×
Ad

ಚಿಲಿ : ಅಧ್ಯಕ್ಷೀಯ ಚುನಾವಣೆಯಲ್ಲಿ ಗ್ಯಾಬ್ರಿಯಲ್ ಬೋರಿಕ್ ಗೆ ಗೆಲುವು

Update: 2021-12-21 00:10 IST
photo:twitter/@gabrielboric

ಸ್ಯಾಂಟಿಯಾಗೊ, ಡಿ.20: ಸರಕಾರ ವಿರೋಧಿ ಪ್ರತಿಭಟನೆಯ ಸಂದರ್ಭ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ ಚಿಲಿಯ ಎಡಪಂಥೀಯ ಸಂಸದ ಗ್ಯಾಬ್ರಿಯಲ್ ಬೋರಿಕ್ ದೇಶದ ಮುಂದಿನ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಚುನಾವಣೆ ನಡೆದ 99% ಮತಗಟ್ಟೆಗಳ ಫಲಿತಾಂಶ ವರದಿಯಾಗಿದ್ದು ಗ್ಯಾಬ್ರಿಯಲ್ ಬೋರಿಕ್ 56% ಮತ ಪಡೆದಿದ್ದರೆ ಅವರ ಪ್ರತಿಸ್ಪರ್ಧಿ ಕನ್ಸರ್ವೇಟಿವ್ ಪಕ್ಷದ ಮುಖಂಡ ಜೋಸ್ ಆ್ಯಂಟೊನಿಯೊ ಕಾಸ್ಟ್ 44% ಮತ ಪಡೆದಿದ್ದಾರೆ ಎಂದು ಘೋಷಿಸಲಾಗಿದೆ. ಇದರೊಂದಿಗೆ 35 ವರ್ಷದ ಬೋರಿಕ್ ಚಿಲಿಯ ಅತ್ಯಂತ ಕಿರಿಯ ಅಧ್ಯಕ್ಷರೆಂಬ ಸಾಧನೆಯ ಹೊಸ್ತಿಲಲ್ಲಿದ್ದಾರೆ. ಫಲಿತಾಂಶ ಘೋಷಣೆಯಾದ ತಕ್ಷಣ ಸೋಲು ಒಪ್ಪಿಕೊಂಡಿರುವ ಕಾಸ್ಟ್, ಗೆಲವು ಪಡೆದ ಬೋರಿಕ್ರನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.

ಬೋರಿಕ್‌ಗೆ  ಸಂಪೂರ್ಣ ಸಹಕಾರ ನೀಡುವುದಾಗಿ ನಿರ್ಗಮಿತ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ವೀಡಿಯೊ ಸಂದೇಶ ರವಾನಿಸಿದ್ದಾರೆ. ಚಿಲಿಯ ಅಧ್ಯಕ್ಷನಾಗಿ ಆಯ್ಕೆಯಾಗಿದ್ದು ಈ ಸವಾಲಿನ ಕಾರ್ಯವನ್ನು ಉತ್ತಮವಾಗಿ ನಿರ್ವಹಿಸುತ್ತೇನೆ ಎಂದು ಫಲಿತಾಂಶ ಘೋಷಣೆಯಾದ ಬಳಿಕ ಟಿವಿ ವಾಹಿನಿಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಬೋರಿಕ್ ಹೇಳಿದ್ದಾರೆ.
 
ಮಾರ್ಚ್‌ನಲ್ಲಿ ಬೋರಿಕ್ ಅಧಿಕಾರ ವಹಿಸಲಿದ್ದಾರೆ. ಚಿಲಿಯಲ್ಲಿ ಕ್ಷಿಪ್ರ ಆರ್ಥಿಕ ಪ್ರಗತಿಗೆ ಉತ್ತೇಜನ ನೀಡಿದೆ ಎಂದು ಈ ಹಿಂದೆ ಪರಿಗಣಿಸಲಾಗಿದ್ದ ಮಾರುಕಟ್ಟೆ ಆಧಾರಿತ ಅರ್ಥವ್ಯವಸ್ಥೆ ಕ್ರಮೇಣ ಕುಸಿತದ ಹಾದಿಯಲ್ಲಿ ಸಾಗಿರುವ ಬಗ್ಗೆ ಜನತೆಯ ಆಕ್ರೋಶದ ಸಂಪೂರ್ಣ ಲಾಭ ಪಡೆದ ಬೋರಿಕ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ವಿಶ್ಲೇಷಿಸಲಾಗಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಬೋರಿಕ್ ಬೆಂಬಲಿಗರು ರಾಜಧಾನಿಯಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ ಎಂದು ಅಲ್ಜಝೀರಾ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News