ್ಟಾಯಂನಲ್ಲಿ ನನ್ನ ಜೊತೆ ಹರಟುತ್ತ ಅದೇನೋ ಒಂದು ಗುಟ್ಟೆಂಬಂತೆ ತಮ್ಮ ಕಣ್ಣನ್ನು ಮಿಟುಕಿಸಿ, ‘‘ಯವ್ವನದಲ್ಲಿ ನನಗೆ ಪ್ರಪಂಚದ ಎಲ್ಲ ಸಮಸ್ಯೆಗಳಿಗೂ ತನ್ನಲ್ಲಿ ಉತ್ತರವಿದೆಯೆಂದು ತಿಳಿಯುವ ಮಾರ್ಕ್ಸ್‌ವಾದದ ಧಾರ್ಷ್ಟ ಬಹಳ ಆಕರ್ಷಕವಾಗಿತ್ತು’’ ಎಂದರು. ಅವರು ಉಪಯೋಗಿಸಿದ ಶಬ್ದ ‘ದಿ ಆರೊಗೆನ್ಸ್ ಆಫ್ ಮಾರ್ಕ್ಸಿಸಂ’. ಮುಂದುವರಿದು ಮಾತಾಡುತ್ತ ಪಿಳ್ಳೆ ಅವರು, ‘‘ಎಲ್ಲ ಬೀಗಗಳನ್ನು ತೆಗೆಯುವ ಒಂದು ಕೀಯನ್ನು ನನಗೆ ಆ ಪದ ಕೊಟ್ಟಿತ್ತು. ನಾನು ಆ ಧಾರ್ಷ್ಟ್ಯವನ್ನು ಅನುಮಾನಿಸುತ್ತ ಆದರೆ ಅದರ ಆಶ್ರಯವನ್ನು ಯಾವತ್ತೂ ಬಿಟ್ಟುಕೊಡದಂತೆ ಬದುಕಿ ಬರಹಗಾರನಾದೆ’’ ಎಂದರು. ಹೀಗೆ ತಕಳಿಯವರು ಹೇಳುವಾಗ ಅವರ ದೃಷ್ಟಿಯಲ್ಲಿ ಮಾರ್ಕ್ಸ್‌ವಾದವೂ ಇತ್ತು; ಕೇರಳದಲ್ಲಿ ಜನಜಾಗೃತಿಯನ್ನುಂಟುಮಾಡಿದ ಕಮ್ಯುನಿಸ್ಟ್ ಪಕ್ಷವೂ ಇತ್ತು. ಜೊತೆಗೆ ಪಕ್ಷದಲ್ಲಿ ನಂಬಿಕೆ ಕಡಿಮೆಯಾದಾಗಲೂ ತತ್ವದಲ್ಲಿ ಮೋಹಗೊಂಡಿದ್ದರು.

ರೇಮಂಡ್ ವಿಲಿಯಮ್ಸ್ ಒಮ್ಮೆ ಬರ್ಮಿಂಗ್‌ಹ್ಯಾಂನಲ್ಲಿ ಇನ್ನೊಂದು ಮಾತನ್ನು, ನಾವು ಆತ್ಮೀಯರೆಲ್ಲ ಸೇರಿದ್ದ ಒಂದು ಸಭೆಯಲ್ಲಿ, ಹೇಳಿದ್ದು ನೆನಪಾಗುತ್ತಿದೆ. ‘‘ಈಗ ರೋಮ್‌ನಲ್ಲಿ ಒಬ್ಬ ಪೋಪ್ ಎಂತಹ ನೀಚ ಕೆಲಸವನ್ನು ಮಾಡಿದರೂ ಅವನನ್ನು ಅವನು ಒಪ್ಪುವ ಬೈಬಲ್ ಉಪಯೋಗಿಸಿಯೇ ಟೀಕಿಸಬಹುದು. ಹಾಗೆಯೇ, ಕಮ್ಯುನಿಸ್ಟ್ ಪಕ್ಷ ಯಾವ ತಪ್ಪನ್ನು ಮಾಡಿದರೂ ಅವನು ನಂಬುವ ಪಠ್ಯವಾದ ಮಾರ್ಕ್ಸ್‌ನ ಬರವಣಿಗೆಯನ್ನು ಉಪಯೋಗಿಸಿಯೇ ಅವನನ್ನು ಟೀಕಿಸಬಹುದು. ಆದರೆ ಹಿಟ್ಲರ್ ಏನಾದರೂ ತಪ್ಪುಮಾಡಿದರೆ ಅವನ ಕ್ರಿಯೆಯೂ ಕ್ರೂರ, ಅವನು ನಂಬುವ ಪಠ್ಯವೂ ಕ್ರೂರ, ಈ ವ್ಯತ್ಯಾಸವನ್ನು ನಾವು ಮನಸ್ಸಿನಲ್ಲಿಟ್ಟುಕೊಂಡು ಸ್ಟಾಲಿನ್ ಇತ್ಯಾದಿಯವರು ಮಾಡಿದ ತಪ್ಪುಗಳನ್ನು ಮಾರ್ಕ್ಸ್‌ವಾದ ಬಳಸಿಯೇ ಟೀಕಿಸಬಹುದು ಎಂದು ತಿಳಿಯಬೇಕು.

