ಉತ್ತರಪ್ರದೇಶ ಚುನಾವಣಾ ಪ್ರಚಾರದ ಮಧ್ಯೆ ಸಂಚಲನ ಮೂಡಿಸಿದ ಮೋಹನ್ ಭಾಗವತ್, ಮುಲಾಯಂ ಸಿಂಗ್ ಯಾದವ್ ಫೋಟೊ

Update: 2021-12-21 09:03 GMT
Photo: Twitter/@BJP4UP

ಲಕ್ನೊ: ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಸಮಾಜವಾದಿ ಪಕ್ಷದ ಧುರೀಣ ಮುಲಾಯಂ ಸಿಂಗ್ ಯಾದವ್ ಇರುವ ಫೋಟೊವೊಂದು ಉತ್ತರ ಪ್ರದೇಶ ಚುನಾವಣಾ ಪ್ರಚಾರದ ನಡುವೆ ಹೊಸ ಸಂಚಲನ ಮೂಡಿಸಿದೆ.

ಮುಲಾಯಂ ಸಿಂಗ್ ಯಾದವ್ ಹಾಗೂ ಮೋಹನ್ ಭಾಗವತ್ ಅವರು ಸೋಮವಾರ ದಿಲ್ಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಮದುವೆಯ ಆರತಕ್ಷತೆಯಲ್ಲಿ ಭೇಟಿಯಾದರು. ಮುಲಾಯಂ ಸಿಂಗ್ ಅವರ ಪುತ್ರ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಆಪ್ತರನ್ನು ಗುರಿಯಾಗಿಸಿಕೊಂಡು ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ಎರಡು ದಿನಗಳ ನಂತರ ಈ ಭೇಟಿ ನಡೆದಿದೆ.

ಕೇಂದ್ರ ಸಚಿವ ಅರ್ಜುನ್ ಮೇಘವಾಲ್ ಟ್ವೀಟ್ ಮಾಡಿದ ಫೋಟೋದಲ್ಲಿ ಮುಲಾಯಂ ಸಿಂಗ್ ಮತ್ತು ಆರೆಸ್ಸೆಸ್ ಮುಖ್ಯಸ್ಥರು ಒಟ್ಟಿಗೆ ಕುಳಿತಿರುವುದು ಕಂಡುಬಂದಿದೆ.

ಕೆಲವೇ ಗಂಟೆಗಳ ನಂತರ ಸಮಾಜವಾದಿ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಟ್ವೀಟ್ ಮಾಡಿದೆ.

"ಹೊಸ ಎಸ್‌ಪಿ'ಯಲ್ಲಿ ಎಸ್ ಎಂದರೆ ‘ಸಂಘವಾದ್’ ಎಂದು ಹೇಳಲಾಗಿದೆಯೇ" ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಹಿಂದಿಯಲ್ಲಿ ತನ್ನ ಪೋಸ್ಟ್‌ನಲ್ಲಿ ವ್ಯಂಗ್ಯವಾಡಿದೆ.

"ಒಂದು ಚಿತ್ರವು ಬಹಳಷ್ಟು ಹೇಳುತ್ತದೆ" ಎಂದು ಉತ್ತರ ಪ್ರದೇಶದ ಬಿಜೆಪಿ ಹಿಂದಿಯಲ್ಲಿ ಟ್ವೀಟಿಸಿದೆ.

"ಕಾಂಗ್ರೆಸ್ ತನ್ನ ಮಿತ್ರಪಕ್ಷವಾದ ಎನ್‌ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ನಾಯಕರು ನೇತಾಜಿ (ಮುಲಾಯಂ ಸಿಂಗ್) ಅವರ ಆಶೀರ್ವಾದವನ್ನು ಕೋರಿದ ಕಾರ್ಯಕ್ರಮದ ಫೋಟೋವನ್ನು ಹಾಕಿದೆ. ಇದಕ್ಕೆ ಕಾಂಗ್ರೆಸ್ ಏನು ಹೇಳುತ್ತದೆ?" ಕಾಂಗ್ರೆಸ್ ಟ್ವೀಟ್‌ಗೆ ಸಮಾಜವಾದಿ ಪಕ್ಷ ಪ್ರತ್ಯುತ್ತರ ನೀಡಿದೆ.

ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ  ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಸೇರಿದಂತೆ ಅನೇಕ ಪ್ರಮುಖರು ಕಾಣಿಸಿಕೊಂಡಿದ್ದರೂ ಮುಂದಿನ ವರ್ಷದ ಆರಂಭದಲ್ಲಿ ಉತ್ತರಪ್ರದೇಶದಲ್ಲಿ ಚುನಾವಣೆಗಾಗಿ  ಹೈ-ವೋಲ್ಟೇಜ್ ಪ್ರಚಾರದ ಮಧ್ಯೆ ಈ  ಒಂದು ಚಿತ್ರವು ಹೆಚ್ಚು ಗಮನ ಸೆಳೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News