ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿ ಫೋಟೋ ಪ್ರಶ್ನಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಕೇರಳ ಹೈಕೋರ್ಟ್

Update: 2021-12-21 07:37 GMT

ತಿರುವನಂತಪುರಂ: ಕೋವಿಡ್-19 ಲಸಿಕೆ ಪ್ರಮಾಣಪತ್ರಗಳಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ತೆಗೆಯಬೇಕೆಂದು ಕೋರಿ ಕೇರಳ ಹೈಕೋರ್ಟಿಗೆ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಇಂದು ನ್ಯಾಯಾಲಯ ವಜಾಗೊಳಿಸಿದೆ. ಈ ಅರ್ಜಿ ರಾಜಕೀಯ ಪ್ರೇರಿತ, ಕ್ಷುಲ್ಲಕ ಮತ್ತು ಪ್ರಚಾರಾಸಕ್ತಿಯ ಅರ್ಜಿ ಎಂದು ಹೇಳಿದ ನ್ಯಾಯಾಲಯ, ಅರ್ಜಿದಾರರಿಗೆ ರೂ. 1 ಲಕ್ಷ ದಂಡ ವಿಧಿಸಿದೆ.

ಅರ್ಜಿದಾರ ಪೀಟರ್ ಮ್ಯಾಲಿಪರಂಪಿಲ್ ಅವರು  ದಂಡ ಮೊತ್ತವನ್ನು ಆರು ವಾರಗಳೊಳಗಾಗಿ ಕೇರಳ ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ  ಠೇವಣಿಯಿಡಬೇಕೆಂದು ನ್ಯಾಯಮೂರ್ತಿ ಪಿ ವಿ ಕುಂಞಕೃಷ್ಣನ್ ತಮ್ಮ ಆದೇಶದಲ್ಲಿ ಹೇಳಿದ್ದಾರೆ. ಒಂದು ವೇಳೆ ದಂಡ ಮೊತ್ತ ಪಾವತಿಸಲು ವಿಫಲವಾದಲ್ಲಿ ಅರ್ಜಿದಾರರ ಸ್ವತ್ತುಗಳಿಂದ ಈ ಮೊತ್ತವನ್ನು ಪ್ರಾಧಿಕಾರ ವಸೂಲು ಮಾಡಬೇಕೆಂದು ನ್ಯಾಯಾಲಯ ಹೇಳಿದೆ.

ಇಂತಹ  ಕ್ಷುಲ್ಲಕ ಅರ್ಜಿಗಳು ನ್ಯಾಯಾಂಗದ ಸಮಯ ವ್ಯರ್ಥಗೊಳಿಸುತ್ತವೆ ಹಾಗೂ ಅವುಗಳನ್ನು ಮಾನ್ಯ ಮಾಡುವುದಿಲ್ಲ ಎಂದು ಜನರು ಮತ್ತು ಸಮಾಜಕ್ಕೆ ತಿಳಿಯುವಂತಾಗಲು ಈ ದಂಡ ವಿಧಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ನ್ಯಾಯಾಲಯದ ಮುಂದೆ ಸಾವಿರಾರು ಜಾಮೀನು ಅರ್ಜಿಗಳು, ಸಿವಿಲ್ ವ್ಯಾಜ್ಯಗಳು ಹಾಗೂ ಇತರ ಪ್ರಕರಣಗಳಿರುವಾಗ ಇಂತಹ ಅರ್ಜಿಗಳು ಸಮಯ ವ್ಯರ್ಥಗೊಳಿಸುತ್ತವೆ ಎಂದು ನ್ಯಾಯಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News