ಇದಾದ ನಂತರ ಮಾರ್ಕ್ಸ್‌ವಾದದ ಬಗ್ಗೆ ನನ್ನ ಒಳಮನಸ್ಸನ್ನು ಕಾಡಿದ ಇನ್ನೊಂದು ಮಾತಿದೆ. ಅದು ಲೋಹಿಯಾರದ್ದು. ಮಾರ್ಕ್ಸ್‌ವಾದದ ಪ್ರಕಾರ ಯೂರೋಪಿನ ಬಂಡವಾಳಶಾಹಿ ವ್ಯವಸ್ಥೆ ಬೆಳೆದು ಬೆಳೆದು ಅಂತಿಮವಾಗಿ ಅದು ಸಾಮ್ರಾಜ್ಯಶಾಹಿಯಾಯಿತು. ಆದರೆ ಲೋಹಿಯಾ ಇದನ್ನು ಪ್ರಶ್ನಿಸುತ್ತಾರೆ. ಅದು ಪ್ರಾರಂಭದಿಂದಲೇ ಸಾಮ್ರಾಜ್ಯಶಾಹಿಯಾದ್ದರಿಂದ ಯೂರೋಪಿನ ಬಂಡವಾಳಶಾಹಿ ವ್ಯವಸ್ಥೆ ಬೆಳೆಯುವುದು ಸಾಧ್ಯವಾಯಿತು. ದೋಚುವುದಕ್ಕೆ ಒಂದು ಪ್ರದೇಶ ಸಿಗದಿದ್ದರೆ ದೋಚುವವ ಇಷ್ಟು ಬೆಳೆಯಲು ಸಾಧ್ಯವಿಲ್ಲ. ಇಲ್ಲಿ ಮಾರ್ಕ್ಸ್‌ವಾದದ ತಿರುಳನ್ನೇ ಅವರು ಪ್ರಶ್ನಿಸುತ್ತಾರೆ, ಜೊತೆಗೆ ಇಂತಹ ವೈಚಾರಿಕತೆಯಿಂದಾಗಿ ಬೆಳೆದು ಅಧಿಕಾರ ಸ್ಥಾಪಿಸಿದ ದೇಶ ಇನ್ನಷ್ಟು ಬೆಳೆಯುತ್ತದೆ. ಅದನ್ನು ವಿರೋಧಿಸುವ ದೇಶವೂ ಬೆಳೆಯುತ್ತದೆ, ಆದರೆ ಯಾವತ್ತೂ ಒಂದು ಹೆಜ್ಜೆ ಹಿಂದಾಗಿ, ಅಂದರೆ ಮಾರ್ಕ್ಸ್ ಐರೋಪ್ಯ ಸಂಸ್ಕೃತಿಯ ಶ್ರೇಷ್ಠತೆಯನ್ನು ಪ್ರಶ್ನಿಸಿದರೂ ಅದು ಪರಿಣಾಮದಲ್ಲಿ ಶ್ರೇಷ್ಠ ಎಂಬುದನ್ನು ಸ್ಥಾಪಿಸುತ್ತಾನೆ. ಆದ್ದರಿಂದ ಸರಳರೇಖಾತ್ಮಕವಾದ ಹೆಗಲ್ ಮತ್ತು ಮಾರ್ಕ್ಸ್‌ನ ವಿಚಾರವನ್ನು ಲೋಹಿಯಾ ವಿರೋಧಿಸಿ ಟಾಯ್‌ನ್‌ಬಿಯ ವೃತ್ತಾಕಾರದ ಚಲನೆಯನ್ನು ಅವರು ಎತ್ತಿಹಿಡಿಯುತ್ತಾರೆ. ಮುಂದಿದ್ದ ರೋಮ್ ಹಿಂದಾಯಿತು, ಮುಂದಿದ್ದ ಭಾರತ ಹಿಂದಾಯಿತು, ಹಿಂದಿದ್ದ ಯೂರೋಪ್ ಮುಂದಾಯಿತು. ಮತ್ತೆ ಅದು ಮುಂದೊಮ್ಮೆ ಹಿಂದಾಗುತ್ತದೆ. ಚರಿತ್ರೆಯ ದಾರಿಯೇ ಟಾಗೋರ್ ಹೇಳುವಂತೆ, ‘ಪಥನ ಅಭ್ಯುದಯ ಬಂಧುರ ಪಂಥ’
ನನಗೆ ಲೋಹಿಯಾರದ್ದು ಹೆಚ್ಚು ಸಮರ್ಪಕವೆನಿಸುವ ವಾದ.

ಇವೆಲ್ಲಕ್ಕಿಂತ ಮುಖ್ಯವಾಗಿ, ಎರಡು ಮಾರ್ಕ್ಸ್‌ರು ಇದ್ದಾರೆ ಎಂಬುದು ಕ್ರಮೇಣ ನನಗೆ ಅರ್ಥವಾಗುತ್ತ ಹೋಯಿತು. ಎರಡನೇ ಮಾರ್ಕ್ಸ್ ನನ್ನ ಲೀವಿಸ್‌ರ ಓದಿನಿಂದಾಗಿ ಹೆಚ್ಚು ಮನದಟ್ಟಾಗತೊಡಗಿದ್ದು, ಕಮ್ಯುನಿಸ್ಟ್ ಪಕ್ಷ ಬಳಸುವ ಮಾರ್ಕ್ಸ್‌ನ ವಿಚಾರ ಅವನ ಶೋಷಣೆ/ಲಾಭದ ಸಂಬಂಧಕ್ಕೆ ಸೇರಿದ್ದು. ಬಂಡವಾಳಶಾಹಿ ವ್ಯವಸ್ಥೆ ಉಂಟುಮಾಡುವ ಕಾರ್ಮಿಕ ಮತ್ತು ಒಡೆಯ ಇವರಿಬ್ಬರ ನಡುವಿನ ಸಂಘರ್ಷದಿಂದಾಗಿ ಉತ್ಪನ್ನವಾಗುವ ಹೊಸ ವ್ಯವಸ್ಥೆಯ ಅನಿವಾರ್ಯ ಉದಯ ಈ ವಿಚಾರದ ತಳಪಾಯ. ಆದರೆ ಮಾರ್ಕ್ಸ್ ತಿಳಿದಂತೆ ಬಂಡವಾಳಶಾಹಿ ಎತ್ತರಕ್ಕೆ ಏರಿದ ಜರ್ಮನಿಯಲ್ಲಿ ಕ್ರಾಂತಿಯಾಗಲಿಲ್ಲ. ಆದದ್ದು ಅರ್ಥವ್ಯವಸ್ಥೆಯಲ್ಲಿ ಹಿಂದುಳಿದ ದೇಶವಾದ ರಶ್ಯದಲ್ಲಿ, ಆದ್ದರಿಂದ ಈ ಆರ್ಥಿಕ ಲಾಭದ ನೆಲೆಗಟ್ಟಿನ ಮಾರ್ಕ್ಸ್‌ವಾದಕ್ಕಿಂತ ಇನ್ನೂ ಯುವಕನಾಗಿದ್ದ ಮಾರ್ಕ್ಸ್ ಯೋಚಿಸುತ್ತಿದ್ದ ಕ್ರಮ ಕಮ್ಯುನಿಸ್ಟ್ ಅಧಿಕಾರಶಾಹಿಗೂ ನುಂಗಲಾರದ ತುತ್ತೇ. ಇದು ಮಾರ್ಕ್ಸ್‌ನ ‘ಏಲಿಯನೇಷನ್ ಸಿದ್ಧಾಂತ’. ಒಬ್ಬ ಮಡಕೆ ಮಾಡುವವನು ಅಗತ್ಯವಾದ ಮಣ್ಣನ್ನು ಹುಡುಕಿ ಅದನ್ನು ಒದ್ದೆ ಮಾಡಿ ಹದ ಮಾಡಿ, ಉಂಡೆ ಮಾಡಿ ಕಲಸಿ, ತಕ್ಕ ರೂಪ ಬರುವ ಹಾಗೆ ಚಕ್ರ ತಿರುಗಿಸಿ ಅದನ್ನು ಒಣಗಿಸಿ ಅವನೇ ಮಾರಾಟ ಮಾಡುವಾಗ ಅವನಿಗೂ, ಅವನು ಸೃಷ್ಟಿಸಿದ ಪದಾರ್ಥಕ್ಕೂ ‘ಏಲಿಯನೇಷನ್’ ಇಲ್ಲ, ದೊಡ್ಡ ಯಂತ್ರಗಳು ಬಂದೊಡನೆ ಕೊನೆಯಲ್ಲಿ ಉತ್ಪನ್ನವಾಗುವ ವಸ್ತುವಿಗೂ, ಕೂಲಿಕಾರನಿಗೂ ನಡುವೆ ಯಾವ ಸಂಬಂಧವೂ ಇರುವುದಿಲ್ಲ. ಮನುಷ್ಯ ತನ್ನ ಜೀವನಕ್ಕಾಗಿ ಮಾಡುವ ಕೆಲಸದಲ್ಲಿ ತಾನು ಉತ್ಪನ್ನ ಮಾಡುವ ವಸ್ತುವಿಗಿಂತ ಅನ್ಯವಾಗಿ ಬಿಡುವುದು ಸತತವಾದ ಮಾನವ ದುಃಖಕ್ಕೆ ಕಾರಣ. ಈ ಮಾರ್ಕ್ಸ್‌ನನ್ನು ಅರಿಯಬಲ್ಲವರು ಟಾಲ್ ಸ್ಟಾಯ್ ಮತ್ತು ಗಾಂಧಿಯಂತಹವರು ಮಾತ್ರ. ಆದ್ದರಿಂದಲೇ ಮಾರ್ಕ್ಸ್ ಹಣದ ಬಗ್ಗೆ ಬರೆಯುವಾಗ ದೊಡ್ಡ ಕವಿಯಂತೆ ಕಾಣುತ್ತಾನೆ. ಮಾತ್ರವಲ್ಲ, ಶೇಕ್ಸ್ ಪಿಯರ್‌ನಿಂದ ಅದನ್ನು ಪಡೆಯುತ್ತಾನೆ.

ಆದರೆ ಒಂದು ಪಕ್ಷವನ್ನು ಕಟ್ಟಲು, ಹೋರಾಟ ಮಾಡಲು ಈ ಮಾರ್ಕ್ಸ್ ಅಷ್ಟು ಸುಲಭವಾಗಿ ಒದಗುವವನಲ್ಲ. ಯಾಕೆಂದರೆ ಇಲ್ಲಿನ ಒಳನೋಟಗಳು ಕೇವಲ ಅಂತರ್ಮುಖವಾಗಿ ದಕ್ಕುವಂತಹವು. ಸ್ಲೋಗನ್‌ಗಳಾಗಿ ಅವನ್ನು ಪರಿವರ್ತಿಸಲು ಸಾಧ್ಯವಿಲ್ಲ. ಆದರೆ ರಾಜಕೀಯ ಹೋರಾಟದ ನೆಲೆಯ ಮಾರ್ಕ್ಸ್ ವಾದಕ್ಕೆ ಅಗತ್ಯವಾದ ಉಪಾಯವನ್ನು ಹುಡುಕಿದವನು ಲೆನಿನ್.ಇದು ಅವನ ‘ವಾನ್‌ಗಾರ್ಡ್ ಆಫ್ ದಿ ಪ್ರೊಲಿಟರೇಟಿಯಟ್’ (ಕಾರ್ಮಿಕರ ಮುಂಚೂಣಿಯಲ್ಲಿರುವ ಸೈದ್ಧಾಂತಿಕರು) ಸಿದ್ಧಾಂತದಲ್ಲಿದೆ, ಕಾರ್ಮಿಕರೇ ಕ್ರಾಂತಿಯನ್ನು ಮಾಡುವವರಲ್ಲ, ಅವರನ್ನು ಬಳಸಿ ಮುಂಚೂಣಿಯಲ್ಲಿರುವ ಕಮ್ಯುನಿಸ್ಟ್ ಪಕ್ಷ ಮಾಡುವ ಕ್ರಾಂತಿ ಇದು. ಈ ಮುಂಚೂಣಿಯಲ್ಲಿರುವವರು ಮೊದಲ ಹಂತದಲ್ಲಿ ‘ಬಹುವಚನ’ವಾಗಿರುತ್ತಾರೆ. ಆದರೆ ಈ ಬಹುವಚನ ಕ್ರಮೇಣ ‘ಏಕವಚನ’ವಾಗಿಬಿಡುತ್ತದೆ. ತನ್ನ ಸಹೋದ್ಯೋಗಿಗಳನ್ನೆಲ್ಲ ಕೊಂದು ಸ್ಟಾಲಿನ್ ಭಯಾನಕನಾದ ಏಕಸ್ವಾಮ್ಯದ ಆಡಳಿತ ನಡೆಸಿದ. ಚೀನಾದಲ್ಲಿ ಮಾವೋ ಮತ್ತು ಅವನ ಸಂಗಡಿಗರು ಹೀಗೇ ಆಗಿ ಕೊನೆಗೆ ಮಾವೋ ಮತ್ತವನ ಪ್ರೇಯಸಿ ಮಾತ್ರ ಉಳಿದು ಅವನೂ ಮಾಯವಾದ. ಆದ್ದರಿಂದ ಶೋಷಣೆ/ಲಾಭದ ಮಾರ್ಕ್ಸ್‌ನ ವೈಚಾರಿಕತೆ ಇನ್ನೊಂದು ಬಂಡವಾಳಶಾಹಿ ವ್ಯವಸ್ಥೆಯನ್ನು ಹಿಂದುಳಿದ ದೇಶಗಳಲ್ಲಿ ತರುವ ಉಪಾಯವಾಗಿ, ಅಂದರೆ ಕೈಗಾರೀಕರಣದ ಉಪಾಯವಾಗಿ ಮಾತ್ರ ಉಳಿದುಬಿಟ್ಟಿತು.
ಆದ್ದರಿಂದ ನಾನು ನನ್ನ ಒಳಜೀವನದ ‘ಏಲಿಯನೇಷನ್ ಥಿಯರಿ’ಯ ಮಾರ್ಕ್ಸ್‌ನಿಗೆ ಹತ್ತಿರವಾಗುವುದು ಎಕ್ಸ್‌ಪ್ಲಾಯ್ಡಾ ಥಿಯರಿಯ ಮಾರ್ಕ್ಸ್‌ಗೆ ಹತ್ತಿರವಾಗುವುದಕ್ಕಿಂತ ಮುಖ್ಯವೆಂದು ತಿಳಿದಿದ್ದೇನೆ. ಇದು ಹಲವು ಸಾರಿ ಸದ್ಯದ ಹೋರಾಟದ ಸಂದರ್ಭದಲ್ಲಿ ಪಲಾಯನ ವಾದದಂತೆ ತೋರಬಹುದೆಂಬ ಅನುಮಾನವೂ ನನಗೆ ಇದೆ.

ಲೋಹಿಯಾ ಜೊತೆಗೆ ನನ್ನ ತಕರಾರು
ನಾನು ಲೋಹಿಯಾರ ಬಗ್ಗೆ ಎಷ್ಟು ಪ್ರೀತಿ, ಗೌರವದಿಂದ ಯೋಚಿಸುತ್ತ ಬಂದಿದ್ದೇನೆಯೋ ಅಷ್ಟೇ ವಿಮರ್ಶಾತ್ಮಕವಾಗಿಯೂ ಅವರನ್ನು ಕಾಣುತ್ತ ಬಂದಿದ್ದೇನೆ. ಒಮ್ಮೆ ಅವರು ತನ್ನ ಹಿಂಬಾಲಕರಿಗೆ ಹೀಗೆ ಹೇಳಿದ್ದುಂಟು, ‘ನೀವು ಮಾತಿನಲ್ಲಿ ನಿಯಮಾತೀತರಾಗಿರಬೇಕು ಆದರೆ ಕ್ರಿಯೆಯಲ್ಲಿ ನಿಯಮಬದ್ಧರಾಗಿರಬೇಕು.’ ಇದಕ್ಕೆ ಬದಲಾಗಿ ನಮ್ಮ ರಾಜಕಾರಣಿಗಳು ಮಾತಿನಲ್ಲಿ ಯಾವ ಭೇದವನ್ನೂ ವ್ಯಕ್ತಪಡಿಸುವುದಿಲ್ಲ, ಆದರೆ ಕ್ರಿಯೆಯಲ್ಲಿ ತಮಗೆ ಬೇಕಾದ್ದನ್ನು ಇಷ್ಟ ಬಂದಂತೆ ಮಾಡಿಬಿಡುತ್ತಾರೆ. ಲೋಹಿಯಾ ಪ್ರತಿ ಬಾರಿಯೂ ತನ್ನ ಪಕ್ಷವನ್ನು ಒಡೆದದ್ದು ಹೀಗೆ ಯೋಚನೆಯಲ್ಲಿ ಸ್ವತಂತ್ರರೂ ಕ್ರಿಯೆಯಲ್ಲಿ ನಿಯಮಬದ್ಧರೂ ಆದವರನ್ನೂ ಹುಡುಕಿಕೊಂಡು ಹೋಗಿ.ಆದರೆ ಲೋಹಿಯಾ ರಾಜಕಾರಣಿಯೂ ಹೌದಾದ್ದರಿಂದ ಕಾಂಗ್ರೆಸೇತರ ರಾಜಕಾರಣ ಮಾಡುವಾಗ ತನ್ನ ತತ್ವದ ನಿಷ್ಠುರತೆಯನ್ನು ಕೊಂಚ ಕಡಿಮೆ ಮಾಡಿಕೊಂಡು ನೆಹರೂಗೆ ವಿರುದ್ಧವಾದವರನ್ನೆಲ್ಲ ತಮ್ಮ ಜೊತೆಗೆ ಸೇರಿಸಿಕೊಳ್ಳುತ್ತಾ ಹೋದರು. ನಾನು ಒಮ್ಮೆ ಅವರನ್ನು ಕೇಳಿದ್ದೆ. ‘‘ನನಗೆ ನೆಹರೂ ತುಂಬ ಇಷ್ಟ. ಅವರನ್ನು ನೀವು ಯಾಕೆ ಕೆಲವು ಸರ್ತಿ ಹೀನಾಯವೆಂಬಂತೆ ಟೀಕಿಸುತ್ತೀರಿ?’’ ಹೀಗೆ ನಾನು ಕೇಳಲು ಮುಖ್ಯ ಕಾರಣ ಗಾಂಧೀಜಿ ಸತ್ತಾಗ ಅವರ ಶವದ ಮೆರವಣಿಗೆಯಲ್ಲಿ ನೆಹರೂ ಕೂಡ ಗಾಂಧಿಯ ಶವದ ಬಳಿ, ಸ್ವಂತ ಮಗ ಕುಳಿತಿರಬೇಕಾದ್ದಲ್ಲಿ ಕೂತಿದ್ದರೆಂಬುದು. ಲೋಹಿಯಾ ಒಂದು ಭಾಷಣದಲ್ಲಿ ಹೀಗೆ ಕೂರಬೇಕಾದವರು ಗಾಂಧಿ ಕುಟುಂಬದವರೇ ಹೊರತು ನೆಹರೂ ಅಲ್ಲ. ಆದರೆ ತಾನೊಬ್ಬ ಉತ್ತರಾಧಿಕಾರಿ ಎಂಬುದನ್ನು ಸ್ಥಾಪಿಸಿಕೊಳ್ಳಲು ಶೋಕದ ಸಮಯದಲ್ಲೂ ಅವರು ಮರೆಯಲಿಲ್ಲ ಎಂದು ಕಟುನುಡಿಯಲ್ಲಿ ಟೀಕಿಸಿದ್ದರು. ನೆಹರೂ ಯುಗದಲ್ಲಿ ಕಣ್ಣುಬಿಟ್ಟಿದ್ದ ನನಗೆ ಈ ಮಾತುಗಳು ಅನಗತ್ಯ ಕ್ರೌರ್ಯವೆನ್ನಿಸಿ ಶಾಕ್ ಕೊಟ್ಟಿತ್ತು. ಲೋಹಿಯಾ ನನ್ನ ದೂರನ್ನು ಸಾವಧಾನದಿಂದ ಕೇಳಿಸಿಕೊಂಡು, ‘‘ನೆಹರೂ ಬಗ್ಗೆ ನಾನು ತುಂಬ ಒಳ್ಳೆಯದನ್ನು ಹೇಳುವುದಿದೆ, ಅವರು ಸತ್ತ ಮೇಲೆ ಅವರ ಕುಟುಂಬದವರು ಗದ್ದುಗೆಯನ್ನು ಏರುವುದಿಲ್ಲ ಎಂದು ಖಚಿತವಾದ ಮೇಲೆ ಹೇಳುತ್ತೇನೆ’’ ಎಂದಿದ್ದರು. ಹೀಗೆ ಲೋಹಿಯಾರವರು ಬಹಳ ಜನರಿಗೆ ಅಪ್ರಿಯವಾದದ್ದನ್ನು ಹೇಳುತ್ತಲೇ ಹೋದರು. ಲೋಹಿಯಾ ಜೊತೆ ಇರಲಾರದೆ ಬೇರೆಯಾದ ಜಯಪ್ರಕಾಶ ನಾರಾಯಣರು ಕೊನೆ ಕೊನೆಯಲ್ಲಿ ಒಂದು ಮಾತು ಹೇಳಿದ್ದು ನೆನಪಾಗುತ್ತದೆ. ‘‘ಇಡೀ ಭಾರತದಲ್ಲಿ ಒಂದು ನೈಜ ವಿರೋಧ ಪಕ್ಷವನ್ನು ಕಟ್ಟಲು ನೋಡಿದವರೆಂದರೆ ಇಬ್ಬರೇ, ಒಬ್ಬರು ರಾಜಾಜಿ ಮತ್ತು ಇನ್ನೊಬ್ಬರು ಲೋಹಿಯಾ.’’ ಅಂದರೆ ನೆಹರೂರನ್ನು ವಿರೋಧಿಸದೆ ವಿರೋಧ ಪಕ್ಷ ಕಟ್ಟಲು ಸಾಧ್ಯವಿರಲಿಲ್ಲವೆಂದು ನೆಹರೂರಿಗೆ ತುಂಬ ಪ್ರಿಯರಾದ ಜಯಪ್ರಕಾಶರು ಹೇಳಿದ್ದರು. ಯಾಕೆಂದರೆ ಭಾರತದಲ್ಲಿ ಇದ್ದುದು ಎರಡೇ ಬಗೆಯ ಯೋಚನೆ, ಒಂದು ನೆಹರೂ ಬಗೆಯದು, ಇನ್ನೊಂದು ಗಾಂಧಿ ಬಗೆಯದು. ಕೈಗಾರೀಕರಣವನ್ನು ಬಯಸುವ ಕಮ್ಯುನಿಸ್ಟರು ಕೂಡ ನೆಹರೂ ಕಡೆಯವರೇ, ಆದ್ದರಿಂದ ನೆಹರೂ, ಗಾಂಧಿಯನ್ನು ಸಂಪೂರ್ಣ ತೊರೆದವರೆಂದು ಲೋಹಿಯಾರಿಗೆ ಕಂಡರು.

ಇದನ್ನು ನಾನು ಒಮ್ಮೆ ರಾಮುಗಾಂಧಿಗೆ ಹೇಳಿದಾಗ ಅವರು ನನ್ನ ಮಾತನ್ನು ಒಪ್ಪಲಿಲ್ಲ. ‘ಗಾಂಧಿಯೇನಾದರೂ ತನ್ನ ಉತ್ತರಾಧಿಕಾರಿ ಪಟೇಲರೆಂದೋ ಅಥವಾ ರಾಜೇಂದ್ರ ಪ್ರಸಾದರೆಂದೋ ಹೇಳಿದ್ದರೆ ಇಡೀ ದೇಶ ಗಾಂಧಿ ನಂತರ ಅವರನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ಆಧುನಿಕತೆಯ ಸೌಲಭ್ಯಗಳಿಗೆ ಇಡೀ ದೇಶ ಹಸಿದು ಕಾದಿತ್ತು. ಅದನ್ನು ಸದ್ಯದಲ್ಲಿ ಪೂರೈಸಬಲ್ಲವನಾಗಿದ್ದವನು ನೆಹರೂ ಒಬ್ಬನೆ ಎಂದು ಗಾಂಧಿಗೆ ಗೊತ್ತಿತ್ತು. ಆದ್ದರಿಂದ ದೇಶದ ಸದ್ಯದ ಹಸಿವನ್ನು ನೆಹರೂ ಪೂರೈಸಲಿ, ಆದರೆ ನೆಹರೂರವರ ಹೃದಯದಲ್ಲಿ ತಾನಿದ್ದೇನೆ, ತನ್ನ ಕನಸನ್ನು ಅವನು ಸಂಪೂರ್ಣ ತಿರಸ್ಕರಿಸುವುದಿಲ್ಲ ಎಂದು ಗಾಂಧಿ ತಿಳಿದಿದ್ದರು. ನೆಹರೂರವರೇ ಅಲೌಕಿಕವಾಗಿ ಯೋಚಿಸಿದಾಗ ಗಾಂಧಿಗೆ ಹತ್ತಿರವಾಗುತ್ತಿದ್ದರು, ಆದರೆ ಲೌಕಿಕವಾಗಿ ಯೋಚಿಸಿದಾಗ ಪಾಶ್ಚಾತ್ಯರಿಗೆ ಹತ್ತಿರವಾಗುತ್ತಿದ್ದರು. ಹೀಗೆ ಭಾವುಕತೆಯಲ್ಲಿ ಭಾರತೀಯನೂ, ಲೌಕಿಕತೆಯಲ್ಲಿ ಪಾಶ್ಚಾತ್ಯನೂ ಆದ ನೆಹರೂ ಕೇವಲ ಎಡಬಿಡಂಗಿ ಎಂದು ಮಾತ್ರ ಗಾಂಧಿಗೆ ಕಾಣಲಿಲ್ಲ. ದಾರ್ಶನಿಕನಾದ ಗಾಂಧಿ ತನ್ನ ಕಾಲದ ಮಿತಿಯಲ್ಲಿ ಯಾರ ಮುಖೇನ ತನ್ನ ಆದರ್ಶವನ್ನು ಬಚ್ಚಿಟ್ಟುಕೊಂಡಾದರೂ ಕಾಪಾಡುವುದು ಸಾಧ್ಯ ಎಂದು ತಿಳಿದಿದ್ದರು.

ಗಾಂಧಿಯವರು ದೇಶದ ಒಟ್ಟು ಆಳ್ವಿಕೆಗೆ ಆಯ್ದದ್ದು ಶೂದ್ರ ಸಂಸ್ಕೃತಿಯನ್ನು, ಮಂತ್ರ ಹೇಳುವುದು ಅವರ ನಿತ್ಯ ಕರ್ಮವಲ್ಲ, ಪಾಯಿಖಾನೆಯನ್ನು ಎತ್ತುವುದು, ಹತ್ತಿಯಿಂದ ನೂಲುವುದು ಅವರ ನಿತ್ಯ ಕರ್ಮವಾಗಿತ್ತು. ಅಂದರೆ, ಹೆಂಗಸು ಮಾಡುವ ಕೆಲಸ ಮತ್ತು ಶೂದ್ರ ಮಾಡುವ ಕೆಲಸ ಅವರಿಗೆ ಪವಿತ್ರವೆನಿಸಿತು. ಇದನ್ನು ಮೊದಲು ಗಮನಿಸಿದವರು ಗೆಳೆಯ ಆಶಿಶ್ ನಂದಿ.

ಆದರೆ ಎಲ್ಲ ಕಾಲದಲ್ಲೂ ಯಾವುದೂ ನಾವು ಬಯಸಿದಂತೆಯೇ ಆಗುವುದಿಲ್ಲ. ಗಾಂಧಿ ರಾಜಕೀಯಕ್ಕೆ ಹೊಸ ಮುಖಗಳನ್ನು ತಂದರು. ಹಾಗೆಯೇ ಇನ್ನಷ್ಟು ಹೊಸ ಮುಖಗಳನ್ನು ತಂದವರೆಂದರೆ ಸಂಜಯ ಗಾಂಧಿ. ಈ ಎಲ್ಲ ಹೊಸ ಮುಖಗಳೂ ಭ್ರಷ್ಟವಾದವು. ಅವರಿಗೆ ಹೋಲಿಸಿದರೆ ಪಾರಂಪರಿಕ ಶ್ರದ್ಧೆಯ ಹಳೆ ಮುಖಗಳು ವೈಯಕ್ತಿಕ ನಡತೆಯಲ್ಲಿ ಶುದ್ಧರಾಗಿದ್ದರು. ಈ ಹೊಸ ರಾಜಕೀಯ ಪೀಳಿಗೆ (ಮುಲಾಯಂ, ಲಾಲೂ ಪ್ರಸಾದ್‌ರಂತಹವರು) ಭ್ರಷ್ಟರಾದರೂ ಪ್ರಜಾತಂತ್ರದ ಅಡಿಪಾಯ ವಿಶಾಲವಾಗುತ್ತ ಹೋಗುತ್ತದೆ ಎಂಬುದು ಸತ್ಯ. ಪಾಕಿಸ್ತಾನದ ದುರಂತವಿರುವುದು ಇಂತಹ ಪುಢಾರಿಗಳು ಅಲ್ಲಿ ಇಲ್ಲದೆ ಇರುವುದೂ ಆಗಿದೆ. ಇದೊಂದು ಪ್ರಜಾತಂತ್ರದಲ್ಲಿ ಅಡಗಿರುವ ವಿರೋಧಾಭಾಸ, ಆದ್ದರಿಂದ ಪಾಕಿಸ್ತಾನದಲ್ಲಿ ಸರ್ವಶಕ್ತರಾದ ಮಿಲಿಟರಿಯೇ ಎಷ್ಟು ಭ್ರಷ್ಟಗೊಂಡರೂ ಯಾವ ಅಂಕೆಗೂ ಸಿಲುಕದವರು. ಲೋಹಿಯಾ ಶೂದ್ರ ಜನಾಂಗದಿಂದ ಒಬ್ಬ ಕರ್ಪೂರಿ ಠಾಕೂರರನ್ನು, ಕಿಶನ್ ಪಟ್ನಾಯಕ್‌ರನ್ನು ಅಧಿಕಾರಕ್ಕೆ ತಂದರು. ಇದೊಂದು ಮುಂದೆ ನಿದರ್ಶನವಾಗಬಲ್ಲ ಮಹತ್ವದ ಘಟನೆ. ಆರೋಗ್ಯ ಸರಿ ಇದ್ದಿದ್ದರೆ ನನ್ನ ಪ್ರಕಾರ ಗೋಪಾಲಗೌಡನೂ ಅಂತಹ ಒಬ್ಬ ನಾಯಕನಾಗುತ್ತಿದ್ದ, ಗೆಳೆಯ ಪಟೇಲ ಸ್ವಂತ ಭ್ರಷ್ಟನಾಗಲಿಲ್ಲ. ಆದರೆ ಭ್ರಷ್ಟರ ಜೊತೆ ಹೊಂದಾಣಿಕೆ ಮಾಡಿಕೊಂಡ. ಇದು ನನ್ನ ಪಾಲಿಗೆ ಒಂದು ದುರಂತವೇ. ಈಗ ಕಾಲ ಹೇಗಿದೆಯೆಂದರೆ ನಾವೆಲ್ಲರೂ ನಮ್ಮ ಹಿಂದಿನ ಕಾಲ ಈಗಿನದ್ದಕ್ಕಿಂತ ಚೆನ್ನಾಗಿತ್ತು ಎಂದು ಹೇಳುತ್ತೇವೆ. ಇದಕ್ಕೊಂದು ಕತೆಯಿದೆ. ಒಬ್ಬ ದೋಣಿ ದಾಟಿಸುವವನಿದ್ದ. ಅವನು ದುಷ್ಟನಾಗಿದ್ದ. ಮೊಣಕಾಲುದ್ದ ನೀರಿರುವಲ್ಲಿಗೆ ತಂದು ದೋಣಿ ನಿಲ್ಲಿಸಿ ಪ್ರಯಾಣಿಕರನ್ನು ಇಳಿಯಿರಿ ಎನ್ನುತ್ತಿದ್ದ. ಅವನು ಸಾಯುವಾಗ ತನ್ನ ಮಗನನ್ನು ಕರೆದು ನನಗೊಂದು ಒಳ್ಳೆಯ ಹೆಸರನ್ನು ನೀನು ತರಬೇಕು ಎಂದ. ಮಗ ತಂದೆಯ ಮಾತನ್ನು ಶಿರಸಾವಹಿಸಿ ದೋಣಿಯಲ್ಲಿ ಕೂತವರನ್ನು ಮೊಣಕಾಲುದ್ದ ನೀರಿನಲ್ಲಿ ಇಳಿಸುವ ಬದಲು ಸೊಂಟದಷ್ಟು ನೀರಿರುವಲ್ಲಿ ಇಳಿಸಲು ಶುರುಮಾಡಿದ. ಆಗ ಎಲ್ಲರೂ ನಿಮ್ಮಪ್ಪನೇ ವಾಸಿ ಎಂದರು. ರಾಜಕಾರಣದಲ್ಲಿ ತೊಡಗಿದ ನನ್ನಂತಹವರ ಮನಸ್ಸಿಗೆ ಇದೊಂದು ಆಡಳಿತ ಕುಟುಂಬಗಳ ‘ರಾವಿ’ನಂತೆ ಕಾಣಿಸುತ್ತದೆ. ಆದರೆ ರಾವು ಕೂಡ ತೀರುವುದಿದೆ ಎಂಬುದು ಅಮೆರಿಕ ಮತ್ತು ಇಂಗ್ಲೆಂಡ್ ತರದ ದೇಶದ ಚರಿತ್ರೆಯಿಂದ ನಾವು ಕಾಣಬಹುದು.

ಈ ಬಗೆಯ ಚರಿತ್ರೆಯ ಚಲನೆಗೆ ಕೈ ಹಾಕಿದವರು ಲೋಹಿಯಾ. ಗಾಲಿಗಳು ಹೂತು ಹೋದ ಕೆಸರಿನಲ್ಲಿ ಚಲನೆ ಸಾಧ್ಯವಾಗುವುದು ಅಗತ್ಯಕ್ಕಿಂತ ಹೆಚ್ಚು ಶಕ್ತಿಯನ್ನು ಹಾಕಿ ಗಾಲಿಯನ್ನು ತಳ್ಳುವುದರಿಂದ. ಈ ಕಾರಣದಿಂದ ನೆಹರೂರವರಂತಹ ನೆಹರೂರವರನ್ನೇ ಲೋಹಿಯಾ ಅತಿಯಾಯಿತು ಎನಿಸುವಷ್ಟು ಟೀಕಿಸುತ್ತಿದ್ದುದು. ನಾನು ಒಪ್ಪಲಾರದ ಅತಿಯೆಂದರೆ, ಭಾರತ ಚೀನಾ ಜೊತೆಗಿನ ಜಗಳದಲ್ಲಿ ಅವಮಾನಿತವಾಗತೊಡಗಿದಾಗ ಕೆನಡಿಯಿಂದ ಒಂದು ಆಟಂಬಾಂಬನ್ನು ಪಡೆಯಬೇಕು ಎಂದು ಲೋಹಿಯಾ ಹೇಳಿದ್ದು, ಇದನ್ನು ನಾನು ಒಂದು ಅತಿಯಾಗಿಯೂ ಒಪ್ಪಲಾರೆ.

Writer - ಯು. ಆರ್. ಅನಂತಮೂರ್ತಿ

contributor

Editor - ಯು. ಆರ್. ಅನಂತಮೂರ್ತಿ

contributor

Similar